Homeರಾಷ್ಟ್ರೀಯಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರ ನೋಟೀಸ್‌

ಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರ ನೋಟೀಸ್‌

Govt issues stern notice to Meta on CSEAM in paid ads on Instagram

ನವದೆಹಲಿ, ಜು. 5- ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಂಶಗಳನ್ನು ಪ್ರಚಾರ ಮಾಡುವ ಜಾಹೀರಾತುಗಳು ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮೆಟಾ ಸಂಸ್ಥೆಗೆ ನೋಟಿಸ್‌‍ ನೀಡಿ, ಅದರ ಪ್ರತಿನಿಧಿಗಳು ಹಾಜರಾಗುವಂತೆ ಎಲೆಕ್ಟ್ರಾನಿಕ್‌್ಸ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿದೆ.

ಇನ್ಸ್ಟಾಗ್ರಾಂನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಚಾರ ಮಾಡುವ ಎಲ್ಲಾ ಜಾಹೀರಾತುಗಳು ಮತ್ತು ವಿಷಯವನ್ನು ತಕ್ಷಣವೇ ತೆಗೆದುಹಾಕುವಂತೆ ಈಗಾಗಲೇ ಆದೇಶಿಸಲಾಗಿದೆ. ಜೊತೆಗೆ, ಈ ಘಟನೆಗೆ ಸಂಬಂಧಿಸಿದಂತೆ ಏಳು ದಿನಗಳೊಳಗೆ ವಿವರವಾದ ಲಿಖಿತ ಸ್ಪಷ್ಟೀಕರಣ ನೀಡುವಂತೆ ಮೆಟಾಗೆ ಸೂಚಿಸಲಾಗಿದೆ.

ಇತ್ತೀಚೆಗೆ ಪ್ರಕಟವಾದ ಮಾಧ್ಯಮ ವರದಿಯೊಂದರಲ್ಲಿ, ಇನ್ಸ್ಟಾಗ್ರಾಂನಲ್ಲಿ ಆತಂಕಕಾರಿ ಕೀವರ್ಡ್‌ಗಳನ್ನು ಬಳಸಿ ಪಾವತಿಸಿದ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿದ್ದು, ಅವುಗಳ ಮೂಲಕ ಇತರೆ ಸಾಮಾಜಿಕ ಜಾಲತಾಣಗಳಿಗೆ ಸಂಪರ್ಕ ಕಲ್ಪಿಸಿ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಷಯವನ್ನು ಖರೀದಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇಂತಹ ಆಕ್ಷೇಪಾರ್ಹ ಜಾಹೀರಾತುಗಳು ಮೆಟಾದ ಪೂರ್ವ ಪರಿಶೀಲನೆ ಮತ್ತು ವಿಷಯ ನಿಯಂತ್ರಣ ವ್ಯವಸ್ಥೆಯನ್ನು ಹೇಗೆ ದಾಟಿ ಪ್ರಕಟವಾದವು ಎಂಬುದರ ಕುರಿತು ವಿವರಣೆ ಕೇಳಿದೆ.

ಭಾರತದಲ್ಲಿ ಜಾರಿಯಲ್ಲಿರುವ ಮಧ್ಯವರ್ತಿ ಸುರಕ್ಷತಾ ಮಾರ್ಗಸೂಚಿಗಳನ್ನು ಮೆಟಾ ಸಮರ್ಪಕವಾಗಿ ಪಾಲಿಸುತ್ತಿದೆಯೇ ಎಂಬುದನ್ನೂ ಸರ್ಕಾರ ಪರಿಶೀಲಿಸುತ್ತಿದೆ.ಭಾರತದಲ್ಲಿ ಡಿಜಿಟಲ್‌ ಕಾನೂನುಗಳ ಪ್ರಕಾರ ಅಶ್ಲೀಲತೆ ಹಾಗೂ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಸಾರ ಮಾಡುವುದು ಗಂಭೀರ ಅಪರಾಧವಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 67(ಬಿ) ಅಡಿಯಲ್ಲಿ, ಮಕ್ಕಳನ್ನು ಒಳಗೊಂಡ ಲೈಂಗಿಕ ಸ್ವರೂಪದ ವಿಷಯವನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಮೆಟಾ, ಯಾವುದೇ ವಿಷಯ ನಿಯಂತ್ರಣ ವ್ಯವಸ್ಥೆಯೂ ಶೇ.100ರಷ್ಟು ಪರಿಪೂರ್ಣವಾಗಿರುವುದಿಲ್ಲ ಎಂದು ಹೇಳಿದೆ. ಆದರೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯದ ವಿರುದ್ಧ ಕಂಪನಿಯು ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಮಾಧ್ಯಮ ವರದಿ ಪ್ರಕಟವಾದ ತಕ್ಷಣ ಸಂಬಂಧಿತ ಜಾಹೀರಾತುಗಳನ್ನು ತೆಗೆದುಹಾಕಲಾಗಿದೆ, ನಿಯಮ ಉಲ್ಲಂಘಿಸಿದ ಖಾತೆಗಳನ್ನು ಅಮಾನತುಗೊಳಿಸಲಾಗಿದೆ ಹಾಗೂ ಸಂಬಂಧಿತ ವೆಬ್‌ ಲಿಂಕ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಮೆಟಾ ಸಂಸ್ಥೆ ತಿಳಿಸಿದೆ.ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ವಿಷಯವು ಆಯಾ ಸಂಸ್ಥೆಗಳ ವಿಷಯ ನೀತಿ ಹಾಗೂ ಸಮುದಾಯ ಮಾರ್ಗಸೂಚಿಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಬಳಕೆದಾರರು ಆಕ್ಷೇಪಾರ್ಹ ಅಥವಾ ನಿಯಮ ಉಲ್ಲಂಘಿಸುವ ವಿಷಯ ಕಂಡುಬಂದರೆ ಅದನ್ನು ವರದಿ ಮಾಡುವ ಅಥವಾ ಫ್ಲ್ಯಾಗ್‌ ಮಾಡುವ ಅವಕಾಶವೂ ಇದೆ.

RELATED ARTICLES
spot_img

Latest News