Homeಇದೀಗ ಬಂದ ಸುದ್ದಿಕೇಂದ್ರ ಸಚಿವ ಸ್ಥಾನಕ್ಕೆ ಹೆಚ್‌ಡಿಕೆ ಗುಡ್ ಬೈ..? ರಾಜ್ಯ ರಾಜಕಾರಣವೇ ಶಾಶ್ವತ...

ಕೇಂದ್ರ ಸಚಿವ ಸ್ಥಾನಕ್ಕೆ ಹೆಚ್‌ಡಿಕೆ ಗುಡ್ ಬೈ..? ರಾಜ್ಯ ರಾಜಕಾರಣವೇ ಶಾಶ್ವತ…

ಮೈಸೂರು, ಜೂ.19- ಜೆಡಿಎಸ್‌‍ ಪಕ್ಷದಲ್ಲಿರುವ ಹಿತಶತ್ರುಗಳು ಯಾರೆಂಬುದನ್ನು ಪತ್ತೆ ಮಾಡಬೇಕಿತ್ತು ಆ ಕಾರಣಕ್ಕಾಗಿ ನಮ ಶಾಸಕರ ಪಕ್ಷ ನಿಷ್ಠೆಯ ಪರೀಕ್ಷೆಗಾಗಿಯೇ ವಿಧಾನಪರಿಷತ್‌ ಚುನಾವಣೆಗೆ ನಮ್ಮ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಲಾಗಿತ್ತು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್‌ ಚುನಾವಣೆ ಫಲಿತಾಂಶದಿಂದ ಎಲ್ಲಾ ಸಂದೇಹಗಳಿಗೂ ಉತ್ತರ ದೊರೆತಿದೆ. ಜೊತೆಗೆ ಯಾರನ್ನೂ ಅತಿಯಾಗಿ ನಂಬಬಾರದು ಎಂಬ ಪಾಠವನ್ನು ಫಲಿತಾಂಶ ಕಲಿಸಿದೆ. ಚುನಾವಣೆಯಲ್ಲಿ ನಮ್ಮ ಪಕ್ಷದ ಯಾವ ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿಯೂ ಇದೆ ಎಂದರು.


ಶಾಸಕರು ಯಾವ ಕಾರಣಕ್ಕಾಗಿ ಅಡ್ಡಮತದಾನ ಮಾಡಿದ್ದಾರೆಂಬುದು ಗೊತ್ತಿದೆ. ಪಕ್ಷ ತೊರೆಯುವ ಹಂತದವರೆಗೂ ಚರ್ಚೆ ಮಾಡಿ ಅವರು ಅಡ್ಡಮತದಾನ ಮಾಡಿದ್ದಾರೆ. ಪಕ್ಷ ತೊರೆದು ಹೋಗುವವರು ಹೋಗಲಿ, ಪಕ್ಷವನ್ನು ಸಂಘಟಿಸುವುದು ಹೇಗೆ ಎಂಬುದು ಗೊತ್ತಿದೆ. ಯುವಕರ ಮೂಲಕ ಪಕ್ಷವನ್ನು ಪುನರ್‌ ಸಂಘಟನೆ ಮಾಡುವುದಾಗಿ ಹೇಳಿದರು.

