Friday, May 3, 2024
Homeರಾಜ್ಯಮುಕ್ತ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಸಿದ್ಧತೆ : ಮನೋಜ್ ಕುಮಾರ್ ಮೀನಾ

ಮುಕ್ತ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಸಿದ್ಧತೆ : ಮನೋಜ್ ಕುಮಾರ್ ಮೀನಾ

ಬೆಂಗಳೂರು, ಏ.14- ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಏ.26ರಂದು ಮತದಾನ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಇಂದಿಲ್ಲಿ ತಿಳಿಸಿದರು.

ಸಾರ್ವತ್ರಿಕ ಲೋಕಸಭಾ ಚುನಾವಣೆಯ ಅಂಗವಾಗಿ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೆರೆಯ ತಮಿಳುನಾಡಿನಲ್ಲಿ ಏ.19ರಂದು ಮತದಾನ ನಡೆಯಲಿದೆ. ಈಗಾಗಿ ಏ.17ರಿಂದಲೇ ತಮಿಳುನಾಡು ಗಡಿಯನ್ನು ಸೀಜ್ ಮಾಡಲಾಗುವುದು.

ಅದೇ ರೀತಿ ಕರ್ನಾಟಕದಲ್ಲಿ ಮತದಾನ ನಡೆಯುವ ಎರಡು ದಿನಗಳ ಮುನ್ನ ತಮಿಳುನಾಡು ಅವರು ಗಡಿಯನ್ನು ಸೀಜ್ ಮಾಡಲಿದ್ದಾರೆ. ತಮಿಳುನಾಡಿನಲ್ಲಿ ನಿಯೋಜಿತರಾಗಿರುವ ಕೇಂದ್ರ ಪಡೆಗಳು ರಾಜ್ಯಕ್ಕೆ ಆಗಮಿಸಲಿವೆ. ಜಿಲ್ಲಾ ಎಸ್ಪಿ ಹಾಗೂ ಪೊಲೀಸ್ ವೀಕ್ಷಕರು ಸಮಾಲೋಚನೆ ನಡೆಸಿ ಅಗತ್ಯ ಪ್ರದೇಶಗಳಿಗೆ ನಿಯೋಜನೆ ಮಾಡುತ್ತಾರೆ. ಆಯಾ ಕ್ಷೇತ್ರಗಳಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ. ಚುನಾವಣಾ ಅಕ್ರಮ ತಡೆಯುವುದು ಇದರ ಉದ್ದೇಶವಾಗಿದೆ ಎಂದರು.

ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುವ 14 ಕ್ಷೇತ್ರಗಳಲ್ಲಿ 2.88 ಕೋಟಿ ಮತದಾರರಿದ್ದಾರೆ. 11 ಸಾವಿರ ಸೇವಾ ಮತದಾರರಿದ್ದಾರೆ. 1.44 ಕೋಟಿ ಪುರುಷ, 1.43 ಮಹಿಳಾ ಹಾಗೂ 5.99 ಲಕ್ಷ ಯುವ ಮತದಾರರಿದ್ದಾರೆ, ನಿನ್ನೆಯಿಂದ ನೋಂದಾಯಿತ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು ಮತದಾನವನ್ನು ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಏ.18ರ ವರೆಗೂ ಈ ಪ್ರಕ್ರಿಯೆ ನಡೆಯಲಿದೆ ಎಂದರು.

