Monday, May 4, 2026
Homeರಾಷ್ಟ್ರೀಯತಮಿಳುನಾಡಿನಲ್ಲಿ ರಾಜಕೀಯಕ್ಕೂ ಚಿತ್ರರಂಗಕ್ಕೂ ಬಿಡದ ನಂಟು

ತಮಿಳುನಾಡಿನಲ್ಲಿ ರಾಜಕೀಯಕ್ಕೂ ಚಿತ್ರರಂಗಕ್ಕೂ ಬಿಡದ ನಂಟು

Politics and cinema are inseparable in Tamil Nadu

ಬೆಂಗಳೂರು, ಮೇ4-ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿದೆ.

ಅತ್ಯಲ್ಪ ಕಾಲದಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ ಅಧಿಕಾರ ಗದ್ದುಗೆ ಏರಿದ ಅಪೂರ್ವ ಉದಾಹರಣೆ ಇದಾಗಿದ್ದು, ಎಂಜಿಆರ್‌, ಜಯಲಲಿತಾ, ಎನ್‌ಟಿಆರ್‌ ನಂತರ ದಕ್ಷಿಣ ಭಾರತದಲ್ಲಿ ಚಲನಚಿತ್ರ ನಟರೊಬ್ಬರು ಮಾಡಿ ಕಮಾಲ್‌ ಆಗಿದೆ.

ಆಧುನಿಕ ತಮಿಳುನಾಡಿನ ಇತಿಹಾಸವನ್ನೊಮೆ ಅವಲೋಕಿಸಿದರೆ, ಹೆಚ್ಚಿನ ಅವಧಿಗೆ ಚಿತ್ರರಂಗದವರೇ ಆಡಳಿತ ನಡೆಸಿರುವುದು ಗೋಚರಿಸುತ್ತದೆ. ಅಣ್ಣಾದೊರೈ ಅವರಿಂದ ಆರಂಭವಾದ ಈ ಪ್ರವೃತ್ತಿ ಆನಂತರ ಎಂಜಿಆರ್‌, ಕರುಣಾನಿಧಿ, ಜಯಲಲಿತಾ ಅವರ ಕಾಲಕ್ಕೂ ಮುಂದುವರೆದಿದ್ದು, ಈಗ ಜನಪ್ರಿಯ ತಮಿಳುನಟ ದಳಪತಿ ವಿಜಯ್‌ ಅವರು ಈ ಪರಂಪರೆಯನ್ನು ಮುಂದುವರೆಸಿದ್ದಾರೆ.

ಎದುರಾಳಿಗಳನ್ನು ಧೂಳಿಪಟವಾಗಿಸಿ ಪಕ್ಷವನ್ನು ಸರಳ ಬಹುಮತದತ್ತ ಮುನ್ನಡೆಸಿರುವ ವಿಜಯ್‌ ರಾಜಕೀಯ ವಿಸಯ ಮೂಡಿಸಿದ್ದಾರೆ. ಬಹುಮತಕ್ಕೆ ಒಂದೆರಡು ಸ್ಥಾನ ಕೊರತೆಯಿರುವ ವಿಜಯ್‌ ಅವರು ತಮ ಪಕ್ಷ ಯಾರದೇ ಬೆಂಬಲ ಇಲ್ಲದೇ ಸ್ವಂತ ಬಲದ ಮೇಲೆ ಸರಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ಜನತೆ ಭಾಷಾಭಿಮಾನಿಗಳು ಮತ್ತು ಕಲಾಭಿಮಾನಿಗಳು. ಚಲನಚಿತ್ರರಂಗದವರ ಮೇಲೆ ಅವರಿಗೆ ಅಪಾರ ಒಲವು. ಹೀಗಾಗಿ ಈ ಬಾರಿ ತಮಿಳುನಾಡಿನ ಮತದಾರ ವಿಜಯರತ್ತ ಒಲವು ತೋರಿದ್ದಾರೆ.

ಮಕ್ಕಳ್‌ ತಿಲಕಂ ಎಂದೇ ಖ್ಯಾತರಾಗಿರುವ ಎಂಜಿ ರಾಮಚಂದ್ರನ್‌ರವರು ಏಳು ವರ್ಷಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಜನಮನದ ಗದ್ದುಗೆಯಿಂದ ರಾಜಕೀಯ ಗದ್ದುಗೆ ಏರಿ ದಕ್ಷಿಣ ಭಾರತದಲ್ಲಿ ನಟರೊಬ್ಬರು ಪ್ರಥಮ ಬಾರಿ ರಾಜ್ಯವೊಂದರ ಮುಖ್ಯಮಂತ್ರಿಯಾದ ಸಾಧನೆ ಮಾಡಿದರು.

ತರುವಾಯ ಅವರ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದುಕೊಂಡು ಎಂಜಿಆರ್‌ ಅವರ ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡ ಹೆಸರಾಂತ ಚಲನಚಿತ್ರ ಕಲಾವಿದೆ ಜೆ. ಜಯಲಲಿತಾ ಅವರು ಮೂರು ಬಾರಿ ತಮಿಳುನಾಡಿನ ಅಧಿಕಾರದ ಚುಕ್ಕಾಣಿ ಹಿಡಿದರು.
ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರೂ ಕೂಡ ಚಲನಚಿತ್ರರಂಗದ ಕಥಾ ಲೇಖಕರೂ ಮತ್ತು ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡವರು. ಕರುಣಾನಿಧಿ ಅವರೂ ಮೂರು ಬಾರಿ ತಮಿಳುನಾಡಿನ ಆಡಳಿತದ ನೇತೃತ್ವ ವಹಿಸಿಕೊಂಡರು.

ತದನಂತರದ ದಿನಗಳಲ್ಲಿ ಕಮಲ್‌ಹಾಸನ್‌ ಅವರು ರಾಜಕೀಯ ಪ್ರವೇಶಿಸಿದರು. ಆದರೆ ಅವರ ಮಕ್ಕಲ್‌ ನೀಧಿ ಮಯ್ಯಂ ಪಕ್ಷ ಅಷ್ಟಾಗಿ ರಾಜಕೀಯ ಮುನ್ನಡೆ ಕಾಣಲಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಸ್ಫರ್ಧಿಸಿದ ಕಮಲ್‌ ಸ್ವತಃ ಸೋಲು ಕಂಡರು.

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ರಾಜಕೀಯ ಪ್ರವೇಶದ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದ್ದವು, ಆದರೆ, ಆರೋಗ್ಯದ ಕಾರಣ ನೀಡಿ ರಜನಿಕಾಂತ್‌ ರಾಜಕೀಯ ಪ್ರವೇಶ ನಿರಾಕರಿಸಿದರು.
ಈಗ ಅಧಿಕಾರ ಗದ್ದುಗೆಯ ಸನಿಹ ಇರುವ ದಳಪತಿ ವಿಜಯ್‌ ಎಂಜಿಆರ್‌, ಜಯಲಲಿತಾ ಅವರು ಸೃಷ್ಟಿಸಿದ ಶೂನ್ಯವನ್ನು ತುಂಬಿದ್ದಾರೆ. ತಮಿಳುನಾಡಿನ ನೂತನ ನಾಯಕರಾಗಿ ಹೊರಹೊಮಿದ್ದಾರೆ.

RELATED ARTICLES

Latest News