ಹಾಸನ ಸೆ.15 : ಯಾವುದು ವಿಡಿಯೋ, ಜೈಲಿನ ವಿಷಯ ಇಟ್ಟುಕೊಂಡು ನನ್ನ ದನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹೆಚ್.ಡಿ.ಕುಮಾರಸ್ವಾಮಿ ಅವರು ಗುಡುಗಿದರು. ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ತಮ್ಮ ತಾಯಿಯ ಸ್ಮೃತಿ ಸ್ಥಳಕ್ಕೆ ಹಾಗೂ ಬೆಟ್ಟದ ಮೇಲೆ ಶ್ರೀ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನಾನು ಅಮೆರಿಕಕ್ಕೆ ತೆರಳುವ ಮುನ್ನ ಹಲವಾರು ವಿಷಯಗಳನ್ನು ಪ್ರಸ್ತಾಪ ಮಾಡಿದ್ದೆ. ಕೆಪಿಎಸ್‌ಸಿ, ಬಿಡದಿ ಟೌನ್ ಶಿಪ್, ನೈಸ್ ಹಗರಣಗಳ ಬಗ್ಗೆ ಗುರುತರ ಆರೋಪಗಳನ್ನು ಮಾಡಿದ್ದೆ. ಇದು ಕೆಲವರ ಬುಡಕ್ಕೆ ನೀರು ಬರುವ ಹಾಗೆ ಮಾಡಿದೆ. ಹೀಗಾಗಿ ನಮ್ಮ ಕುಟುಂಬದ ಬಾಯಿ ಮುಚ್ಚಿಸಲು ಜೈಲಿನ ವಿಷಯಗಳನ್ನು ತೇಲಿಬಿಡಲಾಗಿದೆ ಎಂದು ಸಚಿವರು ಆರೋಪಿಸಿದರು.
ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ಇಡುತ್ತೇನೆ ಎಂದು ಹೇಳಿದ್ದೇನೆ. ನಮ್ಮ ವಿರೋಧಿಗಳು ಲಘುವಾಗಿ ಎಷ್ಟೇ ಮಾತನಾಡಿದರೂ ನಾನು ಉದ್ವೇಗಕ್ಕೆ ಒಳಗಾಗುವುದಿಲ್ಲ. ದಾಖಲೆಗಳ ಸಮೇತವೇ ನಾಡಿನ ಜನತೆ ಮುಂದೆ ಯಾವುದೇ ಅಂಜಿಕೆ, ಅಳಲು ಇಲ್ಲದೆ ವಿಷಯಗಳನ್ನು ಇಡುತ್ತೇನೆ. ಇದು ನಮ್ಮ ತಂದೆಯಿಂದ ನನಗೆ ಬಂದ ಬಳುವಳಿ ಇದು. ದಾಖಲೆಗಳಲ್ಲಿದೆ ನಾನು ಮಾತನಾಡುವುದಿಲ್ಲ ಎಂದು ಅವರು ಹೇಳಿದರು.
ನೈಸ್ ಯೋಜನೆ ಗುತ್ತಿಗೆದಾರ ಹಾಗೂ ಮುಖ್ಯಮಂತ್ರಿ ಭೇಟಿ ಮಾಡಿದ ಫೋಟೋಗಳನ್ನು ಗಮನಿಸಿದ್ದೇನೆ. ಆ ಯೋಜನೆಯನ್ನು ಏನು ಮಾಡಲು ಹೊರಟಿದ್ದಾರೆ ಎಂಬ ಬಗ್ಗೆ ಕೂಡ ಹೇಳಿದ್ದೇನೆ. ನಮ್ಮ ತಾಯಿ ಬದುಕ್ಕಿದ್ದಾಗ ಆ ಹೆಣ್ಣುಮಗಳ ವಿರುದ್ಧ ಯಾವ ರೀತಿ ಪಿತೂರಿ ನಡೆಸಿದ್ದಾರೆ ಎಂಬ ವಿಷಯ ಈಗಿನ ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಒಂದು ಸುದ್ದಿ ವಾಹಿನಿಯನ್ನು ಬಳಕೆ ಮಾಡಿಕೊಂಡು ನಮ್ಮ ಕುಟುಂಬದ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ. ಅದಕ್ಕೆ ಕಾನೂನು ಮೂಲಕವೇ ಉತ್ತರ ಕೊಡುತ್ತೇವೆ..ಎಲ್ಲವನ್ನೂ ಕಾಲ ನಿರ್ಧಾರ ಮಾಡುತ್ತದೆ ಎಂದು ಸಚಿವರು ಕಿಡಿಕಾರಿದರು.
ಹೋರಾಟಕ್ಕೆ ದೇವರ ಆಶೀರ್ವಾದ ಕೇಳಿದ್ದೇನೆ:
ಕಳೆದ ಹತ್ತು ದಿನ ಯಾರು ಯಾರು ಎಷ್ಟರ ಮಟ್ಟಿಗೆ ನಿದ್ದೆಗೆಟ್ಟಿದ್ದಾರೆ ಎಂಬುದು ಅವರಿಗೆ ಬಿಟ್ಟಿದ್ದು. ಹಲವಾರು ಅಕ್ರಮ, ಸಾವಿರಾರು ಕೋಟಿ ಹಗರಣದ ಬಗ್ಗೆ ಹೇಳಲು ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಂದು ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟಕ್ಕೆ ಬಂದು ಆ ದೇವರ ಆಶೀರ್ವಾದ ಕೇಳಿದ್ದೇನೆ. ಅಂತಿಮವಾಗಿ ತೀರ್ಪು ಅವನೇ ಕೊಡಬೇಕು ಎಂದು ಸಚಿವರು ಮಾರ್ಮಿಕವಾಗಿ ಉತ್ತರಿಸಿದರು.
ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮರಂಗ ನಾಲ್ಕು ಆಧಾರ ಸ್ತಂಭಗಳಲ್ಲಿ ಒಂದು ಸ್ತಂಭ ಅಲುಗಾಡಿದರೂ ಅಂಬೇಡ್ಕರ್ ಬರೆದಿರುವ ಸಂವಿಧಾನಕ್ಕೆ ಅವಮಾನ ಮಾಡಿದಂತೆ ಆಗುತ್ತದೆ. ಸಂವಿಧಾನಕ್ಕೆ ತಲೆ ಬಾಗಿ ಕೆಲಸ ಮಾಡಬೇಕು. ಅಕ್ರಮಗಳ ಮುಖಾಂತರ ಸುಲಭವಾಗಿ ಹಣ ಗಳಿಕೆ ಮಾಡಿ ಅದರಿಂದ ಎಲ್ಲಾ ಪಡೆಯಬಹುದು ಅನ್ನೋದು ನಡೆಯುತ್ತಿದೆ. ಯಾವ ಸಮಯಕ್ಕೆ ಯಾವ ಹಗರಣವನ್ನು ಹೊರಗೆ ತರಬೇಕು ಎಂದು ಎಲ್ಲಾ ಸಿದ್ದತೆ ಮಾಡಿಕೊಂಡು ನಾಡಿನ ಜನತೆ ಮುಂದೆ ಬರುತ್ತೇನೆ. ದಾಖಲೆ ಸಮೇತ ಜನರ ಮುಂದೆ ಇಡುತ್ತೇನೆ. ಈ ರಾಜ್ಯವನ್ನು ಉಳಿಸುವ ನಿಟ್ಟಿನಲ್ಲಿ ಜನತೆ ಹಾಗೂ ಸಂವಿಧಾನದ ನಾಲ್ಕು ಅಂಗಗಳು ತೀರ್ಮಾನ ಮಾಡಬೇಕು. ದೇವರ ಸನ್ನಿಧಾನಲ್ಲಿ ಹೇಳುತ್ತೇನೆ, ನನಗೆ ಯಾರ ಮೇಲೆಯೂ ವೈಯಕ್ತಿಕ ಈರ್ಷೆಯಿಲ್ಲ ಎಂದರು ಸಚಿವರು.
ನಮ್ಮ ಜಾತಿಯವರು ಅಧಿಕಾರಕ್ಕೆ ಬಂದಿದ್ದಾರೆ, ಅಧಿಕಾರ ನಡೆಸಲಿ ಬಿಡಿ ಎಂದು ಕೆಲವರು ಹೇಳುತ್ತಿದ್ದಾರೆ. ನಾನು ಯಾರಿಗೂ ತೊಂದರೆ ಕೊಡಲು ಹಗರಣಗಳ ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ರಾಜ್ಯದ ಸಂಪತ್ತಿನ ಲೂಟಿ ತಡೆಯಲು ಹೋರಾಟ ನಡೆಸುತ್ತಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಲಿ, ಅವರಿಗೆ ಬೆಂಬಲ ನೀಡುತ್ತೇನೆ. ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ಮಾಡುತ್ತಿರುವ ಅಕ್ರಮ ಬಗ್ಗೆ ಹೇಳಲು ನಾನು ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಕೇಂದ್ರ ಸಚಿವರು ಹೇಳಿದರು.
ನಾಡಿಗೆ ಒಳ್ಳೆಯದು ಆಗುವ ವಿಷಯಗಳ ಬಗ್ಗೆ ನಾನು ಮಾತನಾಡುತ್ತಿದ್ದರೆ, ಜನರ ಗಮನವನ್ನು ಬೇರೆಡೆಗೆ ಹೊರಳಿಸುವ ಕುತಂತ್ರದಿಂದ ಈ ಸರಕಾರ ಬೇರೆ ದಾರಿ ಹಿಡಿದಿದೆ. ಅದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ. ಎಲ್ಲವನ್ನೂ ಸಮಚಿತ್ತವಾಗಿ ತೆಗೆದುಕೊಳ್ಳುತ್ತೇನೆ. ಹಗರಣಗಳ ಬಗ್ಗೆ ಮಾತನಾಡದೆ ಬಾಯಿಮುಚ್ಚಿ ಕೂರಲು ಆಗಲ್ಲ. ಕೆಪಿಎಸ್‌ಸಿಯಲ್ಲಿ ಈಗಿರುವ ಮಂತ್ರಿಗಳು ನಡೆಸಿರುವ ಹಗರಣ, ಪಶುವೈದ್ಯರ ನೇಮಕಾತಿಯಲ್ಲಿ ಹಗರಣ, ಹುದ್ದೆಗಳ ಮಾರಾಟ ಇದೆಲ್ಲವನ್ನೂ ನೋಡಿಕೊಂಡು ನಾನು ಬಾಯಿ ಮುಚ್ಚಿಕೊಂಡು ಇರಬೇಕಾ? ಎಇಇಗಳ ಅಕ್ರಮ ನೇಮಕಾತಿ ಬಗ್ಗೆ ದಾಖಲೆಗಳನ್ನು ಕೊಟ್ಟಿದ್ದೇನೆ, ಆ ಮಂತ್ರಿ ಉತ್ತರ ಕೊಟ್ಟಿದ್ದಾರಾ? ಅಕ್ರಮಗಳನ್ನು ಜನರ ಮುಂದೆಯೇ ಇಡುತ್ತೇನೆ, ಅವರೇ ತೀರ್ಮಾನ ಮಾಡುತ್ತಾರೆ. ಅಲ್ಲದೆ, ನಾನು ಯಾರನ್ನು ಮೆಚ್ಚಿಸಲಿಕ್ಕೆ ಹೋರಾಟ ನಡೆಸುತ್ತಿಲ್ಲ ಎಂದು ಅವರು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ರಾಜ್ಯಕ್ಕ ಕಪ್ಪುಮಸಿ ಬಳಿಯುವ ಕೆಲಸ ಮಾಡುತ್ತಿಲ್ಲ. ವ್ಯವಸ್ಥೆಯನ್ನೇ ಬುಡಮೇಲು ಮಾಡುವವರ ವಿರುದ್ದ ಹೋರಾಟ ಮಾಡುತ್ತೇನೆ. ಯಾವುದೇ ವಿಷಯಗಳನ್ನು ದಾಖಲೆಗಳಿಲ್ಲದೆ ನಿಮ್ಮ ಮುಂದೆ ಬರಲ್ಲ. ಯಾವುದನ್ನು ಮೊದಲು ತೆಗೆದುಕೊಳ್ಳಬೇಕು ಎಂದು ನಾನು ಮಾನಸಿಕವಾಗಿ ಸಿದ್ದನಾಗಬೇಕು. ದಾಖಲೆ ಸಮೇತ ಮಾತನಾಡಲು ಸಿದ್ದನಿದ್ದೇನೆ. ಎಲ್ಲವೂ ಹೊರಗೆ ಬರುತ್ತದೆ. ಈಗ ಯುದ್ಧ ಆರಂಭವಾಗಿದೆ. ಹೋರಾಟಕ್ಕೆ ಶಕ್ತಿ ಕೊಡು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇವೇಗೌಡರ ಕುಟುಂಬದ ವಿರುದ್ಧ ಮಹಾಸಂಚು ಹೂಡಿದ ಮಹಾನ್ ನಾಯಕ ಯಾರೆಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅವರ ವಿರುದ್ಧ ಸಾಕ್ಷ್ಯಗಳನ್ನು ತಯಾರು ಮಾಡಿ ಸಾಕಾಗಿದೆ ಎಂದು ಹೇಳಿದ್ದು ಯಾರು? ನಮ್ಮ ಪಕ್ಷದಿಂದಲೇ ಸಂಸದನಾಗಿದ್ದ ನಾಗಮಂಗಲದ ವ್ಯಕ್ತಿ ಹೇಳಿದ್ದ ಮಾತುಗಳೇನು? ದೇವೇಗೌಡರ ಕುಟುಂಬವನ್ನು ತೀರಿಸುತ್ತೇವೆ. ಅದನ್ನು ಮಾಡಲು ಸರಕಾರ ತೀರ್ಮಾನ ಮಾಡಿಬಿಟ್ಟಿದೆ. ಇದೆಲ್ಲವನ್ನು ಹೇಳಿದವನ ಹಿಂದೆ ಇದ್ದವರು ಯಾರು? ಈಗಿರುವ ಮುಖ್ಯಮಂತ್ರಿ ತಾನೇ? ಈ ಮುಖ್ಯಮಂತ್ರಿಯೇ ಮಾತನಾಡಿದ ವ್ಯಕ್ತಿಯನ್ನು ಬಂಧಿಸಿ ನಾಲ್ಕು ದಿನ ಜೈಲಿನಲ್ಲಿ ಯಾಕೆ ಇಟ್ಟಿರಿ? ಎಂದು ಕುಮಾರಸ್ವಾಮಿ ಅವರು ನೇರವಾಗಿ ಪ್ರಶ್ನಿಸಿದರು.
ಹಾಸನ ಪ್ರಕರಣ ನಡೆದು, ಆ ಹುಡುಗ ಜೈಲಿಗೆ ಹೋಗಿ ಎರಡು ಆಗಿದೆ. ಎರಡು ವರ್ಷ ಇಲ್ಲದೆ ಇದ್ದಿದ್ದು ಬಿಡದಿ, ಕೆಪಿಎಸ್‌ಸಿ, ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದದಲ್ಲಿ ಮೊಬೈಲ್ ಬಂದುಬಿಡುತ್ತೆ. ಪೆನ್‌ಡ್ರೈವ್ ಇದೆ, ಅದರಲ್ಲಿ ಅಶ್ಲೀಲ ಚಿತ್ರ ಇದೆ ಎಂದು ಸುದ್ದಿಗಳನ್ನು ಬಿಡುತ್ತಿದ್ದಾರೆ. ಎರಡು ವರ್ಷದಿಂದ ಆ ಹುಡುಗ ಜೈಲಿನಲ್ಲಿ ಇದ್ದಾನೆ. ನ್ಯಾಯಾಲಯ ತೀರ್ಪು ಕೊಟ್ಟಿದೆ, ತೀರ್ಪು ಸ್ವೀಕರಿಸಿದ್ದೇವೆ. ಎರಡು ವರ್ಷದಿಂದ ಇಲ್ಲದೆ ಇದ್ದಿದ್ದು ಈಗ ಫೋನ್ ಇಟ್ಟುಕೊಂಡಿದ್ದಾನೆ ಎಂದು ಹೊಸದಾಗಿ ಕಥೆ ಶುರು ಮಾಡಿದ್ದಾರೆ. ಪ್ರತೀ ದಿನ ಸರಣಿ ಕಥೆಗಳನ್ನು ಬಿಡುತ್ತಿದ್ದಾರೆ. ಹಿಂದೆ ಏಕೆ ಮಾಡಲಿಲ್ಲ? ಎರಡು ವರ್ಷದಿಂದ ಫೋನ್ ಸಿಗಲಿಲ್ಲವಾ ಅವನ ಹತ್ತಿರ? ಈಗ ಬಂತಾ? ಜೈಲಲ್ಲಿ ಇರುವವನಿಗೆ ಅಶ್ಲೀಲ ಚಿತ್ರ ಕೊಟ್ಟಿದ್ದು ಯಾರು? ಆ ಅಶ್ಲೀಲ ಚಿತ್ರ ಎಲ್ಲಿಂದ ಜೈಲಿನ ಒಳಕ್ಕೆ ಬಂತು? ಯಾಕೆ ಬಂತು, ಹೇಗೆ ಬಂತು? ಮೊಬೈಲ್ ಕೊಟ್ಟವರು ಯಾರು? ಎಂದು ರಾಜ್ಯ ಸರಕಾರವನ್ನು ಕೇಂದ್ರ ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಪಿಕ್ ಪ್ಯಾಕೇಟ್ ಮಾಡಿದವನು ಕೂಡ ಜೈಲಲ್ಲಿ ಫೋನ್ ಇಟ್ಟುಕೊಂಡಿದ್ದಾನೆ ಎಂಬುದು ಇವರಿಗೆ ಗೊತ್ತಿಲ್ಲವೇ? ಅವೆಲ್ಲವನ್ನೂ ತಂದು ಕೊಡುವವರು ಯಾರು? ನಮ್ಮ ಹೋರಾಟವನ್ನು ಹತ್ತಿಕುವ ಏಕೈಕ ದುರುದ್ದೇಶದಿಂದ ಆ ಹುಡುಗನ ಹೆಸರನ್ನು ಮುಂದಕ್ಕೆ ಬಿಟ್ಟು ನಮ್ಮ ಕುಟುಂಬದ ಮೇಲೆ ಅಪಪ್ರಚಾರ ನಡೆಸುತ್ತಿದ್ದಾರೆ. ನಿಮ್ಮ ಕೈಯಲ್ಲಿ ಬಾಯಿ ಮುಚ್ಚಿಸಲು ಆಗುತ್ತಾ? ಏನೇನು ನಡೆಸಿದ್ದೀರಿ ಎಂಬುದಕ್ಕೆ ನೀವೇ ಉತ್ತರ ಕೊಡುವ ಕಾಲ ಬರುತ್ತದೆ. ನೀವೆಲ್ಲಾ ಸೇರಿಕೊಂಡು ಯಾವ ಯಾವ ರೀತಿ ಮಾಡಿದ್ದೀರಿ ಎಂಬುದು ನನಗೆ ತಿಳಿದಿಲ್ಲವೇ? ಎಂದು ಕುಮಾರಸ್ವಾಮಿ ಅವರು ಗುಡುಗಿದರು.
ನಾಗಮಂಗಲದ ವ್ಯಕ್ತಿ ಹೇಳಿದ್ದನ್ನು, ಆತನ ಜತೆ ಇವತ್ತಿನ ಮುಖ್ಯಮಂತ್ರಿ ನಡೆಸಿದ ಷಡ್ಯಂತ್ರ್ಯವನ್ನು ನಾನು ಮರೆಯಲು ಸಾಧ್ಯವಿಲ್ಲ. ಈ ಸರಕಾರದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇಬ್ಬರು ಸೇರಿ ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡುವುದೇ ಮೊದಲ ಆದ್ಯತೆ ಎಂದು ಹೇಳಿದ್ದಾನೆ. ನಿನ್ನ ಹತ್ತಿರ ಏನೇನು ಇದೆ ತಂದುಕೊಡಿ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ ಎಂದು ಹೇಳಿದ್ದರು. ಏನೇನು ತರಿಸಿದಿರಿ, ಎಲ್ಲಿಂದ ತರಿಸಿದಿರಿ? ಯಾರಿಗೆ ನ್ಯಾಯ ಕೊಟ್ಟಿದ್ದೀರಾ? ದೆಹಲಿಯಿಂದ ನಿಮ್ಮ ನಾಯಕ ಬಂದು 400 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ಹೇಳಿದ್ದ. ನಮ್ಮ ಕುಟುಂಬದಿಂದ ಅನ್ಯಾಯ ಆಗುತ್ತಲ್ಲವಾ? ನೀವು ಎಷ್ಟು ಹೆಣ್ಣುಮಕ್ಕಳ ಕುಟುಂಬಗಳನ್ನು ಸರಿಮಾಡಿ ಕೊಟ್ಟಿದಿರಪ್ಪಾ?ಎಷ್ಟು ಹೆಣ್ಣುಮಕ್ಕಳ ಮಾನ ಕಾಪಾಡಿದ್ದೀರಪ್ಪಾ? ಇದಕ್ಕೆಲ್ಲ ಹೆದರಿಕೊಂಡು ಹೋಗಲ್ಲ. ನ್ಯಾಯ, ಸತ್ಯಕ್ಕೆ ತಲೆ ಬಾಗುತ್ತೇನೆ. ತಪ್ಪು ಮಾಡಿದ್ದರೆ ತಲೆಬಾಗಲು ಸಿದ್ದರಿದ್ದೇವೆ. ನಿಮ್ಮ ರೀತಿಯಲ್ಲಿ ಎಲ್ಲಾ ಬಿಟ್ಟು ದೋಚುವ ಕೆಲಸ ಮಾಡಲ್ಲ. ಎಷ್ಟು ಕುಟುಂಬ ಹಾಳು ಮಾಡಿದ್ದೀರಿ, ಬೇಕಾದಷ್ಟು ಹೇಳಬಲ್ಲೆ. ಈಗ ಅವರಿಗೆ ಇರೋದು ನಾನೊಬ್ಬನೇ ಎಂದು ಕೇಂದ್ರ ಸಚಿವರು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ದೇವೇಗೌಡರು ಅವರ ರಾಜಕೀಯ ಜೀವನದಲ್ಲಿ ಅಕ್ರಮದ ವಿರುದ್ದವೇ ಹೋರಾಟ ಮಾಡಿಕೊಂಡು ಬಂದಿದ್ದಾರೆ, ಅವರು ನನಗೆ ಜನ್ಮ ಕೊಟ್ಟಿದ್ದಾರೆ. ಬೇರೆಯವರ ಧ್ವನಿ ನಿಲ್ಲಿಸಬಹುದು. ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಜನರ ದನಿ ಅಡಗಿಸಿದ್ದೀರಿ. 48 ಜನರ ಹನಿಟ್ರ್ಯಾಪ್ ಬಗ್ಗೆ ಆ ಮಂತ್ರಿ ಸದನದಲ್ಲಿಯೇ ಆರೋಪ ಮಾಡಿದರೆ 24 ಗಂಟೆಯಲ್ಲಿ ಅವರ ಬಾಯಿ ಮುಚ್ಚಿಸುತ್ತೀರಿ. ರಾಜಕಾರಣಿಗಳು, ನ್ಯಾಯಾಧೀಶರು, ಕೇಂದ್ರ ಮಂತ್ರಿಗಳು, ಕೇಂದ್ರ ನಾಯಕರುಗಳು ಇವರದ್ದೆಲ್ಲಾ ಹನಿಟ್ರ್ಯಾಪ್ ಮಾಡಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದ ಆ ಮಂತ್ರಿಯನ್ನು ಯಾವ ಸ್ಥಿತಿಗೆ ತಂದು ಇಟ್ಟಿದ್ದೀರಿ? ನನ್ನನ್ನು ಹೆದರಿಸುವುದು ನಿಮ್ಮ ಜನ್ಮದಲ್ಲಿ ಬರೆದಿಲ್ಲ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾನು ಒಂದು ಪದ ಬಳಸಿದ್ದಕ್ಕೆ ಕಳೆದ ಹತ್ತು ದಿನಗಳಿಂದ ಕುಮಾರಸ್ವಾಮಿ ಯಾವಾಗ ಬರುತ್ತಾನೆ? ಏನು ಮಾತನಾಡುತ್ತಾನೆ? ನನ್ನದು ಏನಿದೆ? ಇನ್ನೊಬ್ಬರದ್ದು ಏನಿದೆ? ತಲೆ ಕೆಡಿಸಿಕೊಂಡು ಕೂತವರು ಯಾರು ಎಂಬುದು ನನಗೆ ಗೊತ್ತಿದೆ. ಮಾಧ್ಯಮ ಸ್ನೇಹಿತರಿಗೆ ನಿರಾಸೆ ಮಾಡಲ್ಲ. ಅವರು ಇನ್ನೂ ನಿದ್ದೆಗೆಡಬೇಕು. ವಿಜಯದಶಮಿ ಹತ್ತಿರದಲ್ಲೇ ಇದೆ. ಯುದ್ಧ ಆರಂಭಕ್ಕೆ ವಿಜಯದಶಮಿ ಸರಿಯಾದ ಸಮಯ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಈ ಮುಖ್ಯಮಂತ್ರಿ ಏನೇನು ಮಾಡುತ್ತಿದ್ದಾರೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಪಾಪದ ಕೊಡ ತುಂಬುತ್ತಿದೆ. ಈಗಾಗಲೇ ರಮೇಶ್ ಜಾರಕಿಹೊಳಿ, ರಾಜಣ್ಣ ಅವರ ಬಾಯಿ ಮುಚ್ಚಿಸಿದರು. ಸತೀಶ್ ಜಾರಕಿಹೋಳಿ ಅವರು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳುತ್ತಿದ್ದರು. ಅವರನ್ನು ಹೇಗೆ ಮುಗಿಸಬೇಕೆಂದು ಸಿದ್ದತೆ ಮಾಡಿಕೊಂಡರು. ಪಾಪ.. ನಾಗೇಂದ್ರ, ಆತನ ವಿರುದ್ಧ ಯಾವ್ಯಾವ ರೀತಿ ಕುತಂತ್ರ ನಡೆಯಿತು ಎಂಬುದು ಕೂಡ ಗೊತ್ತಿದೆ. ಅವರು ಜೀವನ ಮಾಡಿರುವುದು, ಮಾಡುತ್ತಿರುವುದು ಬರೀ ದ್ವೇಷದಿಂದಲೇ. ಅವರ ಜೀವನದ ಪುಸ್ತಕ ತೆಗೆಯಲಿ, ಲೂಟಿ ಮಾಡದು ಹೇಗೆ ಎಂದು ಗೊತ್ತಾಗುತ್ತದೆ. ಬರೀ ವಿದ್ಯಾವಂತರಾದರೆ ಆಗಲ್ಲ, ಬುದ್ದಿವಂತರಾಗಬೇಕು ಅಂದಿದ್ದಾರೆ ಅವರು. ಸತ್ತವರ ಹೆಬ್ಬೆಟ್ಟು ಹಾಕಿಸಿಕೊಳ್ಳಲು ಬುದ್ದಿವಂತರಾಗಬೇಕಾ? ಅವರು ಹೇಳಿದ್ದು ಸತ್ಯ, ವಿದ್ಯಾವಂತರು ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಆಗುತ್ತಾ?ಬುದ್ದಿವಂತರೇ ಒತ್ತಿಸಿಕೊಳ್ಳೋದು ನೋಡಿ ಎಂದು ಡಿಕೆಶಿ ವಿರುದ್ಧ ಸಚಿವರು ಕಿಡಿಕಾರಿದರು.
ನನಗೇನು ಆತುರ ಇಲ್ಲ, ಎಲ್ಲಾ ದಾಖಲೆಗಳನ್ನು ಕೊಡುತ್ತೇನೆ. ಹಿಂದೆ ಈ ಸರಕಾರ ಬಂದ ಹೊಸತರಲ್ಲಿ ವಿಧಾನಸೌಧದ ಮುಂದೆ ಪೆನ್‌ಡ್ರೈವ್ ತೋರಿಸಿದ್ದೆ. ಲಂಚದ ವಿಚಾರವೇ ಆ ಪೆನ್ ಡ್ರೈವ್ ನಲ್ಲಿ ಇದ್ದ ದಾಖಲೆ. ಹಣ ವಸೂಲಿ ವಿಷಯದಲ್ಲಿ ಏನೇನು ಮಾತುಕತೆ ನಡೆಯಿತು ಅದೆಲ್ಲವೂ ಅದರಲ್ಲಿ ಇತ್ತು. ಇಷ್ಟಕ್ಕೂ ಆ ಪೆನ್ ಡ್ರೈವ್ ನಲ್ಲಿ ಇದ್ದಿದ್ದು ಈಗಿನ ಮುಖ್ಯಮಂತ್ರಿಯ ಭ್ರಷ್ಟಾಚಾರದ ಮಾಹಿತಿ ಎಂದು ಸಚಿವರು ಬಹಿರಂಗಪಡಿಸಿದರು.
ಕೆಲಸ ಕಡಿಮೆ, ದೆಹಲಿ ಸುತ್ತಿದ್ದು ಜಾಸ್ತಿ:
ಡಿಕೆಶಿಯ ನೂರು ದಿನಗಳ ಸರ್ಕಾರದ ಬಗ್ಗೆ ಲೇವಡಿ ಮಾಡಿದ ಕೇಂದ್ರ ಸಚಿವರು; ಇವರು ನೂರು ದಿನ ಎಲ್ಲಿ ಆಡಳಿತ ನಡೆಸಿದ್ದಾರೆ? ವಿಧಾನಸೌಧದಲ್ಲಿ ಕೂತು ಆಡಳಿತ ನಡೆಸಿದ್ದಕಿಂತ ಹೈಕಮಾಂಡ್ ಮನೆ ಬಾಗಿಲಿಗೆ ಅಲೆದಾಟ ನಡೆಸಿದ್ದೇ ಜಾಸ್ತಿ ಎಂದರು.
ನೂರು ದಿನದಲ್ಲಿ ಇವರು ಮುಖ್ಯಮಂತ್ರಿ ಆಗಿದ್ದು ಯಾವ ದಿನಾಂಕ? ಮಂತ್ರಿಮಂಡಲದಲ್ಲಿ ಎಷ್ಟು ಜನ ಮಂತ್ರಿಗಳು ಇದ್ದರು? ಆಮೇಲೆ ಸಂಪುಟ ವಿಸ್ತರಣೆ ಮಾಡುವುದಕ್ಕೆ ಎಷ್ಟು ದಿನ ತೆಗೆದುಕೊಂಡರು? ಖಾತೆಗಳನ್ನು ಹಂಚಿಕೆ ಮಾಡಲು ಎಷ್ಟು ದಿನ ತೆಗೆದುಕೊಂಡರು? ಎಲ್ಲವನ್ನೂ ತೆಗೆಯಿರಿ, ನೂರೇ ದಿನಕ್ಕೆ ಒಂದು ಬುಕ್‌ಲೆಟ್ ಬೇರೆ. ಪಾಪ.. ಟ್ರಂಪ್ ಇವರನ್ನು ನೋಡಿ ಅಲ್ಲಿ ಐದು ಸಾವಿರ ಡಾಲರ್ ಘೋಷಣೆ ಮಾಡುವರೇ. ನಾನು ಅಮೇರಿಕದಿಂದ ಬರುವಾಗ ಟ್ರಂಪ್ ಹೇಳಿಕೆ ನೋಡಿದ್ದೀನಿ. ನಾನು ವಾಪಸ್ ಬರುವ ಮೊದಲೇ ಇವರೇ ಘೋಷಣೆ ಮಾಡಿಬಿಟ್ಟಿದ್ದಾರೆ! ಟ್ರಂಪ್ ನಮ್ಮ ಮುಖ್ಯಮಂತ್ರಿಗಳಿಗೆ ಫೋನ್ ಮಾಡಿ, ಏನಪ್ಪಾ ನೀವು ಇಷ್ಟೆಲ್ಲಾ ಜನಗಳ ಓಟು ಹಾಕಿಸಿಕೊಳ್ಳಬೇಕಾದರೆ ಏನೇನು ಕಾರ್ಯಕ್ರಮ ಕೊಟ್ಟಿರಿ, ತಿಳಿಸಿ ಎಂದು ಕೇಳಿರಬೇಕು! ಇವರಿಗೆ ಕೇಳಿ, ಇವರು ಎಲ್ಲವನ್ನೂ ಟ್ರಂಪ್‌ಗೆ ಹೇಳಿದ ಮೇಲೆ ಟ್ರಂಪ್ ಈಗ ಅಲ್ಲಿ ಐದು ಸಾವಿರ ಡಾಲರ್ ಘೋಷಣೆ ಮಾಡಿದ್ದಾರೆ. ನೂರು ದಿನದಲ್ಲಿ ಈ ಸರ್ಕಾರ ಕೆಲಸ ಮಾಡಿದೆ. ತೆಗಿಯಿರಿ ಪಟ್ಟಿನಾ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.
