ಬೆಂಗಳೂರು, ಮಾ.27- ವಿವಿಧ ಕಾರಣಗಳಿಂದಾಗಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ವ್ಯತ್ಯಯಗೊಂಡಿದ್ದು ಉಪಚುನಾವಣೆಗಳಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ.ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪಂಗಡ ಸಾಂಪ್ರದಾಯಿಕ ಮತ ಬ್ಯಾಂಕ್‌ಗಳಾಗಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಾಗಿ ಹಿಂದುಳಿದ ವರ್ಗಗಳ ಮತಗಳು ಕೊಂಚ ಪ್ರಮಾಣದಲ್ಲಿ ಏರಿಕೆಯಾಗಿದ್ದವು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಬಲವಾಗಿ ಕಾಂಗ್ರೆಸ್‌ನ ಬೆನ್ನಿಗೆ ನಿಂತಿತ್ತು. ಎಂ.ಬಿ.ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ ಅವರಿಂದಾಗಿ ಲಿಂಗಾಯತ ಮತಗಳು ಕಾಂಗ್ರೆಸ್‌ನತ್ತ ಒಲಿದಿದ್ದವು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೋಷಿಯಲ್ ಎಂಜಿನಿಯರಿಂಗ್ ಉತ್ತಮವಾಗಿ ಕೆಲಸ ಮಾಡಿತ್ತು. ಹೀಗಾಗಿ ನಿರೀಕ್ಷೆಯನ್ನು ಮೀರಿ 139 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಕಂಡಿದ್ದರು. ಆದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರು, ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳಿಗೆ ಕೊಟ್ಟಿದ್ದಂತಹ ಮಾತನ್ನು ಉಳಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದೆ.
ಪಂಚಖಾತ್ರಿ ಯೋಜನೆಗಳ ಅನುಷ್ಠಾನದಿಂದಾಗಿ ಆರ್ಥಿಕ ಹೊರೆಯಾಗಿದೆ ಎಂಬ ನೆಪ ಒಡ್ಡಿ ಚುನಾವಣೆಯ ವೇಳೆ ನೀಡಿದ್ದ ಬಹುತೇಕ ಭರವಸೆಗಳನ್ನು ಕಡೆಗಣಿಸಲಾಗಿದೆ. ಈ ಬಗ್ಗೆ ಸಾಂಪ್ರದಾಯಿಕ ಮತ ಬ್ಯಾಂಕ್‌ಗಳಾಗಿರುವ ಸಮುದಾಯಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.
ಸಾಲದೆಂಬಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದೆ ವಂಚನೆ ಮಾಡಿರುವುದರಿಂದ ಮುಸ್ಲಿಂ ಸಮುದಾಯ ಕಾಂಗ್ರೆಸ್ ವಿರುದ್ಧ ಸೆಟೆದು ನಿಂತಿದೆ.ಅಲ್ಪಸಂಖ್ಯಾತರಿಗೆ ಬಿಜೆಪಿ ಆಪ್ತವಲ್ಲ. ಹೀಗಾಗಿ ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂಬ ಹುಂಬತನದಿಂದ ನಾಯಕರು ವರ್ತಿಸುತ್ತಿದ್ದಾರೆ. ಈ ಧೋರಣೆಗಳೇ ಅಲ್ಪಸಂಖ್ಯಾತ ನಾಯಕರನ್ನು ಕೆರಳುವಂತೆ ಮಾಡಿದೆ.
ಒಂದು ವೇಳೆ ಬಿಜೆಪಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ನೋಟಾ ಚಲಾಯಿಸುತ್ತೇವೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂಬ ಹಠಕ್ಕೆ ಅಲ್ಪಸಂಖ್ಯಾತ ಸಮುದಾಯ ಬಂದಂತಿದೆ. ಅಸಮಾಧಾನಗೊಂಡಿರುವ ಸಮುದಾಯವನ್ನು ಮನವೊಲಿಸುವ ಬದಲಾಗಿ ಕಾಂಗ್ರೆಸ್ ನಾಯಕರು ಬಿಜೆಪಿಯ ಗುಮ ತೋರಿಸಿ, ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಉಪಚುನಾವಣೆಯಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕರು ಚುನಾವಣಾ ಕಣದಲ್ಲಿರುವುದರಿಂದ ಕಾಂಗ್ರೆಸ್‌ನ ಆತಂಕ ಹೆಚ್ಚಾಗಿದೆ.
ಮತ್ತೊಂದೆಡೆ ಒಳಮೀಸಲಾತಿಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿಗೆ ಪರಿಶಿಷ್ಟ ಜಾತಿಗಳಲ್ಲಿ ತೀವ್ರವಾದ ಆಕ್ರೋಶಗಳಿವೆ. ಒಳಮೀಸಲಾತಿಯನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿ ಎಡಗೈ ಸಮುದಾಯವನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಯತ್ನಿಸಿದ್ದರು. ಅದು ಒಂದು ಹಂತದಲ್ಲಿ ಯಶಸ್ವಿಯಾಗಿತ್ತು. ಆದರೆ, ರೋಸ್ಟರ್‌ಬಿಂದು ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಪರಿಶಿಷ್ಟ ಜಾತಿಯಲ್ಲಿನ ಬಲಗೈ ಸಮುದಾಯ ಸಿಡಿದು ನಿಂತಿದೆ. ಹೀಗಾಗಿ ಒಳಮೀಸಲಾತಿ ಜಾರಿಗಾಗಿ ಈ ಮೊದಲು ಹೊರಡಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಮಿಸಲಾತಿ ಹೆಚ್ಚಳವನ್ನು ಕೈಬಿಟ್ಟು ಈ ಮೊದಲಿನ ವ್ಯವಸ್ಥೆಯಲ್ಲೇ 56 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲು ಮುಂದಾಗಿದೆ. ಶೇ.19ರ ಬದಲಾಗಿ ಶೇ. 17ರ ಮೀಸಲಾತಿ ಪ್ರಮಾಣದಲ್ಲಿ ಹಾಗೂ ಒಳಮೀಸಲಾತಿ ರಹಿತವಾಗಿ ನೇಮಕಾತಿ ನಡೆಸುವುದರಿಂದ ಪರಿಶಿಷ್ಟ ಸಮುದಾಯಕ್ಕೆ ಶೇ. 2ರಷ್ಟು ಅನ್ಯಾಯವಾಗಲಿದೆ ಎಂದು ಅಸಮಾಧಾನ, ಮೀಸಲು ಪಟ್ಟಿಯಲ್ಲಿರುವ 101 ಜಾತಿಗಳಲ್ಲೂ ಕಾಡುತ್ತಿದೆ.
ಜೊತೆಗೆ ಒಳಮೀಸಲಾತಿ ಜಾರಿಗೊಳಿಸಿಲ್ಲ ಎಂಬ ಅಸಹನೆ ಎಡಗೈ ಸಮುದಾಯದ್ದಾಗಿದ್ದರೆ, ತಪ್ಪು ನಿರ್ಧಾರದ ಮೂಲಕ ತಮಗೆ ಅನ್ಯಾಯ ಮಾಡಲಾಗಿದೆ ಎಂಬ ಆಕ್ರೋಶ ಬಲಗೈ ಸಮುದಾಯದ್ದಾಗಿದೆ. ಹೀಗಾಗಿ ಪರಿಶಿಷ್ಟ ಜಾತಿಗಳು ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುತ್ತಿದ್ದು, ಮತ ಬ್ಯಾಂಕಿನ ಚಿಂತೆ ಹೆಚ್ಚಾಗಿದೆ.
ಬಿಜೆಪಿ ಚುನಾವಣೆಯ ತಂತ್ರದ ಭಾಗವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಸಾಮಾನ್ಯ ಕ್ಷೇತ್ರಕ್ಕೆ ಪರಿಶಿಷ್ಟ ಪಂಗಡದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಯಾರೇ ಭ್ಯರ್ಥಿಗಳಾಗಿದ್ದರೂ ಬಿಜೆಪಿಯ ಕನಿಷ್ಠ 15 ರಿಂದ 20ರಷ್ಟು ಮತಗಳಿಕೆಯ ಸಾಮರ್ಥ್ಯ ಯಥಾವತ್ತು ಇರಲಿದೆ. ಪರಿಶಿಷ್ಟ ಪಂಗಡದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದಾಗಿ ಸದರಿ ಸಮುದಾಯದ ಮತಗಳಿಕೆ ಬಿಜೆಪಿಗೆ ಬಹುತೇಕ ಖಚಿತ ಎನ್ನಲಾಗಿದೆ.
ಪರಿಶಿಷ್ಟ ಸಮುದಾಯದ ಕೆ.ಎನ್.ರಾಜಣ್ಣ ಹಾಗೂ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ಹೊರ ಹಾಕಿರುವುದರಿಂದ ಸಮುದಾಯ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊಂದಿದೆ.
ಬಿಜೆಪಿ ಈ ಪರಿಸ್ಥಿತಿಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಪ್ರಯತ್ನ ನಡೆಸಿದೆ. ಪ್ರತಿತಂತ್ರವಾಗಿ ಕಾಂಗ್ರೆಸ್ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರಿಂದ, ಸಮರ್ಥ್ ಶ್ಯಾಮನೂರು ಅವರಿಗೆ ಬೆಂಬಲ ವ್ಯಕ್ತಪಡಿಸುವ ಪ್ರಯತ್ನಗಳನ್ನು ನಡೆಸುತ್ತಿದೆ.
ಜಾತಿ ಜನಗಣತಿ ವರದಿಯನ್ನು ಅನುಷ್ಠಾನಗೊಳಿಸಿ ಸಾಮಾಜಿಕ ನ್ಯಾಯ ನೀಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದ ಕಾಂಗ್ರೆಸ್, ಮೂರು ವರ್ಷ ಕಳೆದರೂ ಈಗಲೂ ವರದಿ ಪಡೆದುಕೊಳ್ಳುವ ಗೋಜಿಗೆ ಹೋಗದೇ, ಕಾಲಹರಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳು ಕೂಡ ಕಾಂಗ್ರೆಸ್ ವಿರುದ್ಧ ಕುದಿಯುವಂತಾಗಿದೆ.
ತನ್ನ ಸಾಂಪ್ರದಾಯಕ ಮತಬ್ಯಾಂಕ್ ಅನ್ನು ವಿಚಲಿತಗೊಳಿಸಿಕೊಂಡಿರುವ ಕಾಂಗ್ರೆಸ್‌ಗೆ ಎರಡು ಉಪಚುನಾವಣಾ ಕ್ಷೇತ್ರಗಳಲ್ಲಿನ ಗೆಲುವು ಸವಾಲು ತಂದೊಡ್ಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ ಬ್ಯಾಂಕ್‌ಗಳನ್ನು ಹಿಡಿದಿಟ್ಟುಕೊಳ್ಳಲು ಆಯಾ ಸಮುದಾಯದ ನಾಯಕರನ್ನು ಅಖಾಡಕ್ಕಿಳಿಸುವ ಕಸರತ್ತು ನಡೆಸುತ್ತಿದ್ದಾರೆ.
