ಇಂದೋರ್, ಮೇ 17: ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ರಾಜಧಾನಿ ರೈಲಿನ ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಕ್ಷಣ ಆತಂಕ ಉಂಟಾದ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ತಿರುವನಂತಪುರಂ ಹಜರತ್ ನಿಜಾಮುದ್ದೀನ್ ರಾಜಧಾನಿ ಎಖ್ಸ್ ಪ್ರೆಸ್ (12431) ರೈಲಿನ ಬಿ-1 ಎಸಿ ಬೋಗಿಯಲ್ಲಿ ಬೆಳಿಗ್ಗೆ ಸುಮಾರು 5.15ಕ್ಕೆ ಬೆಂಕಿ ಕಾಣಿಸಿಕೊಂಡಿತು. ಆ ಬೋಗಿಯಲ್ಲಿ ಒಟ್ಟು 68 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ರತ್ಲಾಂ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಮುಕೇಶ್ ಕುಮಾರ್ ಮಾಹಿತಿ ನೀಡಿದ್ದರೆ.
ಕೋಟಾ ರೈಲ್ವೆ ವಿಭಾಗದ ಅಲೋಟ್ ಮತ್ತು ಲುನಿರಿಚ್ಚಾ ನಿಲ್ದಾಣಗಳ ನಡುವಿನ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.ಘಟನೆಯ ನಂತರ ಸುರಕ್ಷತಾ ಕ್ರಮವಾಗಿ ಸಂಬಂಧಿತ ಬೋಗಿಯನ್ನು ರೈಲಿನಿಂದ ಪ್ರತ್ಯೇಕಗೊಳಿಸಲಾಗಿದ್ದು, ಮೇಲ್ದರ್ಜೆಯ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ತಕ್ಷಣ ಸ್ಥಗಿತಗೊಳಿಸಲಾಯಿತು.
ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಟಾ ರೈಲ್ವೆ ವಿಭಾಗದ ಅಧಿಕಾರಿಗಳ ಪ್ರಕಾರ, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರೈಲಿನಿಂದ ಇಳಿಸಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ.ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಇತರೆ ಬೋಗಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ರೈಲಿನ ಸಂಪೂರ್ಣ ಸಾಮರ್ಥ್ಯ ಮರುಸ್ಥಾಪಿಸಲು ಕೋಟಾ ನಿಲ್ದಾಣದಲ್ಲಿ ಹೆಚ್ಚುವರಿ ಬೋಗಿಯನ್ನು ಜೋಡಿಸಲಾಗುವುದು
ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಪರಿಹಾರ ರೈಲನ್ನೂ ಸಹ ಸ್ಥಳಕ್ಕೆ ಕಳುಹಿಸಲಾಗಿದೆ.ರತ್ಲಾಂ ವಿಭಾಗದ ರೈಲ್ವೆ ವ್ಯವಸ್ಥಾಪಕರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
