ಬೆಂಗಳೂರು,ಮಾ.23- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಮಹಾ ಸಮರಕ್ಕೆ ಕಾಂಗ್ರೆಸ್ , ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದ ರೊಂದಿಗೆ ಉಪಸಮರದ ಅಖಾಡ ಸಜ್