Homeರಾಜಕೀಯ'ಸ್ಟಿಂಗ್‌ ಮಾಸ್ಟರ್‌' ವಿರುದ್ಧವೇ ಸ್ಟಿಂಗ್‌ ಆಪರೇಷನ್ ನಡೆಯುತ್ತಿದೆ ಎಂಬುದು ಹಾಸ್ಯಾಸ್ಪದ : ಹೆಚ್ಡಿಕೆ

‘ಸ್ಟಿಂಗ್‌ ಮಾಸ್ಟರ್‌’ ವಿರುದ್ಧವೇ ಸ್ಟಿಂಗ್‌ ಆಪರೇಷನ್ ನಡೆಯುತ್ತಿದೆ ಎಂಬುದು ಹಾಸ್ಯಾಸ್ಪದ : ಹೆಚ್ಡಿಕೆ

ನವದೆಹಲಿ,ಅ.9- ಸ್ಟಿಂಗ್‌ ಆಪರೇಷನ್‌ ಮಾಡುವುದರಲ್ಲಿ ಮಾಸ್ಟರ್‌ ಆಗಿರುವ ವ್ಯಕ್ತಿಯೇ ತನ್ನ ವಿರುದ್ಧ ಸ್ಟಿಂಗ್‌ ನಡೆಯುತ್ತಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಸ್ಟಿಂಗ್‌ ಮಾಡುವ ಗುರುವಿಗೇ ತಿರುಮಂತ್ರ ಹೇಳಲು ಸಾಧ್ಯವೇ? ಹಾಗೇನಾದರೂ ಆಗಿದ್ದರೆ ತನಿಖೆ ಮಾಡಿಸಲಿ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದ್ದಾರೆ.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ನನ್ನನ್ನು ಟ್ರ್ಯಾಪ್‌ ಮಾಡಲಿಕ್ಕೆ ಬಂದಿದ್ದರು, ಆ ವಿಷಯ ಪೊಲಿಸರಿಗೂ ಗೊತ್ತು. ಹಲವಾರು ಫೋಟೋಗಳು ಇವೆ ಎಂದು ಬೇರೆ ಹೇಳಿದ್ದಾರೆ. ಸ್ಟಿಂಗ್‌ ಮಾಡಿದ ಆ ಪಿತಾಮಹ ಯಾರು? ಅಂತಲೂ ಗೊತ್ತು ಎಂದಿದ್ದಾರೆ. ಅವರೆಲ್ಲಾ ಯಾರೂ ಎಂಬುದನ್ನು ಜನರ ಮುಂದೆ ಇಡಿ. ನಿಮ ಬಳಿ 35 ಲಕ್ಷ ರೂ. ಬಹುಮಾನ ಪಡೆದುಕೊಂಡು ಎಸ್‌‍ ಐಟಿ ಇದೆಯಲ್ಲವೇ? ಎಂದು ಟಾಂಗ್‌ ಕೊಟ್ಟಿದ್ದಾರೆ.

ನೈಸ್‌‍ ಕಂಪನಿಗೆ ಸಂಬಂಧಿಸಿದ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡಿದಾಗ ಉಂಟಾದ ಮುಜುಗರವನ್ನು ಮರೆಮಾಚಲು ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗದಂತೆ ತಡೆಯಲು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ವಿರುದ್ಧ ಆರೋಪ ಮಾಡಿದ್ದಾರೆ. ಸ್ಟಿಂಗ್‌ ಪಿತಾಮಹ ಯಾರು? ಅವರ ಬಗ್ಗೆ ಮಾಹಿತಿ ಇದ್ದರೆ ಜನಗಳ ಮುಂದೆ ಇಡಿ. ಅದಕ್ಕೆ ಯಾಕೆ ಹಿಂಜರಿಯುತ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರಾಜ್ಯದ ಸಿಎಂ ಆಗಿ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ರ್ಯಾಪ್‌ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆ ವಿಷಯವನ್ನು ಯಾಕೆ ಮುಚ್ಚಿಟ್ಟಿದ್ದೀರಿ? ರಾಜ್ಯದ ಸಿಎಂ ಆಗಿದ್ದವರನ್ನು, ಹಾಲಿ ಮುಖ್ಯಮಂತ್ರಿಯನ್ನು ಟ್ರ್ಯಾಪ್‌ ಮಾಡತಕ್ಕದ್ದು ಅಂದರೆ ಏನರ್ಥ? ಎಲ್ಲಾ ಮಾಹಿತಿ ಇಟ್ಟುಕೊಂಡು ಏನು ಮಾಡುತ್ತಿದ್ದೀರಿ? ಎಂದು ಕೇಂದ್ರ ಸಚಿವರು ಕೇಳಿದ್ದಾರೆ.

ಈ ಹಿಂದೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಟ್ರ್ಯಾಪ್‌ ಮಾಡುವ ಕೆಲಸ ಮಾಡಿದ್ದು ಯಾರು? ಮಾಜಿ ಮಂತ್ರಿ ಕೆ.ಎನ್‌. ರಾಜಣ್ಣ ಅವರು ವಿಧಾನಸಭೆಯಲ್ಲೇ 40-48 ಜನರ ಟ್ರ್ಯಾಪ್‌ ಬಗ್ಗೆ ಮಾತನಾಡಿದ್ದರು. ನಮ ಮಂತ್ರಿಮಂಡಲದ ಮಂತ್ರಿಯೇ ಮೂಲಪುರುಷನೇ ಇದ್ದಾನೆ ಎಂದು ರಾಜಣ್ಣ ಹೇಳಿದ್ದರು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾವ ರೀತಿ ಮುಗಿಸಿದಿರಿ ಎನ್ನುವುದನ್ನು ನಾನು ಬಲ್ಲೆ. ಸತ್ಯ ಹೇಳಿ, ಇದೆಲ್ಲಾ ನಿಮದೇ ಕೈವಾಡ ಅಲ್ಲವೇ? ಎಂದು ಡಿಕೆಶಿಯನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಸ್ಟಿಂಗ್‌ ಯಾರು ಮಾಡಲು ಬಂದರು ಎಂಬುದನ್ನು ಮುಖ್ಯಮಂತ್ರಿ ಹೇಳಲೇಬೇಕಾಗುತ್ತದೆ. ಅವರು ಹೇಳಿಕೆ ಕೊಟ್ಟು ಸುಮನೆ ಇರೋಕೆ ಆಗೋದಿಲ್ಲ. ಮುಖ್ಯಮಂತ್ರಿ ವಿರುದ್ಧವೇ ಟ್ರ್ಯಾಪ್‌ ನಡೆಯುತ್ತಿದೆ ಎಂದರೆ ಸಾಮಾನ್ಯ ವಿಷಯವಲ್ಲ. ಇದೆಲ್ಲಾ ತನಿಖೆಗೆ ಒಳಪಡಬೇಕು. ರಾಜ್ಯಪಾಲರನ್ನು ಭೇಟಿಗೆ ತೆರಳಿದ್ದವರಲ್ಲಿ ಒಬ್ಬರು ಇದ್ದಾರೆ ಎಂದು ಹೇಳಿದ್ದೀರಾ? ಯಾರು ಅವರು? ಎಂಬುದನ್ನು ಅವರು ಹೇಳಬೇಕಾಗುತ್ತದೆ ಎಂದು ಅವರು ಒತ್ತಾಯಿಸಿದರು.

RELATED ARTICLES
spot_img

Latest News