ನವದೆಹಲಿ, ಏ.22- ಕಾಶೀರ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರಲ್ಲಿ ಹಿಂದೂಗಳನ್ನು ಹುಡುಕಿ ಹುಡುಕಿ ಹತ್ಯೆ ಮಾಡಿದ ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಕಹಿ ಘಟನೆಗೆ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಘೋರ ಘಟನೆ ನಡೆದು ಒಂದು ವರ್ಷವಾದರೂ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು, ಕಣ್ಣೀರು ಇನ್ನು ಹಸಿಯಾಗಿಯೇ ಉಳಿದಿದೆ.
ಈ ಕಹಿ ಘಟನೆಗೆ ಉತ್ತರವಾಗಿ ಭಾರತ ಕೈಗೊಂಡ ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹಾದೇವ ಮೂಲಕ ಭಾರತೀಯ ಸೇನೆಯು ತೋರಿದ ಪರಾಕ್ರಮ. ಪ್ರತೀಕಾರದ ಕುದಿಯಲ್ಲಿ ಪಹಲ್ಗಾಮ್ ದಾಳಿಕೋರರನ್ನು ಹುಡುಕಿ ಸದೆಬಡಿದ ಚಿತ್ರಣಗಳು ಜನರ ಸ್ಮೃತಿಪಟಲದಲ್ಲಿ ಇನ್ನು ಹಸಿರಾಗಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಎಂಬ ಸುಂದರ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಸಂಭ್ರಮದಲ್ಲಿದ್ದಾಗ ಇದ್ದಕ್ಕಿದ್ದಂತೆ, ಏಕಾಏಕಿ ದಾಳಿ ನಡೆಸಿದ ಉಗ್ರರ ಗುಂಡಿಗೆ 26 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಕಮಾಂಡರ್ ಸಾಜಿದ್ ಜಾಟ್ ಸೇರಿದಂತೆ ಏಳು ಆರೋಪಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಯಿತು. ದಾಳಿಯ ಹಿಂದಿನ ಪಾಕ್ ಪಿತೂರಿಯನ್ನು ಸಹ ಎನ್ಐಎ ಬಹಿರಂಗಪಡಿಸಿತು. ದಾಳಿಯ ಬೆನ್ನಲ್ಲೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುರಕ್ಷಿತಗೊಳಿಸಿದವು.
ತುರ್ತು ಸೇವೆಗಳನ್ನು ಸಕ್ರಿಯಗೊಳಿಸಲಾಯಿತು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಜನರು ಸುರಕ್ಷಿತ ಸ್ಥಳಕ್ಕೆ ತಲುಪಲು ಸಹಾಯ ಮಾಡುವಲ್ಲಿ ಸ್ಥಳೀಯ ನಿವಾಸಿಗಳು, ಪೋನಿ ಹ್ಯಾಂಡ್ಲರ್ಗಳು ಮತ್ತು ಮಾರ್ಗದರ್ಶಕರು ನಿರ್ಣಾಯಕ ಪಾತ್ರ ವಹಿಸಿದರು. ಅವರ ತ್ವರಿತ ಪ್ರತಿಕ್ರಿಯೆಯು ಇನ್ನೂ ಹೆಚ್ಚಿನ ಸಾವು-ನೋವುಗಳನ್ನು ತಡೆಯಲು ಸಹಾಯ ಮಾಡಿತು.
ಈ ದಾಳಿಯು ಇಡೀ ರಾಷ್ಟ್ರವನ್ನು ಆಘಾತಗೊಳಿಸಿತು. ಇತ್ತೀಚಿನ ವರ್ಷಗಳಲ್ಲಿ ಚೇತರಿಸಿಕೊಳ್ಳುತ್ತಿದ್ದ ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರದ ಮೇಲೂ ಇದು ಬಲವಾದ ಪರಿಣಾಮ ಬೀರಿತು.
