Homeರಾಷ್ಟ್ರೀಯಕುಟುಂಬದ ಮಾರ್ಗದರ್ಶನದ ಕೊರತೆಯಿಂದ ಮಕ್ಕಳು ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ : ಮೋಹನ್‌ ಭಾಗವತ್‌

ಕುಟುಂಬದ ಮಾರ್ಗದರ್ಶನದ ಕೊರತೆಯಿಂದ ಮಕ್ಕಳು ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ : ಮೋಹನ್‌ ಭಾಗವತ್‌

RSS chief Mohan Bhagwat

ನಾಗಪುರ, ಜುಲೈ.5-ಮಕ್ಕಳಲ್ಲಿ ಮಾನಸಿಕ ದೃಢತೆಯನ್ನು ಬೆಳೆಸುವ ಅಗತ್ಯ ತುರ್ತಾಗಿದೆ. ಕುಟುಂಬದ ಸಾಂಪ್ರದಾಯಿಕ ಮಾರ್ಗದರ್ಶನದ ಕೊರತೆ ಹಾಗೂ ಅತಿಯಾದ ಮೊಬೈಲ್‌ ಮತ್ತು ಸ್ಕ್ರೀನ್‌ ಬಳಕೆಯಿಂದ ಮಕ್ಕಳು ಮಾನಸಿಕವಾಗಿ ಹೆಚ್ಚು ದುರ್ಬಲರಾಗುತ್ತಿದ್ದಾರೆ ಎಂದು ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ನಾಗಪುರದಲ್ಲಿ ಸನಾರ್ಗ್‌ ಮೈಂಡ್‌ ವೆಲ್‌ನೆಸ್‌‍ ಸೆಂಟರ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸ ತಲೆಮಾರಿಗೆ ಸಂವಾದದ ಅಗತ್ಯವಿದ್ದು, ಅವರಲ್ಲಿ ಏಕಾಂಗಿ ಭಾವನೆ ಬೆಳೆಯದಂತೆ ತಡೆಯಬೇಕು. ಯುವಜನರ ಮಾನಸಿಕ ಆರೋಗ್ಯಕ್ಕೆ ಸಮಾಜವು ಹೆಚ್ಚಿನ ಆದ್ಯತೆ ನೀಡಬೇಕೆಂದು ಹೇಳಿದರು.

ಪಾಂಡವರು ಎದುರಿಸಿದ ಕಷ್ಟ-ಸವಾಲುಗಳಂತಹ ಪುರಾಣ ಕಥೆಗಳು ಹಿಂದೆ ಮಕ್ಕಳ ಮನಸ್ಸಿಗೆ ಧೈರ್ಯ ತುಂಬುತ್ತಿದ್ದವು. ಆದರೆ ಇಂದು ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಅವರು ಹೇಳಿದರು.

12ನೇ ತರಗತಿಯಲ್ಲಿ ಅನುತ್ತೀರ್ಣರಾದರೆ ಆತಹತ್ಯೆ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ಬೈದರೆ ಓಡಿ ಹೋಗುತ್ತಾರೆ ಅಥವಾ ತೀವ್ರ ನಿರ್ಧಾರ ಕೈಗೊಳ್ಳುತ್ತಾರೆ. ಮನಸ್ಸು ಈ ಸ್ಥಿತಿಗೆ ಹೇಗೆ ತಲುಪಿತು? ಎಂದು ಭಾಗವತ್‌ ಪ್ರಶ್ನಿಸಿದರು.

