ಮುಂಬೈ, ಮೇ 3- ವಿದೇಶಿ ಆಕ್ರಮಣಗಳು ಮತ್ತು ಸಂಕಷ್ಟಗಳ ನಡುವೆಯೂ ಆದಿವಾಸಿ ಹಾಗೂ ಅನು ಸೂಚಿತ ಜಾತಿ ಸಮುದಾಯಗಳು ಭಾರತದ ಗುರುತು ಮತ್ತು ಆತ್ಮವನ್ನು ಕಾಪಾಡಿಕೊಂಡಿವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,ಇವರನ್ನು ಮುಖ್ಯವಾಹಿನಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಮಗ್ರವಾಗಿ ಸೇರಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು. ಮಾನವ ಜೀವನದ ಅರ್ಥವೇ ಜಗತ್ತಿಗೆ ಮರಳಿ ಕೊಡುವುದಾಗಿದೆ. ನಾವು ಎಲ್ಲರೂ ಒಂದು ದೊಡ್ಡ ಕುಟುಂಬದ ಭಾಗ. ಸಮಾಜದ ಹಿತಕ್ಕಾಗಿ ಕೆಲಸ ಮಾಡುವುದು ಉಪಕಾರವಲ್ಲ, ಅದು ಕರ್ತವ್ಯ.
ಇತರರಿಗೆ ಸೇವೆ ಸಲ್ಲಿಸುವುದರಿಂದ ನಮದೇ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಭಾಗವತ್ ಹೇಳಿದರು.ಭಾರತೀಯ ಸಮಾಜದ ಮೂಲ ಸಾಮಾಜಿಕ ಮೌಲ್ಯಗಳು ಸಾವಿರಾರು ವರ್ಷಗಳಿಂದ ಜೀವಂತವಾಗಿವೆ. ಆದರೆ ನಮ ನಿರ್ಲಕ್ಷ್ಯ ಮತ್ತು ವಿದೇಶಿ ಆಕ್ರಮಣಗಳಿಂದ ಈ ಮೌಲ್ಯಗಳನ್ನು ಉಳಿಸಿಕೊಂಡವರೇ ಭಾರಿ ಬೆಲೆ ಕಟ್ಟಬೇಕಾಯಿತು ಎಂದು ಅವರು ಹೇಳಿದ್ದಾರೆ.
ವಿದೇಶಿ ಆಕ್ರಮಣಕಾರರು ಈ ಮೌಲ್ಯ ವ್ಯವಸ್ಥೆಯೇ ಸಮಾಜದ ಆತವೆಂದು ತಿಳಿದು, ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದವರನ್ನು ಹಿಂಸೆಗೊಳಪಡಿಸಿದರು ಎಂದು ಅವರು ಆರೋಪಿಸಿದರು. ಆದರೂ, ಎಲ್ಲಾ ಕಷ್ಟಗಳ ನಡುವೆಯೂ ಆದಿವಾಸಿ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯಗಳು ದೇಶದ ಮೂಲ ಗುರುತನ್ನು ಕಾಪಾಡಿಕೊಂಡಿವೆ ಎಂದು ಭಾಗವತ್ ಹೇಳಿದರು.
ಈ ಸಮುದಾಯಗಳಲ್ಲೇ ದೇಶದ ಮೂಲ ಸ್ವರೂಪ ಉಳಿದಿದೆ. ಇವರನ್ನು ಅಭಿವೃದ್ಧಿಯ ಮುಖ್ಯ ವಾಹಿನಿಗೆ ತರುವುದರ ಜೊತೆಗೆ, ಸಮಾನ ಸೇವೆಗಳು ಮತ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಜಾಗತಿಕ ಪರಿಸ್ಥಿತಿಗಳ ಕುರಿತು ಮಾತನಾಡಿದ ಭಾಗವತ್, ಪ್ರಪಂಚ ಈಗ ಸಮತೋಲನ ಕಾಪಾಡಿಕೊಳ್ಳಲು ಹೋರಾಟ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ಸ್ಥಿರತೆಯ ಶಕ್ತಿಯಾಗಿ ಹೊರಹೊಮ್ಮಬಹುದು ಎಂದು ಅಭಿಪ್ರಾಯಪಟ್ಟರು.ದೇಶವು ತನ್ನ ಸಮಸ್ಯೆಗಳನ್ನು ಪರಿಹರಿಸುವುದಷ್ಟೇ ಅಲ್ಲ, ವಿಶ್ವದ ಸಮಸ್ಯೆಗಳನ್ನು ಎದುರಿಸಲು ಸಹ ನೆರವಾಗಬೇಕು ಎಂದು ಹೇಳಿದರು.
ಸಮಾಜದ ಸೇವೆ ಉಪಕಾರವಲ್ಲ, ಅದು ಕರ್ತವ್ಯ. ಇತರರ ಬೆಳವಣಿಗೆಗೆ ಸಹಾಯ ಮಾಡುವುದರಿಂದ ವ್ಯಕ್ತಿಗಳೂ ಹಾಗೂ ಸಮಾಜವೂ ಬಲಪಡುತ್ತದೆ ಎಂದು ಅವರು ಹೇಳಿದ್ದಾರೆ.
