ಬೆಂಗಳೂರು, ಜು.23– ವಿದ್ಯಾರ್ಥಿಗಳ ಹಿತ ರಕ್ಷಣೆಯೇ ಪ್ರಮುಖ ಆದ್ಯತೆಯಾಗಿದ್ದರೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ವಜಾ ಮಾಡಲಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆ ಹಗರಣದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗಂತೂ ತೊಂದರೆಯಾಗಿದೆ. ಮೊದಲ ನೀಟ್ ಪರೀಕ್ಷೆಯಲ್ಲಿ 500 ಅಂಕ ಪಡೆದ ವಿದ್ಯಾರ್ಥಿ, ಎರಡನೇ ನೀಟ್ ಪರೀಕ್ಷೆಯಲ್ಲಿ 250, 300 ಅಂಕ ಗಳಿಸಿದ್ದಾರೆ. ಲಕ್ಷಾಂತರ ಮಕ್ಕಳು ರ್ಯಾಕಿಂಗ್ ಕಳೆದುಕೊಂಡಿದ್ದಾರೆ. ಅವರ ಭವಿಷ್ಯ ಅತಂತ್ರವಾಗಿದೆ. ಈ ವಿಚಾರದಲ್ಲಿ ಉತ್ತರದಾಯಿತ್ವಕ್ಕಾಗಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದ್ದಾರೆ.
ಪ್ರಧಾನಿಯವರು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. ತಡವಾಗಿಯಾದರೂ ಪ್ರತಿಕ್ರಿಯಿಸುವಂತಾಗಿದೆ. ಅವರು ವಿದ್ಯಾರ್ಥಿಗಳ ಪರವಾಗಿದ್ದೇವೆ ಎಂದು ಹೇಳುವುದನ್ನು ಒಪ್ಪಿಕೊಳ್ಳೋಣ. ಆದರೆ, ಅದು ಸಾಬೀತಾಗಬೇಕಾದರೆ ಹೊಣೆಗಾರರಿಗೆ ಶಿಕ್ಷೆಯಾಗಬೇಕಲ್ಲವೇ ಎಂದು ಪ್ರಶ್ನಿಸಿದರು.ಹಿಂದೆಲ್ಲಾ ವಿದ್ಯಾರ್ಥಿಗಳಿಗೆ ಪಕೋಡ ಮಾರಿ ಎಂದು ಹೇಳುತ್ತಿದ್ದ ಪ್ರಧಾನಿ ಈಗ ಬದಲಾಗಿದ್ದಾರೆ ಎಂದು ಲೇವಡಿ ಮಾಡಿದರು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರೆ, ಪೊಲೀಸ್ ದೌರ್ಜನ್ಯ ನಡೆಸಲಾಗಿದೆ. ಸಂವಿಧಾನದಲ್ಲೇ ಪ್ರತಿಭಟನೆಗೆ ಅವಕಾಶವಿದ್ದರೂ ಕೇಂದ್ರ ಸರ್ಕಾರ ಅವಕಾಶ ನಿರಾಕರಿಸುತ್ತಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ಈ ಪರಿಸ್ಥಿತಿಯಾದರೆ, ಇನ್ನೂ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ನಿನ್ನೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪರಮೇಶ್ವರ್, ಕ್ರಿಯೆ ಇದ್ದಕಡೆ ಪ್ರತಿಕ್ರಿಯೆ ಸಹಜ. ನಮವರು ಪ್ರತಿಭಟಿಸುತ್ತಾರೆ ಎಂದು ಅವರು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಪ್ರಕರಣ ಕುರಿತಂತೆ ರಾಜ್ಯಪಾಲರಿಗೆ ದೂರು ನೀಡುವುದಾದರೆ ನೀಡಲಿ, ನಮದೇನೂ ತಕರಾರು ಇಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿಕೆ ನೀಡಿ ಮಚ್ಚು, ಬಾಂಬ್‌ಗಳೊಂದಿಗೆ ನಮನ್ನು ಕೊಲೆ ಮಾಡಲು ಬಂದಿದ್ದರು ಎಂದು ಹೇಳಿರುವುದು ಹಾಸ್ಯಾಸ್ಪದ ಎಂದರು.
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನಮ ಸರ್ಕಾರ ಸಿದ್ಧವಿದೆ. ಈಗಾಗಲೇ 1 ಕೋಟಿ ರೂ.ಗಳನ್ನು ಪ್ರತಿಯೊಬ್ಬ ಶಾಸಕರಿಗೂ ನೀಡಲು ತೀರ್ಮಾನಿಸಿದ್ದೇವೆ. ಅಲ್ಲದೇ, ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಪ್ರತಿ ಜಿಲ್ಲೆಗೆ 5 ಕೋಟಿ ಹಣವನ್ನು ನೀಡಿದ್ದೇವೆ. ಈಗಾಗಲೇ ಪಿಡಿ ಖಾತೆಗಳಲ್ಲಿ 329 ಕೋಟಿ ರೂ. ಲಭ್ಯವಿದೆ. ನಮಲ್ಲಿ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.
ಮೈಸೂರು ಮತ್ತು ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನೆ ಬಾಕಿ ಇದೆ. ಬೆಂಗಳೂರು ವಿಭಾಗದಲ್ಲಿ ಜುಲೈ 25ರಂದು ನಾನು ಮತ್ತು ಮುಖ್ಯಮಂತ್ರಿಗಳು ಸಭೆ ನಡೆಸುತ್ತೇವೆ. ಅದಾಗಿ ಮೈಸೂರಿನಲ್ಲಿ ಮಾಡುತ್ತೇವೆ. ಆಗ ನಮಗೆ ರಾಜ್ಯ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಚಿತ್ರಣ ಸಿಗುತ್ತದೆ. ಆ ಬಳಿಕ ಚರ್ಚಿಸಿ, ರೈತರಿಗೆ, ಸಾಮಾನ್ಯ ಜನರಿಗೆ ಸಮಸ್ಯೆಯಾಗದಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳು ವಿಬಿ -ಜಿ ರಾಮ್ ಜಿ ಯೋಜನೆಯಡಿ ಕೂಡಲೇ ಜನರಿಗೆ ಉದ್ಯೋಗ ನೀಡುವಂತೆ ಸೂಚಿಸಿದ್ದೇನೆ. ನಮಲ್ಲಿ ಹಣದ ಕೊರತೆ ಇಲ್ಲ. ಶೀಘ್ರವೇ ಕಾಮಗಾರಿಗಳನ್ನು ಆರಂಭಿಸುವಂತೆ ತಿಳಿಸಿರುವುದಾಗಿ ಮಾಹಿತಿ ನೀಡಿದರು.
ನೀವು ಭೇಟಿ ಕೊಟ್ಟ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಮುಂಗಾರಿನಲ್ಲಿ ಸ್ಪಲ್ಪ ಮಳೆಯಾದ್ದರಿಂದ ರೈತರು ಬೀಜ ಬಿತ್ತನೆ ಮಾಡಿದ್ದಾರೆ. ಆಮೇಲೆ ಮಳೆಯಾಗಿಲ್ಲ. ಈಗ ಬಿತ್ತನೆ ಮಾಡಿದ್ದೆಲ್ಲ ಒಣಗಿ ಹೋಗಿದೆ. ಈಗ ಮತ್ತೆ ಆಗಸ್ಟ್ ತಿಂಗಳಲ್ಲಿ ಮಳೆಯಾದರೆ ಬೀಜ ಬಿತ್ತನೆ ಮಾಡುತ್ತಾರೆ. ಅದೊಂದು ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