ಕೇಂದ್ರದಲ್ಲಿರುವುದು ತಾತ್ಕಾಲಿಕ :
ಕೇಂದ್ರ ಸರ್ಕಾರದಲ್ಲಿ ಸಚಿವನಾಗಿರುವುದು ತಾತ್ಕಾಲಿಕ. ನನಗೆ ರಾಜ್ಯ ರಾಜಕಾರಣವೇ ಶಾಶ್ವತ. ಹೊಸದಾಗಿ ರಾಜ್ಯ ರಾಜಕಾರಣಕ್ಕೆ ಬರಬೇಕಾಗಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ನನ್ನ ಹಳೆಯ ಸ್ನೇಹಿತರು ಏನೇನೋ ಆಪಾದನೆ ಮಾಡುತ್ತಿದ್ದಾರೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪ್ಲೇವಿನ್‌ನಂತಹ ಲಾಟರಿ ನಿಷೇಧ ಮಾಡುವ ಸಂದರ್ಭದಲ್ಲಿ ಕೋಟ್ಯಂತರ ಆಫರ್‌ ನೀಡಿ ಹೋಟೆಲ್‌ನಲ್ಲಿ ಹಣ ತಂದು ಇಟ್ಟುಕೊಂಡಿದ್ದರು. ಅದನ್ನೆಲ್ಲಾ ನಾನು ಜನರ ಹಿತಕ್ಕಾಗಿ ಧಿಕ್ಕರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್‌ ಹಾಗೂ ವಿಧಾನಸಭೆಗೆ ಕೆಲವರಿಗೆ ಟಿಕೆಟ್‌ ನೀಡಿದಾಗ ಅವರಿಂದ ಪಕ್ಷಕ್ಕೆ ದೇಣಿಗೆ ಪಡೆದಿದ್ದೇನೆಯೇ ಹೊರತು ವೈಯಕ್ತಿಕ ಲಾಭಕ್ಕಾಗಿ ಪಕ್ಷದ ಟಿಕೆಟ್‌ ಮಾರಿಕೊಂಡಿಲ್ಲ ಎಂದು ಹೇಳಿದರು.

ಮುಗಿದ ಕಥೆ :
ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡರ ಹೆಸರನ್ನು ಪ್ರಸ್ತಾಪಿಸಬೇಡಿ. ಅದೆಲ್ಲಾ ಮುಗಿದು ಹೋದ ಕಥೆ. ಅವರು ಒಂದು ಕಾಲಲ್ಲ ಎರಡು ಕಾಲನ್ನೂ ಹೊರಗಿಟ್ಟಿದ್ದಾರೆ. ಈ ಹಿಂದೆ ಅವರ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರವೇ ಅಂತಿಮ. ಜಿ.ಟಿ.ದೇವೇಗೌಡರು ಯಾವ ಯಾವ ಸಂದರ್ಭದಲ್ಲಿ ಯಾವಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ಗೊತ್ತಿದೆ. ಅವರ ಪೂರ್ವಾಪರ ತಿಳಿದೇ ಈ ಬಾರಿ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಜಿ.ಟಿ.ದೇವೇಗೌಡರ ಮೇಲೆ ವ್ಯಾಮೋಹ ಇರುವುದು ಸತ್ಯ. ಆ ವ್ಯಾಮೋಹವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ನಾನು ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೋರಾಟ ನಿರಂತರ :
ಬಿಡದಿ ಟೌನ್‌ಶಿಪ್‌ ಯೋಜನೆ ವಿಚಾರದಲ್ಲಿ ನನ್ನ ಹೋರಾಟ ನಿರಂತರವಾಗಿದೆ. ರೈತರ ಜೊತೆ ಕಾನೂನಾತಕ ಮಾಡುತ್ತೇನೆ. ಬಿಡದಿ ಸೇರಿದಂತೆ 5 ಟೌನ್‌ಶಿಪ್‌ ನಿರ್ಮಾಣ ಮಾಡಲು ನಾನು ಮುಖ್ಯಮಂತ್ರಿಯಾಗಿದ್ದಾಗ ನಿರ್ಧಾರ ಮಾಡಿದ್ದು ಸತ್ಯ. ರೈತರ ವಿರೋಧ ವ್ಯಕ್ತವಾದ ಕೂಡಲೇ ಆ ಯೋಜನೆಯನ್ನು ಕೈಬಿಟ್ಟಿದ್ದೆ. ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ರೈತರ ಭೂಮಿಯನ್ನು ಲೂಟಿ ಮಾಡಲು ಬಿಡುವುದಿಲ್ಲ. ಮುಂದೆ ಸದನದಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

RELATED ARTICLES

Latest News