ಬೆಂಗಳೂರು,ಏ.13- ಹಿರಿಯ ಸಚಿವರು ರಾಜೀನಾಮೆ ನೀಡಬೇಕೆಂದು ಹೈಕಮಾಂಡ್ ತೀರ್ಮಾನ ತೆಗೆದುಕೊಂಡು ಬದಲಾವಣೆ ಮಾಡಬೇಕಾದರೆ ಅದನ್ನು ಪ್ರಶ್ನಿಸದೇ ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಹಿರಿಯ ಶಾಸಕರು ಸಚಿವ ಸ್ಥಾನ
ಕೇಳಿರುವುದರಲ್ಲಿ ತಪ್ಪಿಲ್ಲ. ಆದರೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಹೊಸಬರಿಗೆ ಅವಕಾಶ ಮಾಡಿಕೊಡಲು ಸಂಪುಟದಲ್ಲಿರುವ ಹಿರಿಯರೂ ಕೂಡ ರಾಜೀನಾಮೆ ನೀಡಬೇಕೆಂದಾದರೆ, ನಾನಾಗಲೀ, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್. ಎಚ್.ಕೆ.ಪಾಟೀಲ್ ಸೇರಿದಂತೆ ಹಿರಿಯ ಸಚಿವರು ಹೈಕಮಾಂಡ್ ನಿರ್ಧಾರವನ್ನು ಒಪ್ಪದೇ ಪ್ರಶ್ನೆ ಮಾಡಲು ಅವಕಾಶ ಇಲ್ಲ ಎಂದು ಹೇಳಿದರು.
ರಾಜಕೀಯ ಒತ್ತಡಕ್ಕೆ ಮಣಿದು ಸಚಿವ ಸ್ಥಾನದಿಂದ ನಮನ್ನು ಬದಲಾವಣೆ ಮಾಡಿದರೆ, ಅದನ್ನು ಬೇಡ ಎನ್ನಲು ಸಾಧ್ಯವಿಲ್ಲ. ಅನನುಭವಿಗಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂಬುದು ನಮಗೆ ಸಂಬಂಧ ಪಡದ ವಿಚಾರ. ಎರಡು, ಮೂರು ಬಾರಿ ಶಾಸಕರಾಗಿರುವವರಿಗೆ ಸಚಿವ ಸ್ಥಾನ ನಿಭಾಯಿಸುವ ಸಾಮರ್ಥ್ಯ ಇರುತ್ತದೆ. ಯಾವುದೇ ಖಾತೆಯನ್ನಾಗಲಿ ನಿಭಾಯಿಸುವ ಅನುಭವ ಸಹಜವಾಗಿರುತ್ತದೆ ಎಂದರು.
ಸಂಪುಟದಲ್ಲಿ ಅವಕಾಶ ಕಲ್ಪಿಸಲು ಹೈಕಮಾಂಡ್, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಒಟ್ಟಾಗಿ ಕುಳಿತು ತೀರ್ಮಾನ ತೆಗೆದುಕೊಳ್ಳಬೇಕು. ಹಿಂದಿನಿಂದಲೂ ಇದೇ ಪದ್ಧತಿ ನಡೆದು ಬರುತ್ತಿದೆ. ಈಗಲೂ ಅದನ್ನೇ ಅನುಸರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಶಾಸಕರ ದೆಹಲಿ ಪ್ರವಾಸವನ್ನು ಗ್ಯಾಂಬ್ಲಿಂಗ್ ಎಂದು ಕರೆಯುವುದು ಸರಿಯಲ್ಲ. ಕೆಲವರು ಬಹಿರಂಗವಾಗಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಸಲ್ಲಿಸುತ್ತಿರಬಹುದು. ಅರ್ಹತೆ ಇದೆ ಎಂದು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವಕಾಶ ಸಿಕ್ಕವರಿಗೆ ಮತ್ತೆ ಸಿಗುತ್ತಿದೆ. ಹೊಸಬರಿಗೆ ಅವಕಾಶ ಬೇಕು ಎಂಬುದೂ ಕೂಡ ಸರಿ. ಪ್ರತಿ ಬಾರಿ ಸಂಪುಟ ಪುನರ್ ರಚನೆ ಮಾಡುವಾಗಲೂ ಕೆಲವು ಹಿರಿಯರನ್ನು ಉಳಿಸಿಕೊಂಡು ಕಿರಿಯರಿಗೆ ಅವಕಾಶ ಕಲ್ಪಿಸುವುದು ಸಾಮಾನ್ಯ ಎಂದರು.
