ನವದೆಹಲಿ,ಮೇ 4- ಹದಿನೈದು ವರ್ಷದ ನಂತರ ಇತಿಹಾಸ ಸೃಷ್ಟಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದಿರುವ ಪಶ್ಚಿಮ ಬಂಗಾಳದ ಸುವೆಂದು ಅಧಿಕಾರಿಯವರು ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.
ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯ ಬಲಗೈ ಬಂಟನಂತಿದ್ದ ಸುವೆಂದು ಅಧಿಕಾರಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಟಿಎಂಸಿಗೆ ಗುಡ್‌ಬೈ ಹೇಳಿ ಬಿಜೆಪಿಗೆ ಬಂದಿದ್ದು ಇತಿಹಾಸ. ಹಾಲಿ ನಂದಿಗ್ರಾಮದ ಶಾಸಕರಾಗಿದ್ದ ಅವರು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಟಿಎಂಸಿ ವಿರುದ್ಧ ಹೋರಾಟ ನಡೆಸಿ ಬಂಗಾಳದಲ್ಲಿ ಬಿಜೆಪಿಗೆ ಒಂದಿಷ್ಟು ನೆಲೆ ಊರುವಲ್ಲಿ ಇವರ ಪಾತ್ರವನ್ನು ತಳ್ಳಿಹಾಕುವಂತಿಲ್ಲ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುವೆಂದು ಅಧಿಕಾರಿ ಅವರನ್ನು ಎಲ್ಲಿಯೂ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿರಲಿಲ್ಲ. ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎಂದು ಬಿಜೆಪಿ ಬಿಂಬಿಸಿತ್ತು. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು.
2007ರ ನಂದಿಗ್ರಾಮ ಹೋರಾಟದಲ್ಲಿ ಅಂದು ಮಮತಾ ಬ್ಯಾನರ್ಜಿ ಪರವಾಗಿ ನಿಂತು ರಾಜ್ಯದಲ್ಲಿ ಕಮ್ಯೂನಿಸ್ಟ್ ಸರ್ಕಾರವನ್ನು ಕೆಡವಿ ಮೊದಲ ಬಾರಿಗೆ ಟಿಎಂಸಿ ಅಧಿಕಾರಕ್ಕೆ ಬರುವಲ್ಲಿ ಇವರ ಪಾತ್ರ ಬಹಳ ದೊಡ್ಡದಿತ್ತು.
ಟಿಎಂಸಿಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ದೀದಿ ಇವರ ಮಾತಿಗೆ ಪ್ರಾಶಸ್ತ್ಯ ನೀಡುತ್ತಿದ್ದರು. ಆದರೆ ಪಕ್ಷದಲ್ಲಿ ತಮ ಸಹೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿಗೆ ಬರಬರುತ್ತಾ ಹೆಚ್ಚಿನ ಮನ್ನಣೆ ದೊರೆತ್ತಿದ್ದರಿಂದ ಸುವೆಂದು ಅಧಿಕಾರಿ ಬಿಜೆಪಿಯತ್ತ ಮುಖ ಮಾಡಿದರು.
2021 ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ನಂದಿಗ್ರಾಮದಲ್ಲಿ ಸ್ಪರ್ಧಿಸಿ ಸೋಲಿನ ರುಚಿ ತೋರಿಸಿದ್ದರು. 5 ವರ್ಷಗಳ ಕಾಲ ವಿರೋಧಪಕ್ಷದ ನಾಯಕರಾಗಿದ್ದ ಅವರು ಸಹಜವಾಗಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
