Homeರಾಷ್ಟ್ರೀಯರಾಮನ ದೇಣಿಗೆ ಲೂಟಿ ಪ್ರಕರಣದ ವಿಚಾರಣೆ ತೀವ್ರಗೊಳಿಸಿದ ಎಸ್‌‍ಐಟಿ

ರಾಮನ ದೇಣಿಗೆ ಲೂಟಿ ಪ್ರಕರಣದ ವಿಚಾರಣೆ ತೀವ್ರಗೊಳಿಸಿದ ಎಸ್‌‍ಐಟಿ

ಲಕ್ನೋ, ಜೂ.18- ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣದ ತನಿಖೆಯನ್ನು ಎಸ್‌‍ಐಟಿ ತೀವ್ರಗೊಳಿಸಿದೆ. ಇದುವರೆಗೂ ಟ್ರಸ್ಟ್‌ ಪದಾಧಿಕಾರಿಗಳು, ಸಿಬ್ಬಂದಿ ಸೇರಿ 42 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. 2021ರಿಂದ ಇಲ್ಲಿಯವರೆಗಿನ ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ಜೊತೆಗೆ, ನೇಮಕಾತಿ ಪ್ರಕ್ರಿಯೆ, ದೇಣಿಗೆ ಸ್ವೀಕರಿಸುವ ಸಿಬ್ಬಂದಿಯ ಪೂರ್ವಾಪರ ವಿಚಾರಿಸಿ, ಹೊಣೆಗಾರಿಕೆಗಳ ಬಗ್ಗೆ ಪರಾಮರ್ಶಿಸಿದೆ. ಜೊತೆಗೆ, ದೇಣಿಗೆ ವಿಭಾಗದ ಮುಖ್ಯವಾಗಿ ಹಣ ಎಣಿಕೆ ಹಾಗೂ ಉಸ್ತುವಾರಿ ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡಿದೆ.

ಇನ್ನೂ, ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಪ್ರತಿಕ್ರಿಯಿಸಿ, ಎಸ್‌‍ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡ್ತೇವೆ. ಅಂದಹಾಗೆ, ಎಸ್‌‍ಐಟಿಯು 7 ದಿನಗಳ ಒಳಗೆ ಪ್ರಾಥಮಿಕ ವರದಿ ಹಾಗೂ 15 ದಿನಗಳ ಒಳಗೆ ಅಂತಿಮ ವರದಿಯನ್ನು ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಮೂರು ದಿನಗಳಿಂದ ದೇವಾಲಯದಲ್ಲೇ ಬೀಡುಬಿಟ್ಟಿರುವ ಎಸ್‌‍ಐಟಿ ತಂಡ ರಾಮ ಮಂದಿರಕ್ಕೆ ಸಂಬಂಧಿಸಿದ 42 ಸಿಬ್ಬಂದಿಯನ್ನು ವಿಚಾರಣೆ ನಡೆಸಿದೆ. ಜೊತೆಗೆ ನಿರ್ಮಾಣ ಉಸ್ತುವಾರಿ ಗೋಪಾಲ್‌ ರಾವ್‌ ಅವರನ್ನು ಸಹ ವಿಚಾರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಆನಂತರ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರೊಂದಿಗೆ ಸಂವಹನ ನಡೆಸಿ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದೆ. ಏನಿದು ಪ್ರಕರಣ?ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ಹಾಗೂ ಅದಾದ ಬಳಿಕ ದೇಣಿಗೆ ಲೂಟಿಯಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. 2021ರಲ್ಲಿ ರಾಮಮಂದಿರ ಟ್ರಸ್ಟ್‌ ಖರೀದಿಸಿದ ಭೂಮಿಯ ಬೆಲೆಯಲ್ಲಿ ಭಾರಿ ವ್ಯತ್ಯಾಸವಿದೆ, ಕೆಲವೇ ನಿಮಿಷಗಳಲ್ಲಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ ಟ್ರಸ್ಟ್‌ ಈ ಆರೋಪವನ್ನು ತಳ್ಳಿಹಾಕಿ, ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ಬ್ಯಾಂಕ್‌ ಮುಖಾಂತರವೇ ನಡೆದಿವೆ ಮತ್ತು ಮಾರುಕಟ್ಟೆ ದರದಲ್ಲೇ ಭೂಮಿ ಖರೀದಿಸಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು.

ಆನಂತರ ರಾಮಮಂದಿರದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಲೂಟಿ ಮಾಡಲು ಕೆಲವು ಸೈಬರ್‌ ವಂಚಕರು ನಕಲಿ ವೆಬ್‌ಸೈಟ್‌ಗಳು, ನಕಲಿ ಕ್ಯೂಆರ್‌ ಕೋಡ್‌ ಮತ್ತು ನಕಲಿ ಟ್ರಸ್ಟ್‌ ಖಾತೆಗಳನ್ನು ಸೃಷ್ಟಿಸಿದ್ದರು.
ಈ ಮೂಲಕ ಮುಗ್ಧ ಭಕ್ತರಿಂದ ಹಣ ವಸೂಲಿ ಮಾಡಲಾಗುತ್ತಿತ್ತು. ಇದರ ವಿರುದ್ಧ ಅಯೋಧ್ಯೆ ಪೊಲೀಸರು ಮತ್ತು ಸೈಬರ್‌ ಕ್ರೈಂ ವಿಭಾಗದವರು ಪ್ರಕರಣ ದಾಖಲಿಸಿಕೊಂಡು, ಹಲವು ವಂಚಕರನ್ನು ಈಗಾಗಲೇ ಬಂಧಿಸಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತನಗೆ ಬಂದಿರುವ ಪ್ರತಿಯೊಂದು ರೂಪಾಯಿ ದೇಣಿಗೆಗೂ ಲೆಕ್ಕಪತ್ರವನ್ನು ಇಟ್ಟಿದ್ದು, ಯಾವುದೇ ಅಧಿಕೃತ ದೇಣಿಗೆ ಲೂಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

RELATED ARTICLES
spot_img

Latest News