ಬೆಂಗಳೂರು, ಜು.25- ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯ ಕುರಿತು ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜೊತೆ ರಾಜ್ಯದ ನಾಯಕರು ಮಹತ್ವದ ಸಭೆ ನಡೆಸಿದ್ದು, ಸಂಭವನೀಯರ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಮುಂದಿನ ವಾರ ವರಿಷ್ಠ ನಾಯಕರ ಅನುಮೋದನೆ ಪಡೆದು ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.
ಕಳೆದ 15 ದಿನಗಳಿಂದಲೂ ಸಂಪುಟ ವಿಸ್ತರಣೆಯ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸಿದಾಗ ಅವರೊಂದಿಗೆ 13 ಮಂದಿ ಸಚಿವರು ಮಾತ್ರ ಸಂಪುಟ ಸೇರಿದ್ದಾರೆ. ಬಾಕಿ ಇರುವ 20 ಸ್ಥಾನಗಳಿಗೆ ಒಂದು ತಿಂಗಳ ಒಳಗಾಗಿಯೇ ವಿಸ್ತರಣೆ ಕೈಗೊಳ್ಳುವುದಾಗಿ ಹೇಳಲಾಗಿತ್ತು. ಒಂದು ಮುಕ್ಕಾಲು ತಿಂಗಳು ಕಳೆದರೂ ಚರ್ಚೆಗಳು ತಾತ್ವಿಕ ಹಂತಕ್ಕೆ ಬಂದಿಲ್ಲ.
ಆರಂಭದಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಿಂದಾಗಿ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿತ್ತು. ಬಳಿಕ ರಾಹುಲ್ ಗಾಂಧಿ ವಿದೇಶಿ ಪ್ರವಾಸ, ಈಗ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ದೌರ್ಜನ್ಯ ಪ್ರಕರಣ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ಕಾವು ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಡುವೆ ಚರ್ಚೆಗೆ ಸಮಯ ಒದಗಿಸುತ್ತಿಲ್ಲ.
ನಿನ್ನೆ ಬೆಂಗಳೂರಿನಲ್ಲಿ ಸಂಘಟನಾ ಸೃಜನ್ ಅಭಿಯಾನ ವೀಕ್ಷಕರ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ.
ಸಂಭವನೀಯ ಸಚಿವರ ಪಟ್ಟಿಯ ಕುರಿತು ರಾಹುಲ್ ಗಾಂಧಿಯವರು ಸೂಚಿಸಿರುವ ಮಾನದಂಡಕ್ಕೆ ಹೋಲಿಕೆಯಾಗುವವರ ಹೆಸರನ್ನು ರಾಜ್ಯ ನಾಯಕರು ಹೈಕಮಾಂಡ್ ಮುಂದಿಟ್ಟಿದ್ದಾರೆ. ಖಾಸಗಿ ಸಂಸ್ಥೆಯಿಂದ ವರದಿ ಪಡೆದು ಅದರ ಆಧಾರದ ಮೇಲೆ ರಾಹುಲ್ ಗಾಂಧಿ ಸೂಚಿಸಿದ್ದ ಕೆಲವರ ಹೆಸರುಗಳು, ರಾಜ್ಯ ನಾಯಕರ ಪಟ್ಟಿಯಲ್ಲಿ ಸೇರಿವೆ ಎನ್ನಲಾಗಿದೆ.
