Wednesday, February 11, 2026
Homeಅಂತಾರಾಷ್ಟ್ರೀಯಇರಾನ್‌ನ ಬಂದರ್‌ ಅಬ್ಬಾಸ್‌‍ನಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಡವೊಂದರಲ್ಲಿ ಸ್ಫೋಟ, ಬಾಲಕಿ ಸಾವು

ಇರಾನ್‌ನ ಬಂದರ್‌ ಅಬ್ಬಾಸ್‌‍ನಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಡವೊಂದರಲ್ಲಿ ಸ್ಫೋಟ, ಬಾಲಕಿ ಸಾವು

Bandar Abbas blast: Girl dead as explosion shakes Iranian port city

ದುಬೈ,ಫೆ.1- ಇರಾನ್‌ನ ಬಂದರು ನಗರ ಬಂದರ್‌ ಅಬ್ಬಾಸ್‌‍ನಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 4 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಓರ್ವ ಭದ್ರತಾ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕರ್ತರು ಹೊತ್ತೊಯ್ಯುತ್ತಿರುವ ದೃಶ್ಯವನ್ನು ಮಾಧ್ಯಮಗಳು ಬಿತ್ತರಿಸಿವೆ.

ಪರ್ಷಿಯನ್‌ ಕೊಲ್ಲಿಯ ತುದಿದ್ವಾರವಾಗಿರುವ ಹೊರ್ಮುಜ್‌ ಜಲಸಂಧಿಯಲ್ಲಿ ಸಮರಾಭ್ಯಾಸ ನಡೆಸಲು ಇರಾನ್‌ ಯೋಜಿಸಿದ್ದು ಅದಕ್ಕೂ ಒಂದು ದಿನ ಮುನ್ನ ಈ ಸ್ಫೋಟ ಉಂಟಾಗಿದೆ. ಈ ಜಲಸಂಧಿಯ ಮೂಲಕವೇ ಸಮಗ್ರ ವಾಣಿಜ್ಯ ತೈಲದ ಐದನೇ ಒಂದರಷ್ಟು ಸರಕು ಸಾಗಾಣಿಕೆ ನಡೆಯುತ್ತದೆ.

ಬಂದರ್‌ ಅಬ್ಬಾಸ್‌‍ ನೆಲೆಗೊಂಡಿರುವ ಜಲಸಂಧಿಯಲ್ಲಿ ತನ್ನ ಸಮರನೌಕೆಗಳು ಅಥವಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಬೆದರಿಕೆ ಒಡ್ಡುವಂತಿಲ್ಲ ಎಂದು ಇರಾನ್‌ಗೆ ಅಮೆರಿಕ ಸೇನೆಯು ಈಗಾಗಲೇ ಎಚ್ಚರಿಕೆ ನೀಡಿತ್ತು.ಅನಿಲಸೋರಿಕೆಯೇ ಸ್ಫೋಟಕ್ಕೆ ಕಾರಣ ಎಂದು ಸ್ಥಳೀಯ ಅಗ್ನಿಶಾಮಕ ಅಧಿಕಾರಿಯೊಬ್ಬರು ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ ದೂರದರ್ಶನ ವರದಿ ಮಾಡಿದೆ.

ಎಂಟಸ್ತಿನ ಈ ಕಟ್ಟಡದಲ್ಲಿ ಘಟಿಸಿದ ಸ್ಫೋಟದಲ್ಲಿ ಕನಿಷ್ಠ ಪಕ್ಷ 14 ಜನರು ಗಾಯಗೊಂಡಿದ್ದಾರೆ. ಸ್ಫೋಟದ ಬಳಿಕ ಕಿಟಕಿ ಗಾಜುಗಳು ಛಿದ್ರವಾಗಿ ರಸ್ತೆಯ ಮೇಲೆ ಅವಶೇಷಗಳು ರಾಶಿಯಾಗಿ ಬಿದ್ದಿವೆ ಎಂದು ವರದಿಯಾಗಿದೆ.ಅನಿಲ ಸ್ಫೋಟ ಎಂದೇ ಶಂಕಿಸಲಾದ ಮತ್ತೊಂದು ಸ್ಫೋಟ ಅಹವಾಜ್‌ ನಗರದಲ್ಲಿ ಸಂಭವಿಸಿದ್ದು ಐದು ಮಂದಿ ಬಲಿಯಾಗಿದ್ದಾರೆ ಎಂದು ಸರ್ಕಾರಿ ಸುದ್ದಿಸಂಸ್ಥೆಯ ವರದಿ ತಿಳಿಸಿದೆ.

RELATED ARTICLES

Latest News