Homeರಾಷ್ಟ್ರೀಯಚೈನೀಸ್‌‍ ಆಹಾರ ಮಳಿಗೆಗಳ ಮೇಲೆ ಮಹಾರಾಷ್ಟ್ರ ಸರ್ಕಾರ ನಿಗಾ

ಚೈನೀಸ್‌‍ ಆಹಾರ ಮಳಿಗೆಗಳ ಮೇಲೆ ಮಹಾರಾಷ್ಟ್ರ ಸರ್ಕಾರ ನಿಗಾ

ಮುಂಬೈ,ಆ.9- ಗುಟ್ಕಾ ನಿಷೇಧ, ಆಹಾರ ಕಲಬೆರಕೆ ಮತ್ತು ಕಳಪೆ ಗುಣಮಟ್ಟದ ಔಷಧಿಗಳ ವಿರುದ್ಧ ಕಠಿಣ ಕಾರ್ಯಾಚರಣೆಗಳನ್ನು ನಡೆಸಿದ್ದ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ಇದೀಗ ತನ್ನ ಮುಂದಿನ ಹಂತದ ದಾಳಿಗೆ ಸಜ್ಜಾಗಿದೆ. ರಾಜ್ಯದಾದ್ಯಂತ ಅಣಬೆಯಂತೆ ಗೂಡುಕಟ್ಟುತ್ತಿರುವ ರಸ್ತೆಬದಿಯ ಚೈನೀಸ್‌‍ ಆಹಾರ ಮಳಿಗೆಗಳು ಮತ್ತು ತಿನಿಸುಗಳು ಎಫ್‌ಡಿಎ ಆಯುಕ್ತ ತುಕಾರಾಮ್‌ ಮುಂಢೆ ಅವರ ನೇತೃತ್ವದಲ್ಲಿ ಇಲಾಖೆಯ ಹೊಸ ಸ್ಕ್ಯಾನರ್‌ ಅಡಿಗೆ ಬಂದಿವೆ.

ಪುಣೆಯಲ್ಲಿ ನಡೆದ ಇತ್ತೀಚಿನ ಸಂವಾದವೊಂದರಲ್ಲಿ ಮಾತನಾಡಿದ ಎಫ್‌ಡಿಎ ಆಯುಕ್ತ ತುಕಾರಾಮ್‌ ಮುಂಢೆ, ನಗರಗಳು ಹಾಗೂ ಪಟ್ಟಣಗಳಲ್ಲಿ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಚೀನಿ ಆಹಾರ ಮಾರಾಟಗಾರರ ವಿರುದ್ಧ ಸಾರ್ವಜನಿಕರಿಂದ ಭಾರೀಪ್ರಮಾಣದಲ್ಲಿ ದೂರುಗಳು ಬಂದಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಬೀದಿಬದಿಯ ಚೀನೀ ಆಹಾರಗಳಲ್ಲಿ ಬಳಸಲಾಗುತ್ತಿರುವ ಕಳಪೆ ಪದಾರ್ಥಗಳು, ಹಳಸಿದ ಸಾಮಾಗ್ರಿಗಳು ಮತ್ತು ಹಾನಿಕಾರಕ ರಾಸಾಯನಿಕಗಳ ಬಗ್ಗೆ ಸಾರ್ವಜನಿಕರಿಂದ ಆತಂಕ ವ್ಯಕ್ತವಾಗಿದೆ.

ಮುಕ್ತ ಮಾರುಕಟ್ಟೆಯಲ್ಲಿ ಯಾವುದೇ ಸುರಕ್ಷತಾ ಮಾನದಂಡಗಳಿಲ್ಲದೆ, ಕನಿಷ್ಠ ನೈರ್ಮಲ್ಯವನ್ನೂ ಪಾಲಿಸದೆ ವ್ಯಾಪಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಇಲಾಖೆ ತಿಳಿಸಿದೆ.
ಶೀಘ್ರದಲ್ಲೇ ಆರಂಭವಾಗಲಿರುವ ಈ ವಿಶೇಷ ಅಭಿಯಾನದಲ್ಲಿ ಅಧಿಕಾರಿಗಳು ಕೆಳಗಿನ ಅಂಶಗಳ ಮೇಲೆ ತೀವ್ರ ನಿಗಾ ಇಡಲಿದ್ದಾರೆ. ಅಡುಗೆಗೆ ಬಳಸುವ ಎಣ್ಣೆ, ಸಾಸ್‌‍ಗಳು ಮತ್ತು ತರಕಾರಿಗಳ ತಾಜಾತನ ಪರಿಶೀಲನೆ.

ಆಹಾರ ತಯಾರಿಸುವ ಸ್ಥಳದ ಸ್ವಚ್ಛತೆ ಹಾಗೂ ಅಡುಗೆ ಮಾಡುವವರ ವೈಯಕ್ತಿಕ ನೈರ್ಮಲ್ಯ. ಕಚ್ಚಾ ಪದಾರ್ಥಗಳನ್ನು ಸಂಗ್ರಹಿಸಿಡುವ ವಿಧಾನ ಮತ್ತು ಅವುಗಳ ಕಾಲಮಿತಿ. ಪ್ರತಿಯೊಂದು ಮಳಿಗೆಯು ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದೆಯೇ ಎಂಬುದನ್ನು ಖಚಿತಪಡಿಸುವುದು. ಯಾವುದೇ ರೆಸ್ಟೋರೆಂಟ್‌ ಅಥವಾ ರಸ್ತೆಬದಿಯ ಆಹಾರ ವ್ಯಾಪಾರಿಯು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ, ಅವರ ವಿರುದ್ಧ ಭಾರೀ ದಂಡ, ಕಾನೂನು ಕ್ರಮ ಹಾಗೂ ಎಫ್‌ಎಸ್‌‍ಎಸ್‌‍ಎಐ ಪರವಾನಗಿ ಅಮಾನತು ಅಥವಾ ರದ್ದುಗೊಳಿಸುವ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಂಢೆ ಎಚ್ಚರಿಕೆ ನೀಡಿದ್ದಾರೆ.

ನಾಗರಿಕರಿಗೆ ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ಸಿಗುವಂತೆ ಮಾಡುವುದು ನಮ ಆದ್ಯತೆಯಾಗಿದೆ. ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೂ ಇಲ್ಲಿ ಮುಖ್ಯವಾಗಿದ್ದು, ಪೋರ್ಟಲ್‌ ಮೂಲಕ ಸ್ವೀಕರಿಸುವ ಪ್ರತಿಯೊಂದು ಸಾರ್ವಜನಿಕ ದೂರನ್ನು ಗಂಭೀರವಾಗಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಮಹಾರಾಷ್ಟ್ರ ಈಆಂಯು ತುಕಾರಾಮ್‌ ಮುಂಢೆ ಅವರ ಕಟ್ಟುನಿಟ್ಟಿನ ಆಡಳಿತದಲ್ಲಿ ನಕಲಿ ಉತ್ಪನ್ನಗಳು, ಅಕ್ರಮ ಗುಟ್ಕಾ ಮತ್ತು ಕಲಬೆರಕೆ ವಿರುದ್ಧ ಸಮರ ಸಾರಿದ್ದು, ಈಗ ಈ ಚೈನೀಸ್‌‍ ಆಹಾರ ಮಳಿಗೆಗಳ ತಪಾಸಣೆಯು ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

RELATED ARTICLES
spot_img

Latest News