ನವದೆಹಲಿ,ಆ.21-ಹೆಚ್‌ಎಂಟಿ ತನ್ನ ಗತವೈಭವವನ್ನು ಮರಳಿ ಪಡೆಯಲು ಕೆಲಸ ಮಾಡುತ್ತಿರುವಾಗ ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಇರುವುದಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಹೆಚ್‌ಎಂಟಿ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಮೇಶ್‌ಕುಮಾರ್ ಅವರೊಂದಿಗೆ ಹೆಚ್‌ಎಂಟಿ ಕೈಗಡಿಯಾರಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬಗ್ಗೆ ಚರ್ಚೆ ನಡೆಸಿ ಅವರು ಮಾತನಾಡಿದರು.
ಸಂಸ್ಥೆಯು ನಮದೇ ಆದ ಮೇಕ್ ಇನ್ ಇಂಡಿಯಾ ಪರಂಪರೆಯ ಭಾಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಬೆಂಬಲ, ಮಾರ್ಗದರ್ಶನದೊಂದಿಗೆ ಇದು ಭಾರತದ ಸ್ಥಳೀಯ ಉತ್ಪಾದನೆಯನ್ನು ಬಲಪಡಿಸುವಲ್ಲಿ ಬಹಳ ದೂರ ಪ್ರಯಾಣಿಸುತ್ತದೆ ಎಂಬುದು ನನ್ನ ಬಲವಾದ ನಂಬಿಕೆ ಎಂದು ಅವರು ಹೇಳಿದ್ದಾರೆ.
ಹೆಚ್‌ಎಂಟಿ ಕೈಗಡಿಯಾರಗಳಿಗೆ ದಿನೇದಿನೇ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಅಧ್ಯಕ್ಷರು ಸಚಿವರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಚಿವರು, ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಹೊಸ ಮೈಲುಗಲ್ಲು ಒಂದು ಸ್ಥಾಪನೆಯಾಗುತ್ತಿದೆ.
ದೇಶಿಯ ಉತ್ಪಾದನೆ ಮತ್ತು ಅಭಿವೃದ್ಧಿಯ ಭಾಗವಾಗಿ ನಮ ಹೆಮೆಯ ಹಿಂದೂಸ್ತಾನ್ ಮಷಿನ್ ಟೂಲ್ಸ್ ಸಜ್ಜಾಗಿದೆ. ಸ್ವಾತಂತ್ರ್ಯ ದಿನದಂದು ಬೆಂಗಳೂರಿನಲ್ಲಿ 35 ಲಕ್ಷ ರೂ.ಗೂ ಹೆಚ್ಚು ಮಾರಾಟ ವಹಿವಾಟು ನಡೆದಿದೆ. ಎರಡೂವರೆ ಕಿ.ಮೀ. ಉದ್ದದ ಸರತಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಕೈ ಗಡಿಯಾರಗಳನ್ನು ಖರೀದಿಸಿರುವುದು ಬಹಳ ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರು ಹೆಚ್‌ಎಂಟಿ ತಂಡವನ್ನು ಅಭಿನಂದಿಸಿದರಲ್ಲದೆ, ಗಂಡಭೇರುಂಡ, ಆಪರೇಷನ್ ಸಿಂಧೂರ್, ಸ್ವಾತಂತ್ರ್ಯ ದಿನ, ಜನತಾ, ಸ್ಟೆಲ್ಲಾರ್ ಮತ್ತು ಅಮೃತ್ ಆವೃತ್ತಿಗಳ ಕೈ ಗಡಿಯಾರಗಳನ್ನು ಪರಿಶೀಲಿಸಿದರು. ಹಾಗೆಯೇ ಗುಣಮಟ್ಟದ ಬಗ್ಗೆ ಬಹಳ ಮುತುವರ್ಜಿ ವಹಿಸುವಂತೆ ಸಿಎಂಡಿ ಅವರಿಗೆ ಸಚಿವರು ಸೂಚಿಸಿದರು.