ಹಿಂದೆ ಅಜ್ಜಿಯರು ಕಥೆ ಹೇಳುವ ಮೂಲಕ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುತ್ತಿದ್ದರು. ಆದರೆ ಈಗ ಬಾಲ್ಯದಿಂದಲೇ ಮಕ್ಕಳನ್ನು ದೂರದರ್ಶನದ ಮುಂದೆ ಕೂರಿಸುವುದು ಅಥವಾ ಮೊಬೈಲ್‌ಗಳನ್ನು ನೀಡುವುದು ಸಾಮಾನ್ಯವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪೋಷಕರು ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆಯದಿರುವುದು ಹಾಗೂ ಕುಟುಂಬದಲ್ಲಿ ಅಜ್ಜಿಯರಂತಹ ಹಿರಿಯರ ಕೊರತೆಯಿಂದ ಮಕ್ಕಳು ಏಕಾಂಗಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಹೊಸ ತಲೆಮಾರಿಗೆ ಸಂವಾದ ಬೇಕು. ಅವರಲ್ಲಿ ಏಕಾಂಗಿ ಭಾವನೆ ಮೂಡದಂತೆ ನೋಡಿಕೊಳ್ಳಬೇಕು. ಮಕ್ಕಳು ತಪ್ಪು ಮಾಡಿದರೆ ಅದರ ಹಿಂದೆ ನಮ್ಮ ಮಾರ್ಗದರ್ಶನದ ಕೊರತೆಯೂ ಕಾರಣವಾಗಿರುತ್ತದೆ ಎಂದು ಅವರು ಹೇಳಿದರು.
ಮನೆ ಹಾಗೂ ಸಮಾಜದಲ್ಲಿ ಮಕ್ಕಳಿಗೆ ಜೀವನದ ಸವಾಲುಗಳನ್ನು ಎದುರಿಸುವ ಮನೋಬಲವನ್ನು ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ. ಹೊಸ ತಲೆಮಾರನ್ನು ಮಾನಸಿಕವಾಗಿ ದುರ್ಬಲವಾಗದಂತೆ ರೂಪಿಸಬೇಕೆಂದು ಅವರು ಕರೆ ನೀಡಿದರು.

ಮಾನಸಿಕ ಆರೋಗ್ಯದ ಸವಾಲು ಬಹಳ ದೊಡ್ಡದಾಗಿದ್ದು, ವೈದ್ಯರು ಮಾತ್ರ ಅದನ್ನು ಪರಿಹರಿಸಲು ಸಾಧ್ಯವಿಲ್ಲ. ಪೋಷಕರು, ಹಿರಿಯರು ಮತ್ತು ಸಮಾಜದ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದರು.ಭಾರತದ ಪ್ರಾಚೀನ ಜ್ಞಾನವನ್ನು ಆಧುನಿಕ ಮನೋವಿಜ್ಞಾನದೊಂದಿಗೆ ಸಂಯೋಜಿಸಿ ಮುಂದುವರಿದ ಭಾರತೀಯ ಮನೋವಿಜ್ಞಾನವನ್ನು ಅಭಿವೃದ್ಧಿಪಡಿಸಬೇಕೆಂದು ಅವರು ಅಭಿಪ್ರಾಯಪಟ್ಟರು.

ಭಾರತದಲ್ಲಿ ಮನಸ್ಸಿನ ಮಹತ್ವವನ್ನು ಬಹಳ ಹಿಂದಿನಿಂದಲೇ ಒತ್ತಿಹೇಳಲಾಗಿದೆ. ಇಂದು ಭಾರತದಲ್ಲಿ ಅನುಸರಿಸಲಾಗುತ್ತಿರುವ ಮನೋವಿಜ್ಞಾನದ ಮೂಲ ಪಾಶ್ಚಾತ್ಯ ದೇಶಗಳಲ್ಲಿದೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಅದು ಇನ್ನೂ ಸಂಪೂರ್ಣವಾಗಿಲ್ಲ, ಎಂದು ಅವರು ಹೇಳಿದರು.
ಮನೆ, ಶಾಲೆ ಹಾಗೂ ಸ್ಥಳೀಯ ಸಮುದಾಯಗಳ ಮೂಲಕ ಮಕ್ಕಳನ್ನು ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತೆ ಸಿದ್ಧಗೊಳಿಸುವ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

RELATED ARTICLES

Latest News