Homeರಾಷ್ಟ್ರೀಯಪುದುಚೇರಿಯ ತಟ್ಟಾಂಚಾವಡಿ ಉಪಚುನಾವಣೆಯಲ್ಲಿ AINRC ಗೆಲುವು

ಪುದುಚೇರಿಯ ತಟ್ಟಾಂಚಾವಡಿ ಉಪಚುನಾವಣೆಯಲ್ಲಿ AINRC ಗೆಲುವು

ಪುದುಚೇರಿ, ಅ. 9: ಪುದುಚೇರಿಯ ತಟ್ಟಾಂಚಾವಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತಾರೂಢ ಅಖಿಲ ಭಾರತ ಎನ್‌.ಆರ್‌. ಕಾಂಗ್ರೆಸ್‌‍ (ಎಐಎನ್‌ಆರ್‌ಸಿ) ಗೆಲುವು ಸಾಧಿಸಿದೆ. ಈ ಮೂಲಕ ಮುಖ್ಯಮಂತ್ರಿ ಹಾಗೂ ಪಕ್ಷದ ಸಂಸ್ಥಾಪಕ ಎನ್‌. ರಂಗಸಾಮಿ ಅವರ ಕ್ಷೇತ್ರದಲ್ಲಿನ ಪ್ರಭಾವ ಮತ್ತೊಮೆ ಸಾಬೀತಾಗಿದೆ.

ಎನ್‌ಡಿಎ ಮೈತ್ರಿಕೂಟದ ನೇತೃತ್ವ ವಹಿಸಿರುವ ಎಐಎನ್‌ಆರ್‌ಸಿ ಅಭ್ಯರ್ಥಿ ಅಶೋಕ್‌ ಆನಂದ್‌ ಅವರು ಕಾಂಗ್ರೆಸ್‌‍ ಅಭ್ಯರ್ಥಿ ಇ. ವಿನಯಾಗಂ ಅವರನ್ನು 8,482 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಅಶೋಕ್‌ ಆನಂದ್‌ 13,358 ಮತಗಳನ್ನು ಪಡೆದರೆ, ವಿನಯಾಗಂ 4,876 ಮತಗಳನ್ನು ಗಳಿಸಿದರು. ಡಿಎಂಕೆ ಅಭ್ಯರ್ಥಿ ಕೆ. ಸೇತು ಅಲಿಯಾಸ್‌‍ ಸೇತುಸೆಲ್ವಂ 2,664 ಮತಗಳನ್ನು ಪಡೆದರು ಎಂದು ಚುನಾವಣಾ ಆಯೋಗದ ಮಾಹಿತಿ ತಿಳಿಸಿದೆ.

ಒಟ್ಟು ನಾಲ್ಕು ಸುತ್ತುಗಳಲ್ಲಿ ಮತ ಎಣಿಕೆ ಪೂರ್ಣಗೊಂಡಿದ್ದು, ಬೆಳಿಗ್ಗೆ 8 ಗಂಟೆಗೆ ಆರಂಭವಾದ ಎಣಿಕೆಯಲ್ಲಿ ಆರಂಭದಿಂದಲೇ ಎಐಎನ್‌ಆರ್‌ಸಿ ಅಭ್ಯರ್ಥಿ ಕಾಂಗ್ರೆಸ್‌‍ ಮತ್ತು ಡಿಎಂಕೆ ಅಭ್ಯರ್ಥಿಗಳಿಗಿಂತ ಮುನ್ನಡೆ ಕಾಯ್ದುಕೊಂಡಿದ್ದರು. ಲಾಸ್‌‍ಪೇಟೆಯ ಮೊತಿಲಾಲ್‌ ನೆಹರು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು.

ಏಪ್ರಿಲ್‌ 9ರಂದು ನಡೆದ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ರಂಗಸಾಮಿ ಅವರು ತಟ್ಟಾಂಚಾವಡಿ ಮತ್ತು ಮಂಗಳಂ ಎರಡೂ ಕ್ಷೇತ್ರಗಳಿಂದ ಗೆದ್ದಿದ್ದರು. ಬಳಿಕ ತಟ್ಟಾಂಚಾವಡಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಅನಿವಾರ್ಯವಾಗಿತ್ತು.

ಗೆಲುವು ಸಾಧಿಸಿರುವ ಅಶೋಕ್‌ ಆನಂದ್‌ ಅವರು ಮಾಜಿ ಶಾಸಕರಾಗಿದ್ದು, ಮುಖ್ಯಮಂತ್ರಿ ರಂಗಸಾಮಿ ಅವರ ಆಪ್ತರಾಗಿದ್ದಾರೆ. 1991ರಿಂದ ಈ ಕ್ಷೇತ್ರದಲ್ಲಿ ರಂಗಸಾಮಿ ಅವರು ಯಾವುದೇ ಚುನಾವಣೆಯಲ್ಲೂ ಸೋಲು ಕಂಡಿಲ್ಲ ಎಂಬುದು ಗಮನಾರ್ಹ.

RELATED ARTICLES
spot_img

Latest News