ದೊಡ್ಡಬಳ್ಳಾಪುರ,ಆ.21- ಸರ್ಕಾರಿ ಭೂ ದಾಖಲೆ ನಿರ್ವಹಣಾ ಸಾಫ್ತ್ ವೇರ್ ಹಾಗೂ ಡಿಜಿಟಲ್ ಸಹಿ ದುರ್ಬಳಕೆ ಮಾಡಿಕೊಂಡು, ಸುಮಾರು 500 ಕೋಟಿ ರೂ. ಮೌಲ್ಯದ 62 ಎಕರೆ 22 ಗುಂಟೆ ಖಾಸಗಿ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಲು ಯತ್ನಿಸಿರುವ ಬೃಹತ್ ಅಕ್ರಮ ಪ್ರಕರಣವನ್ನು ಲೋಕಾಯುಕ್ತ ಸಂಸ್ಥೆ ಬಯಲಿಗೆಳೆದಿದೆ.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸ್ವಯಂಪ್ರೇರಿತವಾಗಿ COMPT/UPLOK/BD/2430/2026 ಪ್ರಕರಣ ದಾಖಲಿಸಿಕೊಂಡು ಶೋಧನಾ ವಾರಂಟ್ ಹೊರಡಿಸಿದ್ದರು. ಇದರ ಆಧಾರದ ಮೇಲೆ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಉಮಾಮಹೇಶ್ ಹಾಗೂ ಹಾಲಪ್ಪ ವೈ.ಬಾಲದಂಡಿ ನೇತೃತ್ವದ ತಂಡವು ಮೇ 7ರಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿ ಹಾಗೂ ದೇವನಹಳ್ಳಿ ತಹಶೀಲ್ದಾರ್ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮಗಳ ವಿವರಗಳು ಬೆಳಕಿಗೆ ಬಂದಿವೆ.
ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ ವ್ಯಾಪ್ತಿಯ ಒಟ್ಟು 84 ಸರ್ವೇ ನಂಬರ್ಗಳಿಗೆ ಸಂಬಂಧಿಸಿದ 62 ಎಕರೆ 22 ಗುಂಟೆ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಲು ಪ್ರಯತ್ನಿಸಲಾಗಿದೆ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ. ಈ ಜಮೀನಿನ ಸರ್ಕಾರಿ ಮಾರ್ಗಸೂಚಿ ಮೌಲ್ಯ 103.68 ಕೋಟಿ ರೂ.ಗಳಾಗಿದ್ದು, ಪ್ರಸ್ತುತ ಮಾರುಕಟ್ಟೆ ಮೌಲ್ಯ ಎಕರೆಗೆ ಸುಮಾರು 8 ಕೋಟಿ ರೂ.ನಂತೆ ಅಂದಾಜಿಸಿದರೆ 500 ಕೋಟಿ ರೂ. ಮೀರಲಿದೆ ಎಂದು ತಿಳಿದುಬಂದಿದೆ.
ನಕಲಿ ಆದೇಶ ಸೃಷ್ಟಿಸಿ ಅಕ್ರಮ :
ಲೋಕಾಯುಕ್ತ ತನಿಖೆಯ ಪ್ರಕಾರ, ಇ-ಆಫೀಸ್ನಲ್ಲಿ ಜನರೇಟ್ ಆಗದ ನಕಲಿ ಆದೇಶಗಳನ್ನು ಸೃಷ್ಟಿಸಿ, ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಕಳುಹಿಸಿ ಭೂಮಿ ತಂತ್ರಾಂಶದಲ್ಲಿ ದಾಖಲೆ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗಿದೆ. ನಕಲಿ ಆದೇಶಗಳಲ್ಲಿ ಉಲ್ಲೇಖಿಸಿದ್ದ ಹೈಕೋರ್ಟ್ ರಿಟ್ ಅರ್ಜಿಗಳು ಹಾಗೂ ಕೆಎಟಿ ಪ್ರಕರಣ ಸಂಖ್ಯೆಗಳು ಆನ್ಲೈನ್ನಲ್ಲಿ ಪರಿಶೀಲಿಸಿದಾಗ, ಅವು ಸಂಬಂಧಿತ ಜಮೀನುಗಳಿಗೆ ಸಂಬಂಧಿಸಿಲ್ಲ ಎಂಬುದು ಪತ್ತೆಯಾಗಿದೆ.