ಪ್ರತಿಕಾರ:
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಿಂದ ಅಮಾಯಕರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ದಾಳಿಗೆ ಭಾರತವು ಪ್ರತೀಕಾರದ ಸಂಕಲ್ಪ ಮಾಡಿತು. ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತು. ಭಾರತ ಮತ್ತು ಪಾಕಿಸ್ತಾನ ನಡುವೆ 2025ರ ಮೇ 7 ರಂದು ಸಂಘರ್ಷ ಪ್ರಾರಂಭವಾಯಿತು. ಉಭಯ ದೇಶಗಳು ಪರಸ್ಪರರ ಮೇಲೆ ಶಸ್ತ್ರಾಸ್ತ್ರ ಪ್ರಯೋಗ ಮಾಡಿದವು.
ಪಾಕಿಸ್ತಾನದ 11ಕ್ಕೂ ಹೆಚ್ಚು ವಾಯುನೆಲೆಗಳು ಮತ್ತು ಸೇನಾ ನೆಲೆಗಳನ್ನು ಭಾರತ ಯಶಸ್ವಿಯಾಗಿ ಧ್ವಂಸಗೊಳಿಸಿತು. ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿದ ಈ ತೀವ್ರ ದಾಳಿಯಲ್ಲಿ ಸರ್ಗೋಧಾ, ನೂರ್ ಖಾನ್, ಭೋಲಾರಿ, ಜಾಕೋಬಾಬಾದ್, ಸುಕ್ಕೂರ್ ಮತ್ತು ರಹೀಮ್ ಯಾರ್ ಖಾನ್ನಂತಹ ಪಾಕ್ನ ಪ್ರಮುಖ ನೆಲೆಗಳು ಧ್ವಂಸಗೊಂಡಿದ್ದವು.
ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಕ್ರೂರಿಗಳನ್ನು ಎಡೆಮುರಿ ಕಟ್ಟುವ ಸಂಕಲ್ಪಕ್ಕೆ ಆಪರೇಷನ್ ಸಿಂಧೂರ ಅಂತ ಹೆಸರಿಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಮಹಿಳಾ ಯೋಧರು ಕೂಡ ದಿಟ್ಟತನದಿಂದ ಹೋರಾಡಿದ್ದರು. ಭಾರತ ನಡೆಸಿದ ಪ್ರತೀಕಾರದ ದಾಳಿಗೆ ಪಾಕ್ ಮತ್ತು ಪಾಕ್ ಆಕ್ರಮಿತ ಪ್ರದೇಶದಲ್ಲಿದ್ದ ಉಗ್ರರ ನೆಲೆಗಳು ಛಿದ್ರಗೊಂಡವು. ಮಾತ್ರವಲ್ಲ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಇಬ್ಬರು ಮಹಿಳಾ ಸೇನಾಧಿಕಾರಿಗಳೇ ವಿವರಣೆ ನೀಡುವ ಮೂಲಕ ಭಯೋತ್ಪಾದಕ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಮಹಿಳೆಯರಿಗೆ ಮಹಿಳಾಧಿಕಾರಿಗಳಿಂದಲೇ ಸಾಂತ್ವನ ಹೇಳಿಸಲಾಗಿತ್ತು.
ಆಪರೇಷನ್ ಮಹಾದೇವ:
ಪಹಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಉಗ್ರರನ್ನು ಸದೆಬಡಿಯಲು ಭಾರತ ಕೈಗೊಂಡ ಕಾರ್ಯಾಚರಣೆಯೇ ಆಪರೇಷನ್ ಮಹಾದೇವ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಡಚಿಗಾಮ್ ಅರಣ್ಯದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ, ಪಹಲ್ಗಾಮ್ ದಾಳಿಯ ರೂವಾರಿಗಳಾದ ಮೂವರು ಭಯೋತ್ಪಾದಕರನ್ನು ಹೊಸಕಿ ಹಾಕಿದ್ದವು.