ರಣದೀಪ್ ಸಿಂಗ್ ಸುರ್ಜೇವಾಲ ನಿನ್ನೆಯೇ ದೆಹಲಿಗೆ ತೆರಳಿದ್ದು, ಕೆ.ಸಿ.ವೇಣುಗೋಪಾಲ್ ನಿನ್ನೆ ಬೆಂಗಳೂರಿನಲ್ಲೇ ಉಳಿದು ಪ್ರಮುಖ ನಾಯಕರ ಜೊತೆ ಚರ್ಚೆ ಮಾಡಿ ಇಂದು ಬೆಳಗ್ಗೆ ಮರಳಿದ್ದಾರೆ. ಈವರೆಗಿನ ಮಾಹಿತಿ ಪ್ರಕಾರ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಹರಿಪ್ರಸಾದ್ ಅವರ ಪ್ರತ್ಯೇಕ ಪಟ್ಟಿಯಲ್ಲಿ ಕೆಲವರನ್ನು ಪರಿಗಣಿಸಲಾಗಿದೆ. ಆದರೆ ಪ್ರಮುಖವಾಗಿ ರಾಹುಲ್ ಗಾಂಧಿ ಸೂಚಿಸಿದವರು ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಲಿದ್ದಾರೆ. ಹಿರಿಯರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಆಗಸ್ಟ್ ಮೊದಲ ವಾರದಿಂದ ವಿಧಾನ ಮಂಡಲ ಅಧಿವೇಶನ ನಿಗದಿಯಾಗಬೇಕಿತ್ತು. ಸಂಪುಟ ವಿಸ್ತರಣೆ ವಿಳಂಬವಾಗಿರುವುದರಿಂದ ಅಧಿವೇಶನ ಕೂಡ ಎರಡು ಅಥವಾ ಮೂರನೇ ವಾರಕ್ಕೆ ಮುಂದೂಡಿಕೆಯಾಗಲಿದೆ ಎಂದು ಹೇಳಲಾಗಿದೆ.
ಸಂಭವನೀಯರ ಪಟ್ಟಿ:
ಮೂಲಗಳ ಪ್ರಕಾರ ಆರ್.ವಿ.ದೇಶಪಾಂಡೆ ಸಭಾಧ್ಯಕ್ಷರಾಗಲು ಒಪ್ಪಿದರೆ, ಮತ್ತೊಬ್ಬ ಹಿರಿಯರಾದ ಹೆಚ್.ಕೆ.ಪಾಟೀಲ್ ಸಚಿವರಾಗಲಿದ್ದಾರೆ. ಇಲ್ಲವಾದರೆ ಸಭಾಧ್ಯಕ್ಷ ಸ್ಥಾನಕ್ಕೆ ಸಿದ್ದರಾಗಿದ್ದಾರೆ. ಟಿ.ಬಿ.ಜಯಚಂದ್ರ ಅವರಿಗೆ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಅವಕಾಶ ಸಿಗುವ ಸಾಧ್ಯತೆ ಇದೆ.
ದಿನೇಶ್ ಗುಂಡೂರಾವ್ ಅವರನ್ನು ದೆಹಲಿ ವಿಶೇಷ ಪ್ರತಿನಿಧಿ ಸ್ಥಾನಕ್ಕೆ ಪರಿಗಣಿಸುವ ಚಿಂತನೆ ನಡೆದಿದೆ. ಒಕ್ಕಲಿಗ ಸಮುದಾಯದಲ್ಲಿ ಹೆಚ್.ಸಿ.ಬಾಲಕೃಷ್ಣ, ಎಸ್.ಆರ್.ಶ್ರೀನಿವಾಸ್, ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ನಂಜೇಗೌಡ, ಟಿ.ಡಿ.ರಾಜೇಗೌಡ, ಡಾ.ಎಂ.ಸಿ.ಸುಧಾಕರ್ ನಡುವೆ ಪೈಪೋಟಿ ಇದೆ. ಅರಕಲಗೂಡು ಶಾಸಕ ಕೆ.ಎಂ.ಶಿವಲಿಂಗೇಗೌಡ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ.
ಎಂ.ಕೃಷ್ಣಪ್ಪ ಅಥವಾ ಅವರ ಪುತ್ರ ಪ್ರಿಯಕೃಷ್ಣ ಅವರಿಗೆ ಅವಕಾಶ ಸಿಗಲಿದೆ. ಐದು ಬಾರಿ ಗೆಲುವು ಕಂಡಿರುವ ಹಾಗೂ ಜೆಡಿಎಸ್ ನಾಯಕರಿಗೆ ಪ್ರತ್ಯುತ್ತರಿಸುವ ನಿಟ್ಟಿನಲ್ಲಿ ಪ್ರಬಲರಾಗಿ ನಿಂತಿರುವ ಮಾಗಡಿಯ ಹೆಚ್.ಸಿ.ಬಾಲಕೃಷ್ಣ ಅವರಿಗೆ ಅವಕಾಶ ನೀಡಬೇಕು ಎಂಬ ಚರ್ಚೆಗಳಾಗಿವೆ. ಶರತ್ ಬಚ್ಚೆಗೌಡ ಅವರಿಗೆ ಹೈಕಮಾಂಡ್ ಕೃಪಾಕಟಾಕ್ಷ ಇದೆ ಎನ್ನಲಾಗುತ್ತಿದೆ.
