Thursday, April 16, 2026
Homeರಾಜಕೀಯದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ನಮ್ಮ ದೇಶದವರಲ್ಲ ಎಂದು ಹೇಳಿ : ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ಸವಾಲು

ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ನಮ್ಮ ದೇಶದವರಲ್ಲ ಎಂದು ಹೇಳಿ : ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ಸವಾಲು

Say that Dalits, minorities, tribals do not belong to our country: Priyank Kharge challenges BJP

ಕಲಬುರಗಿ, ಏ.9- ಬಿಜೆಪಿಗರು ಪಾರ್ಲಿಮೆಂಟ್‌ನಲ್ಲಿ ಮೆಜಾರಿಟಿ ಹೊಂದಿದ್ದಾರೆ ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ನಮ್ಮ ದೇಶದವರಲ್ಲ ಎಂದು ಹೇಳಿಬಿಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಯುಎಇ ದವರನ್ನು ತಬ್ಬಿಕೊಳ್ಳುತ್ತಾರೆ. ಅವರಿಂದ ಪೆಟ್ರೋಲ್‌ ಬೇಕು, ಯೂರಿಯಾ ಬೇಕು.

ಅಷ್ಟೇಕೆ, ಕೇಸರಿ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಯುಎಇ ನಿಂದ ಬರುತ್ತದೆ. ಹಾಗಾದರೆ ಮುಸ್ಲಿಂ ರಾಷ್ಟ್ರಗಳ ಜೊತೆಗೆ ಎಲ್ಲ ವ್ಯಾಪಾರ ವ್ಯವಹಾರ ನಿಲ್ಲಿಸಲಿ ಎಂದು ಟಾಂಗ್‌ ನೀಡಿದರು. ಕೊರೋನಾ ಸಮಯದಲ್ಲಿ ಅಮಿತ್‌ ಶಾ ಮಗ ಐಪಿ ಎಲ್‌ ಆಡಿಸಿದ್ದು ಇದೇ ದುಬೈನಲ್ಲಿ. ಈ ತರಹದ ಇಬ್ಬಗೆ ನೀತಿ ಯಾಕೆ? ಅವರ ಮಾತುಗಳನ್ನು ಅವರೇ ಸಮರ್ಥನೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಖರ್ಗೆ ಕುಟುಕಿದರು.

ಹಿರಿಯ ನಾಯಕ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿಷಸರ್ಪ ಕೊಲ್ಲಿ ಹೇಳಿಕೆಯ ವಿರುದ್ದ ದೂರು ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್‌, ದೂರು ದಾಖಲಿಸಲಿ ಬಿಡಿ. ಆರ್‌ಎಸ್‌‍ಎಸ್‌‍ ಯಾಕೆ ದೂರು ದಾಖಲಿಸಿಲ್ಲ? ಅವರು ನೋಂದಣಿ ಮಾಡಿಸಿಕೊಂಡಿದ್ದರೆ ಅವರ ಲೆಟರ್‌ ಹೆಡ್‌ನಲ್ಲಿ ದೂರು ದಾಖಲಿಸಲಿ. ತಮಗೆ ಯಾರ ಸಹಾಯ ಬೇಡ ಎಂದು ಸ್ವತಃ ಮೋಹನ್‌ ಭಾಗವತ್‌ ಹೇಳಿದ್ದಾರೆ,

