Homeರಾಜ್ಯಬಾಲಕೃಷ್ಣಗೆ ಸಚಿವ ಸ್ಥಾನ ಮಿಸ್..? ಮಂತ್ರಿಗಿರಿಗಾಗಿ ಒಕ್ಕಲಿಗ ಶಾಸಕರು ನಾನಾ ಕಸರತ್ತು

ಬಾಲಕೃಷ್ಣಗೆ ಸಚಿವ ಸ್ಥಾನ ಮಿಸ್..? ಮಂತ್ರಿಗಿರಿಗಾಗಿ ಒಕ್ಕಲಿಗ ಶಾಸಕರು ನಾನಾ ಕಸರತ್ತು

ಬೆಂಗಳೂರು, ಜೂ.20- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸದ್ಯದಲ್ಲೇ ತಮ್ಮ ಸಂಪುಟ ವಿಸ್ತರಣೆ ಮಾಡಲಿದ್ದು, ಸಂಪುಟ ಸೇರಲು ಒಕ್ಕಲಿಗ ಶಾಸಕರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸೇರಿದಂತೆ ಮೂವರು ಒಕ್ಕಲಿಗ ಶಾಸಕರು ಸಂಪುಟದಲ್ಲಿದ್ದಾರೆ. ಇನ್ನೂ ಮೂವರು ಶಾಸಕರಿಗೆ ಸಂಪುಟದಲ್ಲಿ ಅವಕಾಶ ದೊರೆಯುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೃಷ್ಣಭೈರೇಗೌಡ ಹಾಗೂ ರಾಮಲಿಂಗಾರೆಡ್ಡಿಯವರು ಡಿ.ಕೆ.ಶಿವಕುಮಾರ್‌ರವರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಾಜಿ ಸಚಿವರಾದ ಎನ್‌.ಚಲುವರಾಯಸ್ವಾಮಿ, ಟಿ.ಬಿ.ಜಯಚಂದ್ರ, ಡಾ.ಎಂ.ಸಿ.ಸುಧಾಕರ್‌, ಗುಬ್ಬಿ ಶಾಸಕ ಶ್ರೀನಿವಾಸ್‌‍, ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಗೋವಂದರಾಜನಗರ ಶಾಸಕ ಪ್ರಿಯಾಕೃಷ್ಣ, ಶ್ರೀರಂಗಪಟ್ಟಣದ ಶಾಸಕ ರಮೇಶ್‌ ಬಂಡಿ ಸಿದ್ದೇಗೌಡ ಸೇರಿದಂತೆ ಹಲವು ಒಕ್ಕಲಿಗ ಶಾಸಕರು ಸಂಪುಟ ಸೇರಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ರಾಮನಗರ ಜಿಲ್ಲೆಯಿಂದ ಡಿ.ಕೆ.ಶಿವಕುಮಾರ್‌ರವರು ಮುಖ್ಯಮಂತ್ರಿಯಾಗಿರುವುದರಿಂದ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಿದರೆ ಒಂದೇ ಜಿಲ್ಲೆಗೆ ಹೆಚ್ಚು ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಇಬ್ಬರು ಸಚಿವರಿದ್ದು, ಮತ್ತೊಬ್ಬರಿಗೆ ಅವಕಾಶ ಮಾಡಿಕೊಟ್ಟರೆ ಬೇರೆ ಜಿಲ್ಲೆಗೆ ಪ್ರಾತಿನಿಧ್ಯ ತಪ್ಪಿದಂತಾಗುತ್ತದೆ ಎಂಬ ಚರ್ಚೆಗಳು ಕಾಂಗ್ರೆಸ್‌‍ನಲ್ಲಿ ನಡೆಯುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತೆ ಸುಧಾಕರ್‌ರವರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಹಾಸನ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲದಿರುವುದರಿಂದ ಶಿವಲಿಂಗೇಗೌಡ ಅವರಿಗೆ ಅವಕಾಶ ಮಾಡಿಕೊಟ್ಟರೂ ಅಚ್ಚರಿ ಪಡಬೇಕಿಲ್ಲ. ಮಂಡ್ಯ ಜಿಲ್ಲೆಯಲ್ಲಿ ರಮೇಶ್‌ ಬಂಡಿ ಸಿದ್ದೇಗೌಡ ಅಥವಾ ಚೆಲುವರಾಯಸ್ವಾಮಿ ಇಬ್ಬರಲ್ಲಿ ಒಬ್ಬರಿಗೆ ಸಂಪುಟದಲ್ಲಿ ಸೇರ್ಪಡೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಆದರೆ ಪಿ.ಎಂ.ನರೇಂದ್ರಸ್ವಾಮಿಯವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಮಂಡ್ಯ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನವನ್ನು ನೀಡುವುದು ವಿರಳ ಎನ್ನಲಾಗುತ್ತಿದೆ.

ತುಮಕೂರು ಜಿಲ್ಲೆಯಿಂದ ಡಾ.ಜಿ.ಪರಮೇಶ್ವರ್‌ರವರು ಉಪಮುಖ್ಯಮಂತ್ರಿಯಾಗಿರುವುದರಿಂದ ಆ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕೇ, ಬೇಡವೇ ಎಂಬ ಜಿಜ್ಞಾಸೆಯೂ ನಡೆಯುತ್ತಿದ್ದು, ಜಯಚಂದ್ರ ಅಥವಾ ಶ್ರೀನಿವಾಸ್‌‍ ಅವರಿಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಗಳು ಇವೆ ಎಂದು ಉನ್ನತ ಮೂಲಗಳು ತಿಳಿಸಿವೆ. 2 ರಿಂದ 3 ಮಂದಿ ಒಕ್ಕಲಿಗ ಶಾಸಕರಿಗಷ್ಟೇ ಸಂಪುಟ ಸೇರಲು ಅವಕಾಶ ಇದೆ ಎಂದು ಕಾಂಗ್ರೆಸ್‌‍ ಪಾಳಯದಲ್ಲಿ ಚರ್ಚೆಯಾಗುತ್ತಿದ್ದು, ಯಾರಿಗೆ ಅದೃಷ್ಟ ಒಲಿಯುವುದೋ ಕಾದುನೋಡಬೇಕು.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್‌ ಅವರಲ್ಲದೆ ಎನ್‌.ಚಲುವರಾಯಸ್ವಾಮಿ, ಡಾ.ಎಂ.ಸಿ.ಸುಧಾಕರ್‌, ಕೃಷ್ಣಭೈರೇಗೌಡ, ರಾಮಲಿಂಗಾರೆಡ್ಡಿ, ವೆಂಕಟೇಶ್‌ ಹಾಗೂ ಎಚ್‌.ಕೆ.ಪಾಟೀಲ್‌ ಅವರು ಸಚಿವರಾಗಿದ್ದರು.

RELATED ARTICLES

Latest News