ಬೆಂಗಳೂರು, ಜು.27- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಇದೇ ವಾರ ನೂತನ ಸಚಿವರಿಗೆ ಅಧಿಕಾರದ ಬಂಪರ್ ಲಭಿಸಲಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಅಧಿಕೃತವಾದ ಹೇಳಿಕೆ ನೀಡಿದ್ದು, ಈ ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಘೋಷಿಸಿದ್ದಾರೆ.
ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಎಲ್ಲರೂ ಆತುರದಲ್ಲಿದ್ದಾರೆ. ಬಹುತೇಕ ಈ ವಾರದಲ್ಲೇ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಅಧಿಕಾರ ಹಸ್ತಾಂತರ ಬಳಿಕ ಜೂನ್ 3ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಅವರೊಟ್ಟಿಗೆ 13 ಮಂದಿ ಸಚಿವರು ಮಾತ್ರ ಸಂಪುಟದಲ್ಲಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಬಿತ್ತಿದ ಬೆಳೆಗಳು ಒಣಗಿ, ರೈತರು ಸಂಕಷ್ಟದಲ್ಲಿದ್ದಾರೆ. ಬರ ಅಧ್ಯಯನಕ್ಕೆ ಮುಖ್ಯಮಂತ್ರಿಯವರು ಈಗಾಗಲೇ ಮೂರು ಕಂದಾಯ ವಿಭಾಗಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯವರ ಜೊತೆಗೆ ಮತ್ತು ಪ್ರತ್ಯೇಕವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ.
ಆದರೆ ಪ್ರಸ್ತುತ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಸಹಕಾರ ಸಚಿವರ ಕೊರತೆ ಎದ್ದು ಕಾಣುತ್ತಿದೆ. ಬೆಳೆ ನಷ್ಟಕ್ಕೆ ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಬೇಕಿತ್ತು. ಸಹಕಾರ ಇಲಾಖೆಯಿಂದ ಕೃಷಿ ಚಟುವಟಿಕೆಗಳಿಗೆ ಬೆಳೆ ಸಾಲ ನೀಡಿ ರೈತರಿಗೆ ನೈತಿಕೆ ಬೆಂಬಲ ಕೊಡಬೇಕಿತ್ತು. ಆದರೆ ಸಚಿವರಿಲ್ಲದ ಕಾರಣಕ್ಕೆ ಆ ಕೆಲಸಗಳು ಅಸಮರ್ಪಕವಾಗಿವೆ.
ತಮಗೆ ವಹಿಸಿದ ಜವಾಬ್ದಾರಿಗಳನ್ನು ಸಚಿವರು ನಿಭಾಯಿಸುತ್ತಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳನ್ನು ನಿಭಾಯಿಸಲು ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಸಚಿವರೂ ಇಲ್ಲದೆ ಕೃಷಿ ಮತ್ತು ಶಿಕ್ಷಣದ ಚಟುವಟಿಕೆಗಳು ಅನಾಥವಾಗಿವೆ.
14 ಮಂದಿ ಸಂಪುಟದ ಮೇಲೆ ಭಾರೀ ಪ್ರಮಾಣದ ಕಾರ್ಯದೊತ್ತಡ ಇದೆ. ಮುಖ್ಯಮಂತ್ರಿಯವರ ಬಳಿ 30ಕ್ಕೂ ಹೆಚ್ಚು ಇಲಾಖೆಗಳ ಕಾರ್ಯಭಾರ ಇದೆ. ಒಂದೆಡೆ ಬರ ನಿರ್ವಹಣೆ, ಮತ್ತೊಂದೆಡೆ ದೆಹಲಿಯ ಪ್ರವಾಸಗಳ ನಡುವೆ ಕಡತಗಳು ವಿಲೇವಾರಿಯಾಗದೆ ರಾಶಿ ಬೀಳುತ್ತಿವೆ.
