ಬೆಂಗಳೂರು,ಮೇ 4- ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆಮತಗಳ ಮರು ಎಣಿಕೆ ವೇಳೆ ಮತಗಳನ್ನು ತಿದ್ದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಶಾಸಕ ಡಿ.ಎನ್.ಜೀವರಾಜ್ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರ ಅಂಚೆ ಮತದ ಏಜೆಂಟ್, ವಕೀಲರು ಹಾಗೂ ಕಾಂಗ್ರೆಸ್ ಮುಖಂಡರಾದ ಸುಧೀರ್ ಕುಮಾರ್ ಮುರೊಳ್ಳಿ ಅವರು ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಡಿ.ಎನ್.ಜೀವರಾಜ್, ಅಂದಿನ ಜಿಲ್ಲಾಧಿಕಾರಿ ರಮೇಶ ಹಾಗೂ ಚುನಾವಣಾಧಿಕಾರಿ ವೇದಮೂರ್ತಿ ಅವರ ವಿರುದ್ಧ ಜನಪ್ರತಿನಿಧಿ ಕಾಯ್ದೆ 143, 465, 468, 471, 170 ಬಿ, 149 ಮತ್ತು 136 ಸೆಕ್ಷನ್ ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
2023 ರ ಮೇ 13 ರಂದು ನಡೆದ ಮತ ಎಣಿಕೆ ಸಂದರ್ಭದಲ್ಲಿ ಟಿ.ಡಿ.ರಾಜೇಗೌಡ ಅವರಿಗೆ ಸಂದಾಯವಾಗಿದ್ದ ಮತಗಳನ್ನು ಮಾತ್ರ ಒಂದು ಕಟ್ಟಿನ 170 ಮತಗಳನ್ನು ತಿದ್ದುಪಡಿ ಮಾಡಿದ್ದಾರೆಂದು ಸುಧೀರ್ ಕುಮಾರ್ ಮುರೊಳ್ಳಿ ತಮ ದೂರಿನಲ್ಲಿ ಆರೋಪಿಸಿದ್ದರು.
ಮತ ಎಣಿಕೆ ನಂತರ ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಹಾಗೂ ಜಿಲ್ಲಾಧಿಕಾರಿ ರಮೇಶ ಹಾಗೂ ಇತರರು ಸಂಚು ರೂಪಿಸಿ ಪೆಟ್ಟಿಗೆಗಳ ಸೀಲುಗಳನ್ನು ತೆಗೆದು ಅಕ್ರಮ ಎಸಗಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಇದೇ ರೀತಿ ಅಕ್ರಮ ಎಸಗಿರುವ ಸಂಚಿನ ಬಗ್ಗೆ ಸ್ಟ್ರಾಂಗ್ ರೂಂ ಬಳಿಯಲ್ಲಿ 2026 ರ ಮೇ 2 ರಂದು ಬೆಳಿಗ್ಗೆ 7 ಗಂಟೆಗೆ ಮತ ಎಣಿಕೆ ಸಂದರ್ಭದಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ್ದೆವು. 257 ಬ್ಯಾಲೆಟ್‌ಗಳನ್ನು 2023 ರ ಮೇ 13 ರಂದು ಮತ ಎಣಿಕೆ ನಂತರವೇ ತಿದ್ದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದರು.
ಚುನಾವಣಾ ಪ್ರಕ್ರಿಯೆ ನಿರ್ಣಯ ಪುಸ್ತಕದಲ್ಲಿ ಬರೆದು ಎಲ್ಲರೂ ಒಪ್ಪಿ ಸಹಿ ಮಾಡಿರುವ ಸಂಗತಿಗಳೇ ಈಗ ವ್ಯತ್ಯಯವಾಗಿರುವುದನ್ನು ನೋಡಿದಲ್ಲಿ ಅಕ್ರಮ ಕೂಟ ಕಟ್ಟಿಕೊಂಡು ಒಳಸಂಚು ರೂಪಿಸಿ ಚುನಾವಣಾ ಅಕ್ರಮಗಳ ಮೂಲಕ ಬ್ಯಾಲೆಟ್‌ಗಳನ್ನು ವೈಯಕ್ತಿಕ ಲಾಭಕ್ಕಾಗಿ ತಿದ್ದಿದ್ದಾರೆಂದು ಸುಧೀರ್ ಕುಮಾರ್ ಮುರೊಳ್ಳಿ ದೂರಿನಲ್ಲಿ ಉಲ್ಲೇಖ ಮಾಡಿದ್ದರು.
ಈ ದೂರು ದಾಖಲಿಸಿಕೊಂಡಿದ್ದ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅವರು ಬಿಜೆಪಿ ಅಭ್ಯರ್ಥಿ ಜೀವರಾಜ್, ವೇದಮೂರ್ತಿ ಹಾಗೂ ರಮೇಶ್ ಅವರುಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.
