ವಾಷಿಂಗ್ಟನ್, ಜು.28- ಮತ್ತೆ ರಾಜತಾಂತ್ರಿಕ ಮಾತುಕತೆಗಳು ವಿಫಲವಾದರೆ ಇರಾನ್ ವಿರುದ್ಧ ಅತ್ಯಂತ ಗಂಭೀರ ಮಿಲಿಟರಿ ಕ್ರಮ ಕೈಗೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಟೆಹ್ರಾನ್‌ಗೆ ಮತ್ತೊಂದು ಅವಕಾಶ ನೀಡುವ ಉದ್ದೇಶದಿಂದ ನಡೆಸಬೇಕಿದ್ದ ಯೋಜಿತ ಮಿಲಿಟರಿ ದಾಳಿಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಕ್ಸಿಯೋಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಾವು ಇರಾನ್ ಜೊತೆ ಅತ್ಯಂತ ಆಳವಾದ ಮಾತುಕತೆ ನಡೆಸುತ್ತಿದ್ದೇವೆ. ಆದರೆ ಈ ರಾಜತಾಂತ್ರಿಕತೆಗೆ ನಾವು ಹೆಚ್ಚಿನ ಸಮಯ ನೀಡುವುದಿಲ್ಲ. ಮಾತುಕತೆ ಫಲಿಸದಿದ್ದರೆ ತಕ್ಷಣವೇ ಬಲವಾದ ಮಿಲಿಟರಿ ಕಾರ್ಯಾಚರಣೆಗೆ ಮರಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಓಮನ್ ಪ್ರಮುಖವಾಗಿ ನೇರ ಹಾಗೂ ಪರೋಕ್ಷ ಮಾತುಕತೆಗಳ ಮಧ್ಯಸ್ಥಿಕೆ ವಹಿಸುತ್ತಿದೆ. ಇದರ ಜೊತೆಗೆ ಕತಾರ್, ಪಾಕಿಸ್ತಾನ, ಈಜಿಪ್‌್ಟ ಹಾಗೂ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಹಿರಿಯ ಸಲಹೆಗಾರ ಜೇರೆಡ್ ಕುಶ್ನರ್ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ.
ಜಾಗತಿಕ ತೈಲ ಸಾಗಣೆಗೆ ಅತ್ಯಂತ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯನ್ನು ಸುಗಮ ಸಂಚಾರಕ್ಕೆ ಮುಕ್ತಗೊಳಿಸುವುದು ಮತ್ತು ಇರಾನ್ ಜೊತೆ ಹೊಸ ಪರಮಾಣು ಒಪ್ಪಂದ ರೂಪಿಸುವುದು ಈ ಮಾತುಕತೆಯ ಮುಖ್ಯ ಉದ್ದೇಶವಾಗಿದೆ.
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್‌ಮಿಲಿಟರಿ ಕ್ರಮ ಕೈಗೊಳ್ಳುವ ಮೊದಲು ಶಮನಕ್ಕೆ ಮತ್ತೊಂದು ಅವಕಾಶ ನೀಡಿ ಎಂದು ಮಧ್ಯಸ್ಥಿಕೆ ರಾಷ್ಟ್ರಗಳು ಕೋರಿದ ಹಿನ್ನೆಲೆಯಲ್ಲಿ ದಾಳಿಯನ್ನು ಅಮಾನತಿನಲ್ಲಿಡಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಒಂದೆಡೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಇಂದು ಮುಂಜಾನೆ ಉತ್ತರ ಇರಾಕ್‌ನ ಎರ್ಬಿಲ್‌ನಲ್ಲಿರುವ ಅಮೆರಿಕ ಕಾನ್ಸುಲೇಟ್ (ರಾಯಭಾರ ಕಚೇರಿ) ಬಳಿ ಇರಾನ್ ಬೆಂಬಲಿತ ಕನಿಷ್ಠ ನಾಲ್ಕು ಡ್ರೋನ್‌ಗಳು ಭೀಕರ ದಾಳಿ ನಡೆಸಿವೆ.
ದಾಳಿಯ ಪರಿಣಾಮವಾಗಿ ಖಲೀಫನ್ ಮತ್ತು ಸೊರಾನ್ ಪ್ರದೇಶಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಶಂಕಿತ ಇರಾನಿ ಡ್ರೋನ್ ದಾಳಿಗೆ ತಕ್ಷಣವೇ ತಿರುಗೇಟು ನೀಡಿದ ಅಮೆರಿಕ, ಎರ್ಬಿಲ್ ಆಕಾಶಭಾಗದಲ್ಲಿ 10 ಕ್ಕೂ ಹೆಚ್ಚು ಯುಎಸ್ ಯುದ್ಧವಿಮಾನಗಳು ಮತ್ತು ಡ್ರೋನ್‌ಗಳನ್ನು ಗಸ್ತು ತಿರುಗಲು ನಿಯೋಜಿಸಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಈ ಸಂಘರ್ಷ ಶಮನದ ಸೂಚನೆ ಸಿಗುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 92 ಡಾಲರ್‌ಗೆ ಇಳಿಕೆಯಾಗಿದ್ದವು. ಆದರೆ ಇರಾಕ್‌ನಲ್ಲಿ ಮತ್ತೆ ಡ್ರೋನ್ ದಾಳಿಗಳು ವರದಿಯಾಗಿರುವುದರಿಂದ ಇಂಧನ ಮಾರುಕಟ್ಟೆಯಲ್ಲಿ ಮತ್ತೆ ಅನಿಶ್ಚಿತತೆ ಮೂಡುವ ಲಕ್ಷಣಗಳು ಕಂಡುಬರುತ್ತಿವೆ.