ಇದಲ್ಲದೆ ಎಫ್ಡಿಎ ಮನೋಜ್ ಎಸ್. ಅವರ ಲಾಗಿನ್ ಮೂಲಕ ನಕಲಿ ದಾಖಲೆಗಳನ್ನು ಆರ್ಟಿಸಿ ಮ್ಯಾನೇಜ್ಮೆಂಟ್ ಟೂಲ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಬಳಿಕ ಅಂದಿನ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರು ತಮ ಬಯೋಮೆಟ್ರಿಕ್ ಥಂಬ್ ಹಾಗೂ ಡಿಜಿಟಲ್ ಸಹಿ ಬಳಸಿ ಅನುಮೋದನೆ ನೀಡಿರುವುದಾಗಿ ತನಿಖೆಯಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ಅಧಿಕೃತ ಅರ್ಜಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸ್ವೀಕೃತವಾಗದಿದ್ದರೂ ಖಾತೆ ಬದಲಾವಣೆಗೆ ನೇರವಾಗಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಅಲ್ಲದೆ, ಕಚೇರಿ ಕಾರ್ಯಗಳಿಗೆ ಅಧಿಕೃತ ಕಂಪ್ಯೂಟರ್ ಬದಲಿಗೆ ಖಾಸಗಿ ಲ್ಯಾಪ್ಟಾಪ್ ಬಳಸಿರುವ ಅಂಶವೂ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ.
57 ಎಕರೆಗೂ ಅಧಿಕ ಜಮೀನು ಅಕ್ರಮ ಖಾತೆ :
ಒಟ್ಟು 84 ಸರ್ವೇ ನಂಬರ್ಗಳ 62 ಎಕರೆ 22 ಗುಂಟೆ ಜಮೀನಿನ ಪೈಕಿ 72 ಸರ್ವೇ ನಂಬರ್ಗಳಿಗೆ ಸೇರಿದ 57 ಎಕರೆ 04.08 ಗುಂಟೆ ಜಮೀನು ಈಗಾಗಲೇ ಅಕ್ರಮವಾಗಿ ಖಾತೆಯಾಗಿರುವುದಾಗಿ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ತಕರಾರು ಕಾರಣದಿಂದ 6 ಸರ್ವೇ ನಂಬರ್ಗಳ 3 ಎಕರೆ 01.08 ಗುಂಟೆ ಜಮೀನಿನ ಖಾತೆ ವರ್ಗಾವಣೆ ತಡೆಯಲ್ಪಟ್ಟಿದೆ. ಮತ್ತೊಂದೆಡೆ ಯಾವುದೇ ಆದೇಶವಿಲ್ಲದೆ 6 ಸರ್ವೇ ನಂಬರ್ಗಳಿಗೆ ಸೇರಿದ 2 ಎಕರೆ 16 ಗುಂಟೆ ಜಮೀನನ್ನು ನೇರವಾಗಿ ಖಾತೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಉಪವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ಪ್ರಥಮ ದರ್ಜೆ ಸಹಾಯಕ ಮನೋಜ್ ಎಸ್. ಅವರಿಗೆ ಸೆಪ್ಟೆಂಬರ್ 22ರಂದು ಲೋಕಾಯುಕ್ತ ಪೀಠದ ಮುಂದೆ ಖುದ್ದಾಗಿ ಹಾಜರಾಗಿ ತಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸೂಚಿಸಿದ್ದಾರೆ.
