Homeಮನರಂಜನೆರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌ಗೆ 1 ವರ್ಷ ಜೈಲೇ ಗತಿ

ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌ಗೆ 1 ವರ್ಷ ಜೈಲೇ ಗತಿ

Renukaswamy murder case: Actor Darshan to spend 1 year in jail

ನವದೆಹಲಿ,ಮೇ 15- ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ ಅವರಿಗೆ ಸುಪ್ರೀಂ ಕೋರ್ಟ್‌ ಸದ್ಯಕ್ಕೆ ಜಾಮೀನು ನೀಡಲು ನಿರಾಕರಿಸಿದೆ. ಹೀಗಾಗಿ ಇನ್ನೂ ಒಂದು ವರ್ಷ ಕಾಲ ಅವರಿಗೆ ಪರಪ್ಪನ ಅಗ್ರಹಾರದ ಜೈಲು ಖಾಯಂ ವಾಸದ ಮನೆಯಾಗಲಿದೆ.

ಒಂದು ವರ್ಷದೊಳಗೆ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ ನ್ಯಾಯಾಲಯ ಅಲ್ಲಿಯವರೆಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.ಈ ಆದೇಶದಿಂದ ಮುಂದಿನ ವರ್ಷ ಮೇ 15ರವರೆಗೆ ದರ್ಶನ್‌ಗೆ ಜೈಲಿನಲ್ಲಿರುವುದು ಅನಿವಾರ್ಯವಾಗಿದೆ. ಒಂದು ವರ್ಷದ ಬಳಿಕವಷ್ಟೇ ಅವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್‌ ನಿರ್ದೇಶಿಸಿದೆ.

ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ನ್ಯಾ. ಪರ್ದಿವಾಲಾ ಮತ್ತು ನ್ಯಾ. ವಿಜಯ್‌ ಬಿಷ್ಣೋಯಿ ಅವರು ಪೀಠದಲ್ಲಿ ದರ್ಶನ್‌ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದರು.

ಮಧ್ಯಂತರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಬಳಿಕ ನ್ಯಾಯಮೂರ್ತಿಗಳು ತಿರಸ್ಕರಿಸಿ, ದರ್ಶನ್‌ ಪರ ವಕೀಲರಿಗೆ ಜಾಮೀನು ನೀಡಲು ತೀರಾ ಆತುರವಾಗುತ್ತಿದೆಯಲ್ಲವೇ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ನಾವು ಈ ಪ್ರಕರಣವನ್ನು ಬೇಗ ಮುಗಿಸುತ್ತೇವೆ. ಆದರೆ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ದರ್ಶನ್‌ ಪರ ಹಿರಿಯ ವಕೀಲ ಮುಕುಲ್‌ ರೋಹಟಗಿ ವಾದ ಮಂಡಿಸಿ, ಜೈಲಿನಲ್ಲಿ ದರ್ಶನ್‌ ಅವರನ್ನು ಕ್ವಾರಂಟೈನ್‌ ಸೆಲ್‌ನಲ್ಲಿ ಇರಿಸಲಾಗಿದ್ದು, ಯಾರೊಂದಿಗೂ ಮಾತನಾಡಲು ಅವಕಾಶ ನೀಡುತ್ತಿಲ್ಲ. ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಕೇವಲ ಗ್ಲಾಸ್‌‍ ತಡೆಗೋಡೆ ಮೂಲಕ ಅವಕಾಶ ನೀಡಲಾಗುತ್ತಿದೆ. 9 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಇತರ ಖೈದಿಗಳಿಂದ ತೊಂದರೆಯಾಗುತ್ತಿದೆ ಎಂದು ಜಾಮೀನು ನೀಡುವಂತೆ ಮಾಡಿಕೊಂಡ ಮನವಿಗೆ ನ್ಯಾಯಪೀಠ ಸೊಪ್ಪು ಹಾಕಲಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಕ್ವಾರಂಟೈನ್‌ ಸೆಲ್‌ ಕೂಡ ಜೈಲಿನ ಒಂದು ಭಾಗವೇ ಆಗಿದೆ. ಸ್ಪೆಷಲ್‌ ಟ್ರೀಟ್‌ಮೆಂಟ್‌ ಸಿಗಬಾರದು ಎಂಬ ಉದ್ದೇಶದಿಂದ ಅಲ್ಲಿ ಇರಿಸಿರಬಹುದು. ಜೈಲು ಮ್ಯಾನ್ಯುಯಲ್‌ ಪ್ರಕಾರ ಅಗತ್ಯ ಸೌಲಭ್ಯಗಳನ್ನು ನೀಡಲು ಸೂಚಿಸುತ್ತೇವೆ ಎಂದು ಹೇಳಿದರು.ಮುಕುಲ್‌ ರೊಹಟಗಿ ಅವರ ವಾದ ಮತ್ತು ಸರ್ಕಾರದ ಪರ ವಾದಗಳನ್ನು ಆಲಿಸಿದ ನ್ಯಾಯಾಲಯ ಸದ್ಯಕ್ಕೆ ಅರ್ಹತೆ ಆಧಾರದ ಮೇಲೆ ಜಾಮೀನು ನೀಡಲು ಸಾಧ್ಯವಿಲ್ಲ. ಏಕೆಂದರೆ ಜಾಮೀನು ತುಂಬಾ ಬೇಗ ಕೇಳುತ್ತಿದ್ದೀರಲ್ಲಾ ಎಂದು ಹೇಳಿ ಕೆಲ ಮಹತ್ವದ ಆದೇಶ ನೀಡಿ ಜಾಮೀನು ಅರ್ಜಿಯನ್ನು ಇತ್ಯರ್ಥಗೊಳಿಸಿತು.

