Homeರಾಷ್ಟ್ರೀಯವೇಶ್ಯಾವಾಟಿಕೆ ಕೇಂದ್ರದಲ್ಲಿ ಘರ್ಷಣೆ: ಯುವಕ ಸಾವು, ಆರು ಮಂದಿ ಬಂಧನ

ವೇಶ್ಯಾವಾಟಿಕೆ ಕೇಂದ್ರದಲ್ಲಿ ಘರ್ಷಣೆ: ಯುವಕ ಸಾವು, ಆರು ಮಂದಿ ಬಂಧನ

ತ್ರಿಶೂರ್‌,ಜೂ. 21-ಕೇರಳದ ತ್ರಿಶೂರ್‌ ನಗರದಲ್ಲಿರುವ ಶಂಕಿತ ವೇಶ್ಯಾವಾಟಿಕೆ ಕೇಂದ್ರವೊಂದರಲ್ಲಿ ನಡೆದ ಘರ್ಷಣೆಯಲ್ಲಿ ಒಡಿಶಾ ಮೂಲದ ಯುವಕನೊಬ್ಬ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪುರುಷರು ಹಾಗೂ ನಾಲ್ವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಮೃತನನ್ನು ಒಡಿಶಾದ ರಾಯಗಡಾ ಜಿಲ್ಲೆಯ ಡಂಗಾಸಿಲ್‌ ಗ್ರಾಮದ ನಿವಾಸಿ ದಾನಪತಿ ನಾಯಕ್‌ (27) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆತನ ಸ್ನೇಹಿತರಾದ ಮಕ್ಕರಾ ಮಾಝಿ (21) ಮತ್ತು ತ್ರಿನಾಥ್‌ ಮಾಝಿ (23) ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಜೂನ್‌ 18ರ ರಾತ್ರಿ ತ್ರಿಶೂರ್‌ ನಗರದ ಮಧ್ಯಭಾಗದಲ್ಲಿರುವ ಕೋರಪತ್‌ ಲೇನ್‌ನ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ದಾನಪತಿ ನಾಯಕ್‌ ಮತ್ತು ಆತನ ಇಬ್ಬರು ಸ್ನೇಹಿತರು ಆ ಮನೆಗೆ ಭೇಟಿ ನೀಡಿದ್ದರು. ಮನೆ ಬಿಟ್ಟು ಹೊರಡುವ ವೇಳೆ ತಾವು ನೀಡಿದ್ದ ಹಣವನ್ನು ಹಿಂದಿರುಗಿಸುವಂತೆ ಅವರು ಕೇಳಿದ್ದು, ಇದರಿಂದ ಮನೆಯಲ್ಲಿದ್ದವರೊಂದಿಗೆ ವಾಗ್ವಾದ ಉಂಟಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ವಾಗ್ವಾದ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆ ಸಂಭವಿಸಿದೆ.

ಘರ್ಷಣೆ ವೇಳೆ ಮನೆಯಲ್ಲಿದ್ದವರು ಮೂವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಎಫ್‌ಐರ್ಆ ಪ್ರಕಾರ, ಆರೋಪಿಗಳಲ್ಲಿ ಒಬ್ಬ ವ್ಯಕ್ತಿ ಉಕ್ಕಿನ ಬಳೆಯಿಂದ (ಸ್ಟೀಲ್‌ ಬಳೆ) ದಾನಪತಿ ನಾಯಕ್‌ ಅವರ ತಲೆಗೆ ಹಲ್ಲೆ ನಡೆಸಿದ್ದು, ಇದರಿಂದ ಅವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ನಾಯಕ್‌ ಅವರನ್ನು ಸ್ನೇಹಿತರು ತ್ರಿಶೂರ್‌ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಈ ಕೇಂದ್ರವು ಮುಖ್ಯವಾಗಿ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆಯ ಪ್ರಕಾರ, ಸುಮಾರು ಆರು ತಿಂಗಳ ಹಿಂದೆ ಈ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಒಡಿಶಾ ಮೂಲದ ಬಿಚು ನಾಯಕ್‌ ಎಂಬಾತ ಈ ಕೇಂದ್ರವನ್ನು ನಡೆಸುತ್ತಿದ್ದಾನೆ ಎಂದು ಶಂಕಿಸಲಾಗಿದ್ದು, ಆತ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.

ಮನೆಯಲ್ಲಿದ್ದ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಮೂಲದ ಮಹಿಳೆಯರು ವೇಶ್ಯಾವಾಟಿಕೆ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ತ್ರಿಶೂರ್‌ ಪೂರ್ವ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸವಿಸ್ತಾರ ತನಿಖೆ ಆರಂಭಿಸಿದ್ದಾರೆ.

RELATED ARTICLES
spot_img

Latest News