ಅವರೇ ದಾಖಲಿಸಲಿ. ನನ್ನ ಮೇಲೂ ಎರಡು ಕೇಸುಗಳಿವೆ ಎಂದು ಸವಾಲ್‌ ಹಾಕಿದರು.
ನಮದು ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವ. ಬುದ್ಧ ಬಸವ ಅವರ ತತ್ವಗಳನ್ನು ನಾವು ಹೊಂದಿದ್ದೇವೆ. ಕೆಲವೊಬ್ಬರು ಈ ತತ್ವಗಳ ಹಾಗೂ ಸಂವಿಧಾನ ವಿರೋಧಿ ಸಿದ್ಧಾಂತ ಹೊಂದಿರುತ್ತಾರೆ.ಇದು ಸರಿಯಲ್ಲ ಎನ್ನುವುದು ನಮ ವೈಯಕ್ತಿಕ ಅಭಿಪ್ರಾಯ. ಅಷ್ಟಕ್ಕೂ ಹೇಳಿದ್ದೇನು? ವಿಷ ಸರ್ಪಗಳನ್ನು ಹೊಡೆಯಿರಿ ಎಂದಿದ್ದಾರೆ. ವಿಷ ಸರ್ಪ ಎದುರಾದರೆ ಯಾರಾದರೂ ಹಾಲು ಎರೆಯಲು ಆಗುತ್ತದೆಯೇ ? ಎಂದು ಪ್ರಶ್ನಿಸಿದರು.

ಆಸ್ಸಾಂ ಸಿಎಂ ಹೇಮಂತ ಬಿಸ್ವಾ ಶರ್ಮಾ ಅವರು ಖರ್ಗೆ ಹಾಗೂ ರಾಹುಲ್‌ ಗಾಂಧಿ ಬಗ್ಗೆ ಕೇವಲವಾಗಿ ಮಾತನಾಡಿರುವ ಕುರಿತು ಕೇಳಿದಾಗ, ಸೋಲಿನ ಭೀತಿಯಲ್ಲಿ ಅವರು ಹಾಗೆ ಮಾತನಾಡುತ್ತಿದ್ದಾರೆ ಅಷ್ಟೇ. ಬಿಸ್ವಾ ಶರ್ಮ ಅವರ ಡ್ಯಾಡಿ ಮೋದಿ ಅವರೇ ಸಂಸತ್ತಿನಲ್ಲಿ ಖರ್ಗೆ ಸಾಹೇಬರಿಗೆ ಉತ್ತರ ಕೊಟ್ಟಿಲ್ಲ ಇವರೇನು ಕೊಡುತ್ತಾರೆ? ಅವರು ಮೊದಲು ಕಾಂಗ್ರೆಸ್‌‍ನಲ್ಲಿದ್ದವರು. ಈಗ ಬಿಜೆಪಿಗೆ ಹೋದ ಮೇಲೆ ಆರ್‌ಎಸ್‌‍ಎಸ್‌‍ ನಿಂದ ಪಾಠ ಕಲಿತಿದ್ದಾರೆ.

ಅವರ ಹೆಂಡತಿ ಹೆಸರಲ್ಲಿ ಮೂರು ಪಾಸ್‌‍ ಪೋರ್ಟ್‌ ಇವೆ ಎನ್ನಲಾಗುತ್ತಿದೆ. ಅವರು ನಮಗೆ ದೇಶಭಕ್ತಿ ಪಾಠ ಹೇಳುತ್ತಾರಾ? ಆಸ್ಸಾಂ ಮೂಲಕ ಬಾಂಗ್ಲಾದವರು ಕರ್ನಾಟಕಕ್ಕೆ ಬರುತ್ತಾರೆ ಎನ್ನುತ್ತಾರೆ ಹಾಗಾದರೆ ಆಸ್ಸಾಂ ಸಿಎಂ, ಹೋಂ ಮಿನಿಸ್ಟರ್‌ ಕತ್ತೆ ಕಾಯುತ್ತಿದ್ದಾರಾ? ಎಂದು ಟೀಕಿಸಿದರು.