ಅಪ್ಪಾಜಿ ನಾಡಗೌಡ, ಹಂಪನಗೌಡ ಬಾದರ್ಲಿ, ಎನ್.ಎ.ಹ್ಯಾರಿಸ್, ಮಹಂತೇಶ್ ಶಿವಾನಂದ ಕೌಜಲಗಿ, ಜಿ.ಟಿ.ಪಾಟೀಲ್, ಎಂ.ವೈ.ಪಾಟೀಲ್, ಪುಟ್ಟರಂಗಶೆಟ್ಟಿ, ಸಂತೋಷ್ ಲಾಡ್, ಬಿ.ಕೆ.ಸಂಗಮೇಶ್ವರ್, ಬಿ.ನಾಗೇಂದ್ರ, ಅಜಯ್ ಧರ್ಮಸಿಂಗ್, ಪಿ.ಎಂ.ಅಶೋಕ್, ಲಕ್ಷ್ಮೀ ಹೆಬ್ಬಾಳ್ಕಕರ್, ಎ.ಆರ್.ಕೃಷ್ಣಮೂರ್ತಿ, ಬಿ.ಶಿವಣ್ಣ, ಕೆ.ಷಡಾಕ್ಷರಿ, ಟಿ.ರಘುಮೂರ್ತಿ ಹೆಸರುಗಳು ಪಟ್ಟಿಯಲ್ಲಿವೆ.
ಮಾಜಿ ಸಚಿವ ಮಧು ಬಂಗಾರಪ್ಪ ಅವರಿಗೆ ಬೇಳೂರು ಗೋಪಾಲಕೃಷ್ಣ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಕೊತ್ತೂರ್ ಮಂಜುನಾಥ್ ಗೆ ಎಸ್.ಎನ್.ನಾರಾಯಣಸ್ವಾಮಿ, ನಂಜೇಗೌಡ ಎದುರಾಳಿಗಳಾಗಿ ನಿಂತಿದ್ದಾರೆ. ಅಲ್ಪಸಂಖ್ಯಾತರ ಪೈಕಿ ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್ ಹೆಸರು ಪರಿಗಣನೆಯಲ್ಲಿದೆ, ರಿಜ್ವಾನ್ ಅರ್ಷದ್, ಎನ್.ಎ.ಹ್ಯಾರೀಶ್ ಜೊತೆಗೆ ತನ್ವೀರ್ ಸೆಠ್ ಅವಕಾಶ ಕೇಳುತ್ತಿದ್ದಾರೆ.
ಮಹಿಳಾ ಹಾಗೂ ಮುಸ್ಲಿಂ ಕೋಟಾ ಎರಡರಲ್ಲೂ ಖನೀಜ್ ಫಾತಿಮಾ ಹೆಸರು ಚಾಲ್ತಿಯಲ್ಲಿದೆ. ಮೊದಲ ಬಾರಿ ಗೆದ್ದಿರುವವರ ಪೈಕಿ ಎ.ಎಸ್.ಪೊನ್ನಣ್ಣ, ಪ್ರದೀಪ್ ಈಶ್ವರ್ ಹೆಸರು ಮುಂಚೂಣಿಯಲ್ಲಿದೆ. ಉಳಿದಂತೆ ಬಸವರಾಜ್ ಶಿವಗಂಗಾ, ಅಶೋಕ್ ಕುಮಾರ್ ರೈ , ಆನಂದ ಕೆ.ಎಸ್. ಪೈಪೋಟಿಯಲ್ಲಿದ್ದಾರೆ.
