ಚೆನ್ನೈ, ಮೇ.23- ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಉಳಿತಾಯ ಮಂತ್ರಕ್ಕೆ ಕಮಲ್ ಹಾಸನ್ ಬೆಂಬಲ ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ. ಮೋದಿ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಕಮಲ್ ಹಾಸನ್ ಅವರು ತಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿಗಳ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರುತ್ತಿರುವುದು ಕೇವಲ ಅಂಕಿ-ಅಂಶಗಳಲ್ಲ, ಅದು ನಮ್ಮ ಅಡುಗೆಮನೆಯಿಂದ ಹಿಡಿದು ರೈತನ ಹೊಲದವರೆಗೂ ಪರಿಣಾಮ ಬೀರುತ್ತದೆ ಎಂಬ ಕಟು ಸತ್ಯವನ್ನು ಕಮಲ್ ಬಿಚ್ಚಿಟ್ಟಿದ್ದಾರೆ.
ಇನ್‌ಸ್ಟಾದಲ್ಲಿ ಹಂಚಿಕೊಂಡಿರುವ ತಮ್ಮ ವಿಡಿಯೋದಲ್ಲಿ ಕಮಲ್ ಹಾಸನ್ ಅವರು ಭಾರತದ ಹೆಮ್ಮೆಯ ಇತಿಹಾಸವನ್ನು ನೆನಪಿಸಿಕೊಂಡ ರೀತಿ ರೋಮಾಂಚನ ಕಾರಿಯಾಗಿದೆ. 1962ರ ಚೀನಾ ಯುದ್ಧದ ಸಮಯದಲ್ಲಿ ಗಡಿಯಲ್ಲಿರುವ ಸೈನಿಕರಿಗಾಗಿ ಭಾರತದ ಸಾಮಾನ್ಯ ಕುಟುಂಬಗಳು ತಮ್ಮಲ್ಲಿದ್ದ ಚಿನ್ನವನ್ನು ದಾನ ಮಾಡಿದ್ದವು. 1965ರಲ್ಲಿ ಆಹಾರದ ಕೊರತೆ ಎದುರಾದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಒಂದು ಕರೆಗೆ ಓಗೊಟ್ಟು ಇಡೀ ದೇಶವೇ ವಾರಕ್ಕೆ ಒಂದು ಹೊತ್ತಿನ ಊಟವನ್ನು ಬಿಟ್ಟಿತ್ತು.
ನಮ್ಮ ಹಿರಿಯರು ದೇಶಕ್ಕಾಗಿ ಅಷ್ಟೊಂದು ದೊಡ್ಡ ತ್ಯಾಗ ಮಾಡಿರುವಾಗ, ನಮಗೆ ಇಂದು ಇಂಧನ ಉಳಿಸುವುದು ದೊಡ್ಡ ಕೆಲಸವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಮಾತುಗಳು ಪ್ರತಿಯೊಬ್ಬ ಭಾರತೀಯನ ಮೈ ರೋಮಾಂಚನಗೊಳಿಸುವಂತಿವೆ.ಸಿಂಗಾಪುರ ನಮಗೆ ಪಾಠವಾಗಲಿ!ಭಾರತ ಮಾತ್ರವಲ್ಲದೆ ವಿಶ್ವದ 60ಕ್ಕೂ ಹೆಚ್ಚು ದೇಶಗಳು ಈಗಾಗಲೇ ಇಂಧನ ಉಳಿತಾಯದ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ.
ಸಿಂಗಾಪುರದ ಉದಾಹರಣೆ ನೀಡಿದ ಕಮಲ್, ಮುಂಬರುವ ಕಠಿಣ ದಿನಗಳನ್ನು ಎದುರಿಸಲು ನಾವೆಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ಎಚ್ಚರಿಸಿದ್ದಾರೆ. ನಾವು ಇಂದು ಉಳಿಸುವ ಪ್ರತಿ ಯುನಿಟ್ ಇಂಧನವೂ ನಾಳಿನ ಬಲಿಷ್ಠ ಭಾರತಕ್ಕೆ ಅಡಿಪಾಯ ಎನ್ನುವ ಅವರ ಮಾತುಗಳು ಕೇವಲ ಸಲಹೆಯಲ್ಲ, ಅದು ಇಂದಿನ ತುರ್ತು ಅಗತ್ಯವಾಗಿದೆ ಎಂದಿದ್ಧಾರೆ.
ವಿಡಿಯೋದ ಕೊನೆಯಲ್ಲಿ ಜೈ ಹಿಂದ್ ಎನ್ನುತ್ತಾ, ಜಾಗತಿಕ ರಾಜಕೀಯದ ಬಿರುಗಾಳಿಯಲ್ಲಿ ಭಾರತವನ್ನು ಸುರಕ್ಷಿತವಾಗಿರಿಸಲು ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಬೇಕು ಎಂದು ಕಮಲ್ ಕರೆ ನೀಡಿದ್ದಾರೆ.