ಇತ್ತೀಚಿಗೆ ಕೇರಳದಲ್ಲಿ ಚುನಾವಣಾ ಪ್ರಚಾರ ಮಾಡಿದ ಮೋದಿ, ಕೇರಳ ಫೈಲ್‌‍, ಧುರಂಧರ ಸಿನಿಮಾ ನಿಜ ಅಂತ ಹೇಳಿದ್ದಾರೆ. ಆ ಚಿತ್ರಗಳ ಗಳಿಗೆ ಬಗ್ಗೆ ಹೇಳುವವರು ಆರ್‌ಎಸ್‌‍ಎಸ್‌‍ ಬಗ್ಗೆ ಶತಕ್‌ ಎನ್ನುವ ಸಿನಿಮಾ ಹೊರಬಂದು ಫ್ಲಾಪ್‌ ಆಗೊಯ್ತು. ಆರ್‌ಎಸ್‌‍ಎಸ್‌‍ನವರಿಗೆ ಅವರ ಸಂಘಟನೆಯ ಸಿನಿಮಾ ಬಗ್ಗೇನೇ ನಂಬಿಕೆ ಇಲ್ಲ. ಅವರೆಲ್ಲ ನೋಡಿದ್ದರೆ ಒಳ್ಳೆ ಕಲೆಕ್ಷನ್‌ ಆಗಿರೋದು ಎಂದು ಪ್ರಿಯಾಂಕ್‌ ಕುಟುಕಿದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿಡಿದಿದೆ ಎನ್ನುವ ಪ್ರತಾಪ್‌ ಸಿಂಹ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ಅವನು ನಡೆಯದ ನಾಣ್ಯ. ಅವನ ಬಗ್ಗೆ ಮೈಸೂರಲ್ಲೇ ಬೆಲೆ ಇಲ್ಲ, ಇಲ್ಲಿ ಯಾಕೆ ಅವರ ಹೆಸರು ತರ್ತೀರಿ? ನಮ ಬಗ್ಗೆ ಮಾತನಾಡುವ ಬದಲು ಸಂಸತ್‌ ನಲ್ಲಿ ಸೋಕ್‌ ಬಾಂಬ್‌ ಇಟ್ಟವರು ಯಾರು? ಅವರಿಗೆ ಪಾಸ್‌‍ ಕೊಟ್ಟವರು ಯಾರು? ಪ್ರತಾಪ್‌ ಸಿಂಹ್‌ ಮೊಬೈಲ್‌ ಸೀಜ್‌ ಮಾಡಿದ್ರಲ್ಲ ಏನಿತ್ತು ಅಲ್ಲಿ? ಆ ಬಗ್ಗೆ ಅವನು ಹೇಳಲಿ. ಈ ಸಲ ಎಂಎಲ್‌ಎಗೆ ನಿಲ್ಲುತ್ತಾನಂತೆ ಅವನಿಗೆ ಟಿಕೆಟ್‌ ಕೊಡ್ತಾರಾ? ಎಂದು ವ್ಯಂಗ್ಯವಾಡಿದರು.

ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್‌ ಖರ್ಗೆ ಅವರನ್ನು ಜೈಲಿಗೆ ಹಾಕಿಸುತ್ತೇವೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್‌ ಖರ್ಗೆ, ಅವರಿಗೆ ತಾಕತ್‌ ಇದ್ದರೆ ಸ್ಕ್ವಾಡ್‌ ತಂದು ನಮನ್ನು ಅರೆಸ್ಟ್‌ ಮಾಡಿಸಲಿ ಎಂದು ಸವಾಲು ಹಾಕಿದರು. ನನ್ನದು ಹಾಗೂ ಖರ್ಗೆ ಒಂದೇ ಸಿದ್ಧಾಂತ. ಅದರಲ್ಲೇನಿದೆ ತಪ್ಪು? ನಮ ಬಸವ ಸಿದ್ಧಾಂತ. ನಮಲ್ಲಿ ಇದ್ದಾಗ ನಾರಾಯಣ ಸ್ವಾಮಿ ಅವರಿಗೂ ಇತ್ತು. ಯಾವಾಗ ಬಿಜೆಪಿ ಹೋಗಿ ಆರ್‌ಎಸ್‌‍ಎಸ್‌‍ ಚಡ್ಡಿ ತೊಟ್ಟುಕೊಂಡರೋ ಸಂಪೂರ್ಣ ಬದಲಾಗಿದ್ದಾರೆ ಎಂದು ಛೇಡಿಸಿದರು.ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಜೆಸ್ಕಾಂ ಚೇರಮನ್‌ ಪ್ರವೀಣ್‌ ಪಾಟೀಲ್‌ ಹರವಾಳ ಮತ್ತಿತರು ಇದ್ದರು.

RELATED ARTICLES

Latest News