ಹಾಸನ, ಫೆ.10: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರಗಳು ಸುಟ್ಟು ಹೋಗಿದ್ದು, ರೈತನ ಎಂಟು ವರ್ಷದ ಕನಸು ಕಮರಿ ಹೋಗಿರುವ ಘಟನೆ ತಾಲ್ಲೂಕಿನ ಕಮರಿಗೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಯರಾಮ್ ಅವರಿಗೆ ಸೇರಿದ ತೆಂಗಿನ ತೋಟಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ, ಸುಮಾರು 50ಕ್ಕೂ ಹೆಚ್ಚು ತೆಂಗಿನ ಮರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಎಂಟು ವರ್ಷಗಳಿಂದ ಮಗುವಿನಂತೆ ಪೋಷಿಸಿದ್ದ ತೆಂಗಿನ ಮರಗಳು ಇನ್ನು ಕೆಲವೇ ದಿನಗಳಲ್ಲಿ ಫಸಲು ನೀಡುವ ಹಂತದಲ್ಲಿದ್ದವು.
ತೋಟದಲ್ಲಿ ಸಂಗ್ರಹಿಸಿಟ್ಟಿದ್ದ ಒಣಗಿದ ಜೋಳಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಂಕಿಯ ಜ್ವಾಲೆ ಕ್ಷಣಾರ್ಧದಲ್ಲಿ ಇಡೀ ತೋಟಕ್ಕೆ ವ್ಯಾಪಿಸಿ ಹಚ್ಚಹಸಿರಾಗಿದ್ದ ತೆಂಗಿನ ಮರಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ.
ಬೇಸಿಗೆಯ ಕಠಿಣ ಪರಿಸ್ಥಿತಿಯಲ್ಲಿ ಟ್ಯಾಂಕರ್ ಮೂಲಕ ನೀರನ್ನು ತರಿಸಿ ಹೆಚ್ಚಿನ ವೆಚ್ಚ ಭರಿಸಿ ಗಿಡಗಳನ್ನು ಪೋಷಿಸಿಕೊಂಡು ಬಂದಿದ್ದ ರೈತ ಜಯರಾಮ್, ಕಣ್ಣೆದುರೇ ಮರಗಳು ಸುಟ್ಟು ಭಸವಾಗುತ್ತಿರುವುದನ್ನು ಕಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಫಸಲು ನೀಡುವ ಹಂತದಲ್ಲಿದ್ದ ಮರಗಳನ್ನು ಕಳೆದುಕೊಂಡು ನಮ್ಮ ಜೀವನವೇ ಸಂಕಷ್ಟಕ್ಕೆ ಸಿಲುಕಿದೆ. ನಾವು ಬೀದಿಗೆ ಬೀಳುವ ಸ್ಥಿತಿ ಬಂದಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಘಟನೆಯ ಕುರಿತು ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