ಸಚಿವ ಸಂಪುಟ ವಿಸ್ತರಣೆಯಾಗಿ ಪೂರ್ಣ ಪ್ರಮಾಣದಲ್ಲಿ ಆಡಳಿತ ಅಸ್ತಿತ್ವಕ್ಕೆ ಬಂದರೆ ಜನರೂ ನೆಮದಿಯಾಗಿ ನಿಟ್ಟುಸಿರು ಬಿಡಲಿದ್ದಾರೆ. ಆದರೆ ಸಚಿವ ಸಂಪುಟ ವಿಸ್ತರಣೆಗೆ ಈವರೆಗೂ ಕಾಲ ಕೂಡಿ ಬಂದಿಲ್ಲ. ಎರಡು ಬಾರಿ ದೆಹಲಿಗೆ ಭೇಟಿ ನೀಡಿದಾಗಲೂ ರಾಜ್ಯ ನಾಯಕರು ಬರಿಗೈನಲ್ಲಿ ವಾಪಾಸ್ಸಾಗಿದ್ದಾರೆ.
ಇದು ಮೂರನೇ ಬಾರಿಯ ಭೇಟಿಯಾಗಿದೆ. ಇಂದು ದೆಹಲಿಯಲ್ಲಿ ಸಂಸದರ ಸಭೆ ನಡೆಸುವ ಮುಖ್ಯಮಂತ್ರಿಯವರು ನಾಳೆ ಪಕ್ಷದ ವರಿಷ್ಠರ ಜೊತೆ ಸಚಿವ ಸಂಪುಟ ವಿಸ್ತರಣೆ, ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ, ವಿಧಾನಸಭೆ ಅಧ್ಯಕ್ಷರ ನೇಮಕಾತಿ, ನಿಗಮ ಮಂಡಳಿಗಳ ನೇಮಕಾತಿ, ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ, ಕೆಪಿಸಿಸಿ ಸಂಘಟನೆ ಪುನರ್ ರಚನೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮುಖ್ಯಮಂತ್ರಿಯವರ ಜೊತೆ ದೆಹಲಿ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ನಾಳೆ ದೆಹಲಿಯಲ್ಲಿ ಸಭೆ ನಡೆದ ಬಳಿಕ ಬಹುತೇಕ ಬುಧವಾರ ಅಥವಾ ಗುರುವಾರದ ಒಳಗೆ ಸಂಪುಟ ವಿಸ್ತರಣೆಯಾಗಲಿದೆ. ಸಂಪುಟ ಸೇರಲು ಈಗಾಗಲೇ 40ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟು ವರಿಷ್ಠ ನಾಯಕರನ್ನು ಭೇಟಿ ಮಾಡಿ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.
ಸಂಸತ್ ಕಲಾಪದ ನಡುವೆಯೂ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಚಿವ ಸಂಪುಟ ವಿಸ್ತರಣೆಯ ಕುರಿತು ಚರ್ಚೆ ನಡೆಸುವುದಾಗಿ ರಾಜ್ಯ ನಾಯಕರಿಗೆ ಭರವಸೆ ನೀಡಿರುವುದರಿಂದ ಬಹುತೇಕ ಈ ವಾರದಲ್ಲೇ ಎಲ್ಲವೂ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವಿದೆ.
ದೆಹಲಿಯಲ್ಲಿಂದ ಇಂದು ನಮ ಸಂಸತ್ ಸದಸ್ಯರನ್ನು ಭೇಟಿ ಮಾಡುತ್ತಿದ್ದು, ಅವರಿಗೆ ರಾಜ್ಯದ ಬರ ಪರಿಸ್ಥಿತಿ, ನೀರಿನ ಪರಿಸ್ಥಿತಿ, ಕಾವೇರಿ, ಮಹದಾಯಿ, ಮೇಕೆದಾಟು, ಕೃಷ್ಣಾ ಸೇರಿದಂತೆ ಅನೇಕ ನೀರಾವರಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ನಾನು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಯಾವ ವಿಚಾರದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಸಂಸದರಿಗೆ ಮನವಿ ಮಾಡಲು ಹೋಗುತ್ತಿದ್ದೇನೆ. ನಂತರ ಇದೇ ವಿಚಾರಗಳ ಕುರಿತಂತೆ ಬೆಂಗಳೂರಿನಲ್ಲಿ ಸರ್ವಪಕ್ಷ ಸಭೆ ಕರೆಯಲಾಗುವುದು. ರಾಜ್ಯದ ಹಿರಿಯ ನಾಯಕರ ಜೊತೆಗೂ ಪ್ರಮುಖ ವಿಚಾರಗಳನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು.