30, 602 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮತದಾನಕ್ಕೆ ಅನುಕೂಲವಾಗುವಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿವುದು. ಶೇ.50ರಷ್ಟು ಮತಗಟ್ಟೆಗಳಲ್ಲಿ ಮತದಾನವನ್ನು ವೆಬ್ ಕಾರ್ಪಿಂಗ್ ಮಾಡಲಾಗುವುದು ಎಂದರು.ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ 24*7 ಮೂರು ಪಾಳಿಯಲ್ಲಿ ವಿವಿಧ ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಇದುವರೆಗೂ 345 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ, ಮದ್ಯ ಜಪ್ತಿ ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ 88 ಕೋಟಿ ರೂ. ಜಪ್ತಿ ಮಾಡಲಾಗಿದೆ. ಜಪ್ತಿಯಾದ ನಗದಿನಲ್ಲಿ ಸೂಕ್ತ ದಾಖಲೆ ಒದಗಿಸಿದ ಶೇ.49ರಷ್ಟು ಪ್ರಕರಣದಲ್ಲಿ ಹಣ ಹಿಂದಿರುಗಿಸಲಾಗಿದೆ. ಶೆ.51 ರಷ್ಟು ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಶೇ.90 ಪ್ರಕರಣಗಳಲ್ಲಿ ಚಾರ್ಚ್ಶೀಟ್ ಹಾಕಲಾಗಿದೆ. ಶೇ. 40ರಷ್ಟು ಪ್ರಕರಣದಲ್ಲಿ ಶಿಕ್ಷೆಯಾಗಿದೆ ಎಂದರು.

ಮನೆ ಮನೆಗೆ ತೆರಳಿ ಮತದಾನದ ಜಾಗೃತಿ:
ರಾಜ್ಯದ ಸರಾಸರಿ ಮತದಾನಕ್ಕಿಂತ ಕಡಿಮೆ ಮತದಾನವಾಗಿರುವ ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿ ಮತದಾನದ ಬಗ್ಗೆ ಜಾಗೃತಿ ಮೂಡಿಲಾಗುತ್ತಿದೆ. ಐಟಿ-ಬಿಟಿ ಪ್ರಮುಖ ಸಂಸ್ಥೆಗಳಿಗೂ ಸಿಬ್ಬಂದಿಗೆ ರಜೆ ನೀಡಿ ಮತದಾನಕ್ಕೆ ಪ್ರೋತ್ಸಾಹ ನೀಡುವಂತೆ ಕೋರಲಾಗಿದೆ. ಅಲ್ಲದೆ ಏ.20ರಿಂದ ಬೆಸ್ಕಾಂ, ಬೆಂಗಳೂರು ಜಲಮಂಡಳಿ ವತಿಯಿಂದ ಮತದಾರಿಗೆ ಸಂದೇಶ ರವಾನಿಸಲಾಗುವುದು. ಹಾಲಿನ ಪಾಕೆಟ್ ಮೇಲೆಯೂ ಮತದಾನದ ಜಾಗೃತಿ ಸಂದೇಶ ಮುದ್ರಿಸಲಾಗುತ್ತದೆ.

2019ರಲ್ಲಿ 43 ವಿಧಾನ ಸಭಾ ಕ್ಷೇತ್ರಗಳ 5 ಸಾವಿರ ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿತ್ತು ಎಂದರು. ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರು ಜೊತೆಯಲ್ಲಿ ಹಣ ಕೊಂಡೊಯ್ಯುವುದು ಸಾಮಾನ್ಯವಾಗಿದ್ದು, ಅವರಿಗೆ ವಿನಾಕಾರಣ ತೊಂದರೆಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

ಸಂವಾದದಲ್ಲಿ ರಾಜ್ಯ ಹೆಚ್ಚುವರಿ ಚುನಾವಣಾಧಿಕಾರಿಗಳಾದ ವೆಂಕಟೇಶ್ ಕುಮಾರ್, ಕೂರ್ಮಾರಾವ್, ಮಾಧ್ಯಮ ವಿಶೇಷಾಧಿಕಾರಿ ಎ.ವಿ. ಸೂರ್ಯಸೇನ್, ಪ್ರೆಸ್ ಕ್ಷಬ್ ಅಧ್ಯಕ್ಷ ಆರ್. ಶ್ರೀಧರ, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ ಮತ್ತಿತರರು ಇದ್ದರು.

RELATED ARTICLES

Latest News