Homeರಾಷ್ಟ್ರೀಯಬ್ರಿಕ್ಸ್‌ ಶೃಂಗಸಭೆಗೆ ಕ್ಷಣಗಣನೆ , ವಿಶ್ವ ನಾಯಕರ ಸಮಾಗಮಕ್ಕೆ ದೆಹಲಿ ಸಜ್ಜು

ಬ್ರಿಕ್ಸ್‌ ಶೃಂಗಸಭೆಗೆ ಕ್ಷಣಗಣನೆ , ವಿಶ್ವ ನಾಯಕರ ಸಮಾಗಮಕ್ಕೆ ದೆಹಲಿ ಸಜ್ಜು

ನವದೆಹಲಿ, ಸೆ.11: ಮಧ್ಯಪ್ರಾಚ್ಯ ಹಾಗೂ ಉಕ್ರೇನ್‌ನಲ್ಲಿ ಯುದ್ಧದ ಕಾರ್ಮೋಡ ಕವಿದಿರುವುದು ಸೇರಿದಂತೆ ಜಾಗತಿಕವಾಗಿ ಹಲವು ಸವಾಲುಗಳು ಎದುರಾಗಿರುವ ಅನಿಶ್ಚಿತತೆಯ ವಾತಾವರಣದಲ್ಲಿ 18ನೇ ಬ್ರಿಕ್ಸ್‌ ಶೃಂಗಸಭೆ ನಾಳೆಯಿಂದ ದೆಹಲಿಯ ಭಾರತ್‌ ಮಂಟಪದಲ್ಲಿ ಆರಂಭವಾಗಲಿದೆ.ಪಾಶ್ಚಿಮಾತ್ಯ ಶಕ್ತಿಗಳ ಪ್ರಾಬಲ್ಯವಿರುವ ಜಾಗತಿಕ ಸಂಸ್ಥೆಗಳಿಗೆ ಪರ್ಯಾಯವಾಗಿ ಪ್ರಮುಖ ಉದಯೋನ್ಮುಖ ಆರ್ಥಿಕತೆಗಳನ್ನು ಒಗ್ಗೂಡಿಸುವ ಉದ್ದೇಶದಿಂದ 2009ರಲ್ಲಿ ರಚನೆಯಾದ ಬ್ರಿಕ್ಸ್‌ ವೇದಿಕೆ ಇದೀಗ ಜಾಗತಿಕ ರಾಜಕಾರಣದಲ್ಲಿ ಮಹತ್ವದ ತಿರುವು ಪಡೆಯುತ್ತಿದೆ.

11 ಸದಸ್ಯ ರಾಷ್ಟ್ರಗಳ ಈ ಮಹತ್ವದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಸೇರಿದಂತೆ ಹಲವು ಪ್ರಮುಖ ನಾಯಕರು ದೆಹಲಿಗೆ ಆಗಮಿಸಿದ್ದಾರೆ.

2020ರ ಗಾಲ್ವಾನ್‌ ಕಣಿವೆ ಘರ್ಷಣೆಯ ಬಳಿಕ ಉಂಟಾಗಿದ್ದ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕ್ಸಿ ಜಿನ್‌ಪಿಂಗ್‌ ಅವರು ಹಲವು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿರುವುದು ಪ್ರಮುಖ ರಾಜತಾಂತ್ರಿಕ ಬೆಳವಣಿಗೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ನಾಯಕರೊಂದಿಗೆ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ವ್ಯಾಪಾರ, ಆರ್ಥಿಕ ಸಹಕಾರ, ಭದ್ರತೆ ಹಾಗೂ ಗಡಿ ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.

ಅಂತರ್ಗತ ಜಾಗತಿಕ ಆಡಳಿತ ಹಾಗೂ ಬಹುಪಕ್ಷೀಯತೆಯನ್ನು ಬಲಪಡಿಸುವುದು, ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಹಣದುಬ್ಬರದ ಸವಾಲುಗಳನ್ನು ಎದುರಿಸಲು ಪರಸ್ಪರ ವಾಣಿಜ್ಯ ಸಂಬಂಧಗಳನ್ನು ಬಲಪಡಿಸುವುದು ಸೇರಿದಂತೆ ಹಲವು ವಿಚಾರಗಳು ಶೃಂಗಸಭೆಯಲ್ಲಿ ಚರ್ಚೆಯಾಗಲಿವೆ. ಅಮೆರಿಕ ಹಾಗೂ ಇಸ್ರೇಲ್‌ ಸೇನಾ ಕಾರ್ಯಾಚರಣೆಗಳಿಂದ ಪ್ರಭಾವಿತವಾಗಿರುವ ಮಧ್ಯಪ್ರಾಚ್ಯ ಮತ್ತು ಉಕ್ರೇನ್‌ ಸಂಘರ್ಷದ ವಿಚಾರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಒಮ್ಮತ ಮೂಡಿಸುವ ಪ್ರಯತ್ನ ನಡೆಯಲಿದೆ.

ದೆಹಲಿಯಲ್ಲಿ ಬಿಗಿ ಭದ್ರತೆ

ಭಾರತ್‌ ಮಂಟಪದಲ್ಲಿ ನಡೆಯಲಿರುವ ಉನ್ನತ ಮಟ್ಟದ ಶೃಂಗಸಭೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ರಾಜಧಾನಿಯಾದ್ಯಂತ ಸುಮಾರು 15,000 ಪೊಲೀಸ್‌ ಸಿಬ್ಬಂದಿ, 200 ಅರೆಸೈನಿಕ ಪಡೆಗಳ ಕಂಪನಿಗಳು ಹಾಗೂ 500ಕ್ಕೂ ಅಧಿಕ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಭದ್ರತೆ ಮತ್ತು ಕಣ್ಗಾವಲಿಗಾಗಿ ನಿಯೋಜಿಸಲಾಗಿದೆ.

ವಿಐಪಿ ಗಣ್ಯರ ಸಂಚಾರದ ಹಿನ್ನೆಲೆಯಲ್ಲಿ ಮಥುರಾ ರಸ್ತೆ, ಜನಪಥ್‌, ಶಾಂತಿ ಮಾರ್ಗ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ವ್ಯತ್ಯಯ ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ.

ಪುಟಿನ್‌–ಮೋದಿ ಭೇಟಿ

ಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹದಗೆಟ್ಟಿರುವ ಸಂದರ್ಭದಲ್ಲಿ ಪುಟಿನ್‌ ಅವರ ಭಾರತ ಭೇಟಿ ಮಹತ್ವ ಪಡೆದುಕೊಂಡಿದೆ. ಭಾರತ–ರಷ್ಯಾ ಸಂಬಂಧಗಳಲ್ಲಿ ರಕ್ಷಣಾ ಸಹಕಾರದ ಜತೆಗೆ ಇಂಧನ, ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಪ್ರಮುಖ ಕ್ಷೇತ್ರಗಳಾಗಿವೆ.

ಮೋದಿ–ಪುಟಿನ್‌ ದ್ವಿಪಕ್ಷೀಯ ಮಾತುಕತೆಯಲ್ಲಿ ಈ ಕ್ಷೇತ್ರಗಳ ಸಹಕಾರ ವಿಸ್ತರಣೆಯ ಜತೆಗೆ ಉಕ್ರೇನ್‌ ಸಂಘರ್ಷ ಹಾಗೂ ಶಾಂತಿ ಪ್ರಯತ್ನಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ.

ಕ್ಸಿ ಭೇಟಿ: ಸಂಬಂಧ ಸುಧಾರಣೆಗೆ ಅವಕಾಶ?

2020ರ ಗಾಲ್ವಾನ್‌ ಗಡಿ ಘರ್ಷಣೆಯ ನಂತರ ಭಾರತ–ಚೀನಾ ಸಂಬಂಧಗಳಲ್ಲಿ ಉಂಟಾದ ಗಂಭೀರ ಬಿಕ್ಕಟ್ಟು ಹಲವು ವರ್ಷಗಳ ಕಾಲ ಮುಂದುವರಿದಿತ್ತು. ಗಡಿಪ್ರದೇಶದ ಉದ್ವಿಗ್ನತೆ, ವ್ಯಾಪಾರ ಅಸಮತೋಲನ ಮತ್ತು ಪರಸ್ಪರ ಅವಿಶ್ವಾಸವು ಉಭಯ ರಾಷ್ಟ್ರಗಳ ಸಂಬಂಧವನ್ನು ಸಂಕೀರ್ಣಗೊಳಿಸಿತ್ತು.

ಇತ್ತೀಚಿನ ವರ್ಷಗಳಲ್ಲಿ ಗಡಿ ಉದ್ವಿಗ್ನತೆ ಕಡಿಮೆ ಮಾಡುವ ಹಾಗೂ ಉನ್ನತ ಮಟ್ಟದ ಸಂಪರ್ಕವನ್ನು ಪುನಃಸ್ಥಾಪಿಸುವ ಪ್ರಯತ್ನಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕ್ಸಿ ಜಿನ್‌ಪಿಂಗ್‌ ಅವರ ದೆಹಲಿ ಭೇಟಿ ಹಾಗೂ ಮೋದಿ–ಕ್ಸಿ ಮಾತುಕತೆ ಉಭಯ ರಾಷ್ಟ್ರಗಳ ಸಂಬಂಧಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಬ್ರಿಕ್ಸ್‌ನ ನಿಜವಾದ ಪರೀಕ್ಷೆ: ಅನುಷ್ಠಾನ

ಡಾಲರ್‌ಗೆ ಪರ್ಯಾಯ ಅಥವಾ ಪಾಶ್ಚಿಮಾತ್ಯ ವ್ಯವಸ್ಥೆಗೆ ಪರ್ಯಾಯ ಎಂಬ ದೊಡ್ಡ ರಾಜಕೀಯ ಘೋಷಣೆಗಳಿಗಿಂತ ಪ್ರಾಯೋಗಿಕ ಆರ್ಥಿಕ ಸಹಕಾರಕ್ಕೆ ಈ ಬಾರಿ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಯಿದೆ.

ರಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳು ಪಾಶ್ಚಿಮಾತ್ಯ ಹಣಕಾಸು ನಿರ್ಬಂಧಗಳ ಅನುಭವದ ಹಿನ್ನೆಲೆಯಲ್ಲಿ ಪರ್ಯಾಯ ಪಾವತಿ ವ್ಯವಸ್ಥೆಗಳಿಗೆ ಒತ್ತು ನೀಡುತ್ತಿವೆ. ಆದರೆ ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಗಳು, ಕರೆನ್ಸಿಗಳು ಮತ್ತು ಕೇಂದ್ರ ಬ್ಯಾಂಕ್‌ಗಳ ನೀತಿಗಳು ಪರಸ್ಪರ ಭಿನ್ನವಾಗಿವೆ. ಹೀಗಾಗಿ ಘೋಷಣೆಗಳನ್ನು ಮೀರಿ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಬ್ರಿಕ್ಸ್‌ನ ಮುಂದಿರುವ ಪ್ರಮುಖ ಸವಾಲಾಗಿದೆ.

RELATED ARTICLES
spot_img

Latest News