ವಾಷಿಂಗ್ಟನ್, ಮೇ 23- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರಿ ಇವಾಂಕಾ ಟ್ರಂಪ್ ಅವರ ಹತ್ಯೆಗೆ ಇರಾನ್ ಬೆಂಬಲಿತ ಉಗ್ರ ಸಂಘಟನೆ ಸಂಚು ರೂಪಿಸಿದ್ದ ಆಘಾತಕಾರಿ ಮಾಹಿತಿ ಇತ್ತೀಚೆಗೆ ಬಹಿರಂಗಗೊಂಡಿದೆ. ಇವಾಂಕಾ ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ ಆರೋಪಿಯನ್ನು 32 ವರ್ಷದ ಇರಾಕಿ ಪ್ರಜೆ ಮೊಹಮದ್ ಬಾಕರ್ ಸಾದ್ ದಾವೂದ್ ಅಲ್-ಸಾದಿ ಎಂದು ಗುರುತಿಸಲಾಗಿದೆ.
ಈತ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ನಿಂದ ತರಬೇತಿ ಪಡೆದಿದ್ದ ಉಗ್ರನಾಗಿದ್ದು, ಇರಾನ್ ಬೆಂಬಲಿತ ಕಟಾಯಿಬ್ ಹೆಜ್ಬೊಲ್ಲಾ ಎಂಬ ಭಯೋತ್ಪಾದಕ ಸಂಘಟನೆಯ ಹಿರಿಯ ಕಮಾಂಡರ್ ಆಗಿದ್ದಾನೆ. 2020ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ, ಇರಾನ್‌ನ ಶಕ್ತಿಶಾಲಿ ಸೇನಾ ಕಮಾಂಡರ್ ಆಗಿದ್ದ ಖಾಸಿಂ ಸುಲೈಮಾನಿಯನ್ನು ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ಈತ ಸಂಚು ರೂಪಿಸಿದ್ದನು.
ಅಲ್-ಸಾದಿಯ ತಂದೆ ಇರಾನ್ನ ಬ್ರಿಗೇಡಿಯರ್ ಜನರಲ್ ಆಗಿದ್ದರು. ತಂದೆಯ ಮರಣದ ನಂತರ ಖಾಸಿಂ ಸುಲೈಮಾನಿ ಈತನಿಗೆ ಮಾರ್ಗದರ್ಶಕ ಹಾಗೂ ತಂದೆಯ ಸಮಾನನಾಗಿದ್ದ. ಆತನ ಸಾವಿನಿಂದ ಕೆರಳಿದ ಅಲ್-ಸಾದಿ ಟ್ರಂಪ್ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳಲು ಪಣ ತೊಟ್ಟಿದ್ದ. ಆರೋಪಿಯ ಬಂಧನದ ವೇಳೆ ಫ್ಲೋರಿಡಾದಲ್ಲಿರುವ ಇವಾಂಕಾ ಟ್ರಂಪ್ ಮತ್ತು ಅವರ ಪತಿ ಜ್ಯಾರೆಡ್ ಕುಶ್ನರ್ ಅವರ 24 ಮಿಲಿಯನ್ ಮೌಲ್ಯದ ಐಷಾರಾಮಿ ನಿವಾಸದ ನಕ್ಷೆ ಪತ್ತೆಯಾಗಿದೆ.
ಅಲ್-ಸಾದಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇವಾಂಕಾ ಮನೆಯ ಮ್ಯಾಪ್ ಶೇರ್ ಮಾಡಿ, ನಿಮ ಅರಮನೆಗಳಾಗಲಿ ಅಥವಾ ಸೀಕ್ರೆಟ್ ಸರ್ವಿಸ್ ಪಡೆಯಾಗಲಿ ನಿಮನ್ನು ರಕ್ಷಿಸಲು ಸಾಧ್ಯವಿಲ್ಲ. ನಮ ಪ್ರತೀಕಾರ ಕೇವಲ ಸಮಯದ ಆಟವಷ್ಟೇ ಎಂದು ಅರೇಬಿಕ್‌ನಲ್ಲಿ ಬರೆದುಕೊಂಡಿದ್ದ. ಈ ಭೀಕರ ಸಂಚಿನ ಬೆನ್ನತ್ತಿದ ಅಮೆರಿಕದ ಗುಪ್ತಚರ ಸಂಸ್ಥೆಗಳ ಮಾಹಿತಿಯ ಆಧಾರದ ಮೇಲೆ, ಮೇ 15 ರಂದು ಟರ್ಕಿಯಲ್ಲಿ ಈ ಉಗ್ರನನ್ನು ಬಂಧಿಸಲಾಯಿತು.
ಬಂಧಿತ ಉಗ್ರ ಅಲ್-ಸಾದಿಯನ್ನು ಟರ್ಕಿಯಿಂದ ಅಮೆರಿಕಕ್ಕೆ ಹಸ್ತಾಂತರಿಸಲಾಗಿದ್ದು, ಸದ್ಯ ಆತನನ್ನು ಬ್ರೂಕ್ಲಿನ್‌ನ ಕಾವಲು ಜೈಲಿನಲ್ಲಿ ಏಕಾಂತ ಕಾರಾಗೃಹದಲ್ಲಿ ಇಡಲಾಗಿದೆ. ಯೂರೋಪ್‌ನಲ್ಲೂ ವಿಧ್ವಂಸಕ ಕೃತ್ಯ: ಈತ ಕೇವಲ ಇವಾಂಕಾ ಹತ್ಯೆಗೆ ಸಂಚು ರೂಪಿಸಿದ್ದು ಮಾತ್ರವಲ್ಲದೆ, ಯೂರೋಪ್ ಹಾಗೂ ಕೆನಡಾದಲ್ಲಿ ನಡೆದ ಸುಮಾರು 18 ಪ್ರಮುಖ ಉಗ್ರಗಾಮಿ ದಾಳಿ ಹಾಗೂ ಯತ್ನಗಳ ಮಾಸ್ಟರ್‌ಮೈಂಡ್ ಆಗಿದ್ದಾನೆ. ಈತ ಮಾರ್ಚ್ ತಿಂಗಳಲ್ಲಿ ಆಮ್ಸ್ಟರ್ಡ್ಯಾಮ್‌ನ ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲನ್ ಕಟ್ಟಡದ ಮೇಲೆ ಬಾಂಬ್ ದಾಳಿ, ಏಪ್ರಿಲ್‌ನಲ್ಲಿ ಲಂಡನ್‌ನಲ್ಲಿ ಇಬ್ಬರು ಯಹೂದಿಗಳ ಮೇಲೆ ಚಾಕು ಇರಿತ ಹಾಗೂ ಟೊರೊಂಟೊದಲ್ಲಿರುವ ಯುಎಸ್ ರಾಯಭಾರ ಕಚೇರಿ ಬಳಿ ಶೂಟೌಟ್ ನಡೆಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಟ್ರಂಪ್ ಮನೆತನ ಧ್ವಂಸದ ಶಪಥ: ಸುಲೈಮಾನಿ ಸಾವಿನ ನಂತರ ಈತ ತನ್ನ ಆಪ್ತರಲ್ಲಿ, ಟ್ರಂಪ್ ನಮ ಮನೆಯನ್ನು ಸುಟ್ಟಂತೆ, ನಾವು ಇವಾಂಕಳನ್ನು ಕೊಂದು ಟ್ರಂಪ್ ಸಾಮ್ರಾಜ್ಯವನ್ನೇ ಧ್ವಂಸ ಮಾಡಬೇಕು ಎಂದು ಹೇಳಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇವಾಂಕಾ ಟ್ರಂಪ್ ಅವರು 2009ರಲ್ಲಿ ಜ್ಯಾರೆಡ್ ಕುಶ್ನರ್ ಅವರನ್ನು ವಿವಾಹವಾಗುವ ಮುನ್ನ orthodox Judaism (ಯಹೂದಿ ಧರ್ಮ) ಕ್ಕೆ ಮತಾಂತರಗೊಂಡಿದ್ದರು. ಇರಾನ್ ಮೂಲದ ಉಗ್ರ ಸಂಘಟನೆಗಳಿಗೆ ಯಹೂದಿಗಳ ಮೇಲಿರುವ ದ್ವೇಷವೂ ಈಕೆಯನ್ನು ಗುರಿಯಾಗಿಸಲು ಪ್ರಮುಖ ಕಾರಣ ಎನ್ನಲಾಗಿದೆ.
ಮಾಧ್ಯಮಗಳ ಸ್ಫೋಟಕ ವರದಿ: ದಿ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯು ಅಮೆರಿಕದ ನ್ಯಾಯಾಂಗ ಇಲಾಖೆ ಹಾಗೂ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಈ ಸ್ಫೋಟಕ ವರದಿಯನ್ನು ಮೊದಲ ಬಾರಿಗೆ ಹೊರಹಾಕಿದೆ. ಡೊನಾಲ್ಡ್ ಟ್ರಂಪ್ ಅವರ ಮೇಲೆ ಈ ಹಿಂದೆ ನಡೆದಿದ್ದ ಹತ್ಯೆ ಯತ್ನಗಳ ಬೆನ್ನಲ್ಲೇ, ಈಗ ಅವರ ಪುತ್ರಿಯ ನಿವಾಸದ ಮೇಲೂ ಕಣ್ಗಾವಲು ಇಟ್ಟಿರುವುದು ಅಮೆರಿಕದ ಭದ್ರತಾ ಏಜೆನ್ಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬಿಗಿಗೊಂಡ ಭದ್ರತೆ: ಈ ಜಾಲ ಬಹಿರಂಗಗೊಂಡ ನಂತರ, ಇವಾಂಕಾ ಟ್ರಂಪ್ ಹಾಗೂ ಅವರ ಕುಟುಂಬಕ್ಕೆ ಅಮೆರಿಕದ ಸೀಕ್ರೆಟ್ ಸರ್ವಿಸ್ ಪಡೆ ಮತ್ತು ಸ್ಥಳೀಯ ಪೊಲೀಸರು ಅತ್ಯುನ್ನತ ಮಟ್ಟದ ಕಠಿಣ ಭದ್ರತೆಯನ್ನು ಒದಗಿಸಿದ್ದಾರೆ.
Iran-trained terrorist wanted to kill Trump’s daughter Ivanka