ಕೆಪಿಸಿಸಿ ಅಧ್ಯಕ್ಷರು ಹಾಗೂ ಸರ್ಕಾರದ ನಾಯಕತ್ವ ಬದಲಾವಣೆಯಂತಹ ಮಹತ್ವದ ನಿರ್ಧಾರಗಳು ಹೈಕಮಾಂಡ್ ಮಟ್ಟದಲ್ಲೇ ತೆಗೆದುಕೊಳ್ಳಬೇಕು. ರಾಜ್ಯ ಮಟ್ಟದಲ್ಲಿ ಯಾರೂ ಏನೇ ಹೇಳಿಕೆ ನೀಡಿದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ. ಹೈಕಮಾಂಡ್ ನಾಯಕರು ಎಲ್ಲವನ್ನೂ ಗಮನಿಸುತ್ತಿರುತ್ತದೆ. ಹೈಕಮಾಂಡ್ ಮೌನವಾಗಿಲ್ಲ. ಸೂಕ್ತ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆೆ ಎಂದು ಹೇಳಿದರು.
ತಮನ್ನು ಮತ್ತೊಂದು ಅವಧಿಗೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಶಾಸಕರು ದೆಹಲಿಗೆ ಹೋಗಿರುವುದು ಸಂಪುಟ ಪುನರ್ ರಚನೆಗೆ ಒತ್ತಡ ಹೇರುವ ಸಲುವಾಗಿ, ಈ ಸಂದರ್ಭದಲ್ಲಿ ಪರಮೇಶ್ವರ್ ಅನುಭವಿ ಇದ್ದಾರೆ. ಅವರಿಗೆ ಮತ್ತೊಮೆ ಅಧ್ಯಕ್ಷ ಸ್ಥಾನ ವಹಿಸಬೇಕು ಎಂಬ ಯಾವ ಪ್ರಸ್ತಾವ ಇಲ್ಲ. ಯಾರಿಂದ ಯಾವ ಮಾಹಿತಿಯನ್ನು ತೆಗೆದುಕೊಳ್ಳಬೇಕು ಎಂಬುದು ಹೈಕಮಾಂಡ್ಗೆ ಗೊತ್ತಿದೆ ಎಂದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಅಬ್ದುಲ್ ಜಬ್ಬಾರ್ ಟಿಕೆಟ್ ಕೇಳಿದ್ದರು, ಅವರಿಗೆ ಸಿಗಲಿಲ್ಲ. ಹೀಗಾಗಿ ಅವರು ಚುನಾವಣಾ ಪ್ರಚಾರದಲ್ಲಿ ಹೆಚ್ಚು ಭಾಗವಹಿಸಲಿಲ್ಲ. ನಂತರದ ಬೆಳವಣಿಗೆಯಲ್ಲಿ ಕೆಪಿಸಿಸಿಯ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಸ್ಥಾನಕ್ಕೆ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಮುಸ್ಲಿಂ ಮುಖಂಡರ ನಡುವೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚರ್ಚೆಗಳಾಗುತ್ತಿವೆ. ಕೆಪಿಸಿಸಿ ಅಧ್ಯಕ್ಷರು ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ನಾನೇ ದೂರವಾಣಿಯಲ್ಲಿ ಮಾತನಾಡಿ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವಂತೆ ಸಲಹೆ ನೀಡಿದ್ದೆ. ಕೇರಳದಲ್ಲಿ ಕೆ.ಸಿ.ವೇಣುಗೋಪಾಲ್ ಅವರ ಸೂಚನೆ ಮೇರೆಗೆ ಪ್ರಚಾರ ಮಾಡುತ್ತಿದ್ದೇನೆ. ಅವರು ಅನುಮತಿ ಕೊಟ್ಟರೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬರುತ್ತೇನೆ ಎಂದಿದ್ದರು. ಮುಖ್ಯಮಂತ್ರಿಯವರು ಕೂಡ ನನ್ನ ಎದುರಿಗೇ ಜಮೀರ್ ಅವರಿಗೆ ಕರೆ ಮಾಡಿ ಎರಡು ಕ್ಷೇತ್ರಗಳಲ್ಲೂ ಒಂದು ದಿನವಾದರೂ ಪ್ರಚಾರ ಮಾಡುವಂತೆ ಸೂಚಿಸಿದರು. ಅದರಂತೆ ಜಮೀರ್ ಎರಡು ದಿನ ಪ್ರಚಾರ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
