Homeಇದೀಗ ಬಂದ ಸುದ್ದಿಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ: ಕೊಲೆ ಆರೋಪಿಗೆ ಪೊಲೀಸರ ಗುಂಡೇಟು

ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ: ಕೊಲೆ ಆರೋಪಿಗೆ ಪೊಲೀಸರ ಗುಂಡೇಟು

ಮಂಡ್ಯ,ಜೂ.19- ಮಹಜರ್‌ಗೆ ಕರೆದೊಯ್ದಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ.
ಭೀಮನಹಳ್ಳಿ ಗ್ರಾಮದ ಮಹೇಶ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ. ಮೂಲತಃ ಮಳವಳ್ಳಿ ತಾಲ್ಲೂಕಿನ ರಾಮನಾಥಮೋಳೆ ಗ್ರಾಮದವನಾದ ಈತ ಹಾಲಿ ರಾಮನಗರ ನಿವಾಸಿಯಾಗಿದ್ದು, ಕೊಲೆ ಪ್ರಕರಣದಲ್ಲಿ ಕಿರುಗಾವಲು ಪೊಲೀಸರಿಂದ ಬಂಧಿತನಾಗಿದ್ದನು.

ಕೊಲೆಗೆ ಬಳಸಿದ್ದ ಚಾಕುವನ್ನು ಡಿ.ಹಲಸಹಳ್ಳಿ ಬಳಿಯ ಹುಲ್ಲೇಗಾಲ ನಾಲಾರಸ್ತೆ ಬದಿಯಲ್ಲಿ ಎಸೆದಿರುವುದಾಗಿ ಆರೋಪಿತಿಳಿಸಿದ್ದ. ಅದರಂತೆ ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲಾಗುತ್ತಿತ್ತು. ಈ ವೇಳೆ ಮೂತ್ರವಿಸರ್ಜನೆ ನೆಪದಲ್ಲಿ ರಸ್ತೆ ಬದಿಗೆ ಹೋದ ಆರೋಪಿ, ಅಲ್ಲೇ ಬಿದ್ದಿದ್ದ ಬಿಯರ್‌ ಬಾಟಲಿಯಿಂದ ಮುಖ್ಯ ಆರಕ್ಷಕ ಪ್ರಭುಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

ಪಿಎಸ್‌‍ಐ ಅವರು ಆರೋಪಿಗೆ ಎಚ್ಚರಿಕೆ ನೀಡಿದರೂ ಆತ ಲೆಕ್ಕಿಸದೆ ಮತ್ತೆ ಹಲ್ಲೆ ನಡೆಸಿದಾಗ ಆತರಕ್ಷಣೆಗಾಗಿ ಪಿಎಸ್‌‍ಐ ರವಿಕುಮಾರ್‌ ಅವರು ಹಾರಿಸಿದ ಗುಂಡು ಆರೋಪಿಯ ಕಾಲಿಗೆ ತಗುಲಿ ಆತ ಕುಸಿದು ಬಿದ್ದಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದು ಪಟ್ಟಣದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಹೆಚ್‌.ಸಿ ಪ್ರಭುಸ್ವಾಮಿ ಅವರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಎಸ್‌‍ಪಿ ಡಾ. ವಿ.ಜೆ. ಶೋಭಾರಾಣಿ ಮಾತನಾಡಿ, ಸ್ಥಳ ಮಹಜರು ವೇಳೆ ಆರೋಪಿ ಪೊಲೀಸ್‌‍ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಆತನನ್ನುಬಂಧಿಸಲಾಗಿದೆ ಎಂದು ತಿಳಿಸಿದರು. ಪ್ರಕರಣದ ತನಿಖೆ ಮುಂದುವರಿದಿದೆ.

RELATED ARTICLES

Latest News