ಒಂದು ವರ್ಷದ ಒಳಗೆ 60 ಸಾಕ್ಷ್ಯಗಳ ವಿಚಾರಣೆ ಮುಗಿಸಿ, ಆ ಬಳಿಕ ವಿಚಾರಣಾ ನ್ಯಾಯಾಲಯದಲ್ಲಿಯೇ ಆರೋಪಿ (ದರ್ಶನ್‌) ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಕ್ವಾರಂಟೈನ್‌ ಸೆಲ್‌ ಬಗ್ಗೆ ಯಾವುದೇ ಸೂಚನೆ ಅಥವಾ ಆದೇಶವನ್ನು ನೀಡುವುದಿಲ್ಲವೆಂದು ನ್ಯಾಯಮೂರ್ತಿಗಳು ಹೇಳಿದರು.ದರ್ಶನ್‌ ಈಗಾಗಲೇ 8 ತಿಂಗಳಿಂದ ಜೈಲಿನಲ್ಲಿದ್ದಾರೆ. ಜಾಮೀನು ಅರ್ಜಿ ತಿರಸ್ಕೃತವಾದ ಬೆನ್ನಲ್ಲೇ ದರ್ಶನ್‌ ಅಭಿಮಾನಿಗಳಲ್ಲಿ ನಿರಾಸೆ ವ್ಯಕ್ತವಾಗಿದೆ.

ಸುಪ್ರೀಂ ಆದೇಶದಲ್ಲಿ ಏನಿದೆ ? :
ಇಂದಿನಿಂದ ಒಂದು ವರ್ಷದೊಳಗೆ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಸಾಧ್ಯವಾದರೆ ದಿನಂಪ್ರತಿ ವಿಚಾರಣೆ ನಡೆಸಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು.ಒಂದು ವೇಳೆ ಒಂದು ವರ್ಷದ ಅವಧಿಯಲ್ಲಿ ವಿಚಾರಣೆ ಮುಗಿಯದಿದ್ದರೆ ಅಥವಾ ಟ್ರಯಲ್‌ನಲ್ಲಿ ಯಾವುದೇ ಪ್ರಗತಿ ಕಾಣದಿದ್ದರೆ, ಅರ್ಜಿದಾರರು ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು.

ಇನ್‌-ಚಾರ್ಜ್‌ ಕೋರ್ಟ್‌ನಲ್ಲಿ ವಿಚಾರಣೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ, ಸೆಷನ್ಸ್ ಕೋರ್ಟ್‌ಗೆ ಹೊಸ ನ್ಯಾಯಾಧೀಶರನ್ನು ನಿಯೋಜಿಸಲು ಹೈಕೋರ್ಟ್‌ಗೆ ಸೂಚನೆ ನೀಡಲಾಗಿದೆ.ಚಾರ್ಜ್‌ ಶೀಟ್‌ನಲ್ಲಿರುವ 272 ಸಾಕ್ಷಿಗಳ ಪೈಕಿ ಅತಿ ಪ್ರಮುಖವಾದ 60 ಸಾಕ್ಷಿಗಳ ವಿಚಾರಣೆಯನ್ನು ಮೊದಲು ಪೂರ್ಣಗೊಳಿಸಬೇಕು. ಜೈಲು ಮ್ಯಾನ್ಯುಯಲ್‌ ಪ್ರಕಾರ ದರ್ಶನ್‌ ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಜೈಲು ಸೂಪರಿಂಟೆಂಡೆಂಟ್‌ ಒದಗಿಸಬೇಕು.

RELATED ARTICLES

Latest News