Homeಅಂತಾರಾಷ್ಟ್ರೀಯಯುರೋಪ್‌ನಲ್ಲಿ ತೀವ್ರ ಬಿಸಿಗಾಳಿ: ಇಟಲಿಯ ನಗರಗಳಿಗೆ ರೆಡ್‌ ಅಲರ್ಟ್‌, ಆಸ್ಟ್ರಿಯಾದಲ್ಲಿ ದಾಖಲೆ ತಾಪಮಾನ

ಯುರೋಪ್‌ನಲ್ಲಿ ತೀವ್ರ ಬಿಸಿಗಾಳಿ: ಇಟಲಿಯ ನಗರಗಳಿಗೆ ರೆಡ್‌ ಅಲರ್ಟ್‌, ಆಸ್ಟ್ರಿಯಾದಲ್ಲಿ ದಾಖಲೆ ತಾಪಮಾನ

ರೋಮ್‌‍, ಆ.7- ಯುರೋಪ್‌ನಲ್ಲಿ ತೀವ್ರ ಬಿಸಿಗಾಳಿಯ ಅಬ್ಬರ ಮುಂದುವರಿದಿದ್ದು, ಇಟಲಿಯ ಎಲ್ಲಾ ಪ್ರಮುಖ ನಗರಗಳಿಗೆ ಅತ್ಯುನ್ನತ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ವಿಮಾನ ,ರೈಲು ಸೇವೆ ಸೇರಿ ಸಾರಿಗೆ ಸೇವೆ ತತ್ತರಿಸಿದೆ. ಆಸ್ಟ್ರಿಯಾದಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ ದಾಖಲಾಗಿದ್ದು, ಫ್ರಾನ್‌್ಸನಲ್ಲಿ ಕಾಡ್ಗಿಚ್ಚಿನ ಭೀತಿ ಹೆಚ್ಚಾಗಿದೆ. ಜರ್ಮನಿಯಲ್ಲಿ ನದಿಗಳ ನೀರಿನ ಮಟ್ಟ ಕುಸಿದಿರುವುದು ಸಾರಿಗೆ ವ್ಯವಸ್ಥೆಗೆ ತೊಂದರೆ ಉಂಟುಮಾಡಿದ್ದು, ಹಲವು ದೇಶಗಳಲ್ಲಿ ವಿದ್ಯುತ್‌ ಉತ್ಪಾದನೆ ಮತ್ತು ಸಾರ್ವಜನಿಕ ಸೇವೆಗಳ ಮೇಲೂ ಬಿಸಿಗಾಳಿಯ ಪರಿಣಾಮ ಕಾಣಿಸಿಕೊಂಡಿದೆ.

ಇಟಲಿಯ ಆರೋಗ್ಯ ಸಚಿವಾಲಯವು ದೇಶದ 27 ಪ್ರಮುಖ ನಗರಗಳಿಗೆ ಒಂದೇ ವೇಳೆ ರೆಡ್‌ ಅಲರ್ಟ್‌ ಘೋಷಿಸಿರುವುದು ಈ ವರ್ಷದ ಮೊದಲ ಘಟನೆ. ಈ ಎಚ್ಚರಿಕೆ ವಯೋವೃದ್ಧರು ಅಥವಾ ಅನಾರೋಗ್ಯಪೀಡಿತರಷ್ಟೇ ಅಲ್ಲದೆ, ಎಲ್ಲ ನಾಗರಿಕರಿಗೂ ಅನ್ವಯಿಸುತ್ತದೆ. ಜನರು ಮಧ್ಯಾಹ್ನದ ಬಿಸಿಲಿನಲ್ಲಿ ಹೊರಗೆ ಹೋಗದಂತೆ, ಸಾಕಷ್ಟು ನೀರು ಕುಡಿಯುವಂತೆ ಮತ್ತು ಸಾಧ್ಯವಾದಷ್ಟು ಮನೆಯೊಳಗೇ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಬಿಸಿಗಾಳಿಯಿಂದ ಪ್ರವಾಸೋದ್ಯಮಕ್ಕೂ ಪರಿಣಾಮ ಬಿದ್ದಿದ್ದು, ರೋಮ್‌ನ ಕೊಲೊಸಿಯಂ ಹಾಗೂ ಪ್ಯಾಂಥಿಯಾನ್‌ ಸೇರಿದಂತೆ ಪ್ರಮುಖ ಸ್ಮಾರಕಗಳ ರಾತ್ರಿ ವೇಳೆಯ ಕಾರ್ಯಾಚರಣೆಯನ್ನು ವಿಸ್ತರಿಸಲಾಗಿದೆ. ಕೊಲೊಸಿಯಂ ಪ್ರವೇಶದ್ವಾರಗಳಲ್ಲಿ ತಂಪು ನೀರಿನ ಮಂಜು ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿ ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗಿದೆ. ಟೈಬರ್‌ ನದಿಯ ತೀರದಲ್ಲಿ ಉಚಿತ ಅರ್ಬನ್‌ ಬೀಚ್‌‍ ವ್ಯವಸ್ಥೆ ಕಲ್ಪಿಸಿ, ಈಜುಕೊಳ, ನೀರಿನ ಕಾರಂಜಿ ಹಾಗೂ ನೆರಳಿನ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.

ಆಸ್ಟ್ರಿಯಾದ ಬ್ಯಾಡ್‌ ಡಾಯ್ಚ್‌‍-ಆಲ್ಟೆನ್‌ಬರ್ಗ್‌ ಗ್ರಾಮದಲ್ಲಿ 41.2 ಡಿಗ್ರಿ ಸೆಲ್ಸಿಯಸ್‌‍ ತಾಪಮಾನ ದಾಖಲಾಗಿದ್ದು, ಇದು ದೇಶದ ಇತಿಹಾಸದಲ್ಲೇ ಗರಿಷ್ಠವಾಗಿದೆ. ಸ್ಲೋವಾಕಿಯಾದಲ್ಲೂ 42.2 ಡಿಗ್ರಿ ಸೆಲ್ಸಿಯಸ್‌‍ ತಾಪಮಾನ ದಾಖಲಾಗಿದ್ದು, ಡ್ಯಾನ್ಯೂಬ್‌ ನದಿಯಲ್ಲಿ ನೀರಿನ ಮಟ್ಟ ಕುಸಿದ ಕಾರಣ ದೇಶದ ಅತಿದೊಡ್ಡ ಜಲವಿದ್ಯುತ್‌ ಘಟಕದ ಎಂಟರಲ್ಲಿ ಏಳು ಟರ್ಬೈನ್‌ಗಳನ್ನು ಸ್ಥಗಿತಗೊಳಿಸಲಾಗಿದೆ.
ಹಂಗೇರಿಯಲ್ಲಿ ಡ್ಯಾನ್ಯೂಬ್‌ ನದಿಯ ನೀರಿನ ಕೊರತೆಯಿಂದ ಅಣು ವಿದ್ಯುತ್‌ ಸ್ಥಾವರದ ಉತ್ಪಾದನೆ ತೀವ್ರವಾಗಿ ಕುಸಿದಿದ್ದು, ಸರ್ಕಾರ ವಿದ್ಯುತ್‌ ಉಳಿತಾಯ ಕ್ರಮಗಳನ್ನು ಜಾರಿಗೊಳಿಸಿದೆ. ಸಂಜೆ ಗರಿಷ್ಠ ಬೇಡಿಕೆಯ ವೇಳೆಯಲ್ಲಿ ವಿದ್ಯುತ್‌ ಬಳಕೆ ಕಡಿಮೆ ಮಾಡುವಂತೆ ಸಾರ್ವಜನಿಕರು ಮತ್ತು ಕೈಗಾರಿಕೆಗಳಿಗೆ ಸೂಚಿಸಲಾಗಿದೆ.

ಜರ್ಮನಿಯಲ್ಲಿ ರೈನ್‌ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ಒಳನಾಡು ಜಲಸಾರಿಗೆ ಹಾಗೂ ಕೈಗಾರಿಕೆಗಳಿಗೆ ತೊಂದರೆ ಉಂಟಾಗುವ ಆತಂಕ ವ್ಯಕ್ತವಾಗಿದೆ. ಫ್ರಾನ್‌್ಸನ ದಕ್ಷಿಣ ಭಾಗದಲ್ಲಿ ಭಾರಿ ಕಾಡ್ಗಿಚ್ಚಿನ ಅಪಾಯ ಮುಂದುವರಿದಿದ್ದು, ಈಗಾಗಲೇ 60 ಚದರ ಕಿಲೋಮೀಟರ್‌ಗೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟುಹೋಗಿದೆ. ವಿಜ್ಞಾನಿಗಳ ಪ್ರಕಾರ, ಹವಾಮಾನ ಬದಲಾವಣೆಯಿಂದ ಇಂತಹ ತೀವ್ರ ಬಿಸಿಗಾಳಿ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

RELATED ARTICLES
spot_img

Latest News