ಬೆಂಗಳೂರು, ಮಾ.28- ಐಪಿಎಲ್ 19ನೆ ಆವೃತ್ತಿಗೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಾಲನೆ ದೊರೆಯಲಿದೆ. 18ನೆ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಮತ್ತು ಸನ್‌ರೈಸರ್‌ರಸ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡ ರಾತ್ರಿ 7.30ಕ್ಕೆ ಆರಂಭವಾಗಲಿರುವ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಕಳೆದ ಬಾರಿ ಪ್ರಶಸ್ತಿ ಗೆದ್ದಿದ್ದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತ ದುರಂತದ ಕಹಿ ನೆನಪನ್ನು ಅಳಿಸಿ ಹಾಕುವಂತೆ ನಗರದಲ್ಲಿ ಐಪಿಎಲ್ ಸಂಭ್ರಮ ಮನೆ ಮಾಡಿದೆ. ಆರ್‌ಸಿಬಿ ಜಯಘೋಷ ಅನುರಣಿಸಲಾರಂಭಿಸಿದೆ.
ಎಲ್ಲೆಡೆ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರ ಚಿತ್ರವಿರುವ ಟೀ ಶರ್ಟ್ ಧರಿಸಿ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡುತ್ತ ಜೈಕಾರ ಹಾಕುತ್ತಿರುವ ದೃಶ್ಯಗಳು ಗೋಚರಿಸಿವೆ.
ಕಳೆದ ವರ್ಷ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ್ದ ದುರಂತದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಸ್ಟೇಡಿಯಂನಲ್ಲಿ ಮತ್ತು ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, 2000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದೆ.
ಜನರ ನೂಕುನುಗ್ಗಲನ್ನು ತಪ್ಪಿಸಲು ಈ ಬಾರಿ ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನಾ ಸಮಾರಂಭ ಇಲ್ಲದೆ 19ನೆ ಆವೃತ್ತಿ ಚಾಲನೆಗೊಳ್ಳಲಿದೆ.
ವಿಶ್ವದ ಅತ್ಯಂತ ಶ್ರೀಮಂತ, ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿ ಎಂಬ ಕೀರ್ತಿ ಪಡೆದಿರುವ ಐಪಿಎಲ್‌ನ ಈ ಬಾರಿಯ ಆವೃತ್ತಿಯಲ್ಲಿ ಎರಡು ತಿಂಗಳಿಗೂ ಅಧಿಕ ಸಮಯ ಅಂದರೆ 65 ದಿನ ಪಂದ್ಯಾವಳಿ ಜರುಗಲಿದೆ. 10 ತಂಡಗಳು 13 ನಗರಗಳಲ್ಲಿ 74 ಪಂದ್ಯಗಳನ್ನು ಆಡಲಿವೆ. ಎರಡು ಹಂತಗಳಲ್ಲಿ ಪಂದ್ಯಾವಳಿ ನಡೆಯಲಿದೆ.
ಹಲವಾರು ಹಿರಿಯ ಮತ್ತು ಕಿರಿಯ ಆಟಗಾರರ ಮೇಲೆ ಗಮನ ಕೇಂದ್ರೀಕೃತವಾಗಿದೆ. ಅವರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಮಹೇಂದ್ರ ಸಿಂಗ್ ಧೋನಿ, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ದೇವದತ್ತ ಪಡಿಕ್ಕಲ್ ಸೇರಿದ್ದಾರೆ.ಧೋನಿಗೆ ಇದು ಕೊನೆಯ ಐಪಿಎಲ್ ಎನ್ನಲಾಗುತ್ತಿದೆ. ಈ ಬಾರಿಯೂ ಆರ್‌ಸಿಬಿ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿದೆ.ಮೇ 31ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಫೈನಲ್ ಪಂದ್ಯ ನಡೆಯಲಿದೆ.
ವಿನಾಕಾರಣ ಕ್ರೀಡಾಂಗಣದ ಬಳಿ ಬರಬೇಡಿ
ಬೆಂಗಳೂರು,ಮಾ.28- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಟಿಕೆಟ್ ಪಡೆದವರು ಮಾತ್ರ ಕ್ರೀಡಾಂಗಣದ ಬಳಿ ಬರಬೇಕೇ ವಿನಃ ಟಿಕೆಟ್ ಇಲ್ಲದವರು ಬರಬೇಡಿ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು,ಕ್ರೀಡಾಂಗಣದ ಸುತ್ತ ಬಿಗಿ ಭದ್ರತೆ ಮಾಡಲಾಗಿದೆ. ಯಾವುದೇ ಘಟನೆಗಳು ನಡೆಯದಂತೆ ಅಧಿಕಾರಿಗಳು ಸೇರಿದಂತೆ 2500 ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಮಾಡಿದ್ದೇವೆ. ಟಿಕೆಟ್ ಇಲ್ಲದಿರುವವರು ವಿನಾಕಾರಣ ಕ್ರೀಡಾಂಗಣದ ಬಳಿ ಬಂದು ಸುತ್ತಾಡಬೇಡಿ ಮನೆಯಲ್ಲಿ ಅಥವಾ ತಮಗೆ ಅನುಕೂಲವಾಗುವ ಸ್ಥಳಗಳಲ್ಲಿ ಕುಳಿತುಕೊಂಡು ಟಿವಿಯಲ್ಲಿ ಪಂದ್ಯ ವೀಕ್ಷಿಸಿ ಎಂದು ಮನವಿ ಮಾಡಿದರು.
ಕ್ರೀಡಾಂಗಣದ ಸುತ್ತಮುತ್ತಲಿನಲ್ಲಿರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ದೇವೆ, ಯಾರನ್ನೂ ಓಡಾಡಲು ಬಿಡುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ . ಟಿಕೆಟ್ ಹೊಂದಿರುವವರು ತಮ ಸ್ವಂತ ವಾಹನ ಬಳಸದೆ ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಕ್ರಿಡಾಂಗಣಕ್ಕೆ ಬರಬೇಕೆಂದು ಮನವಿ ಮಾಡಿದ್ದಾರೆ. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು, ಆನಂದದಿಂದ ಪಂದ್ಯ ವೀಕ್ಷಿಸಿ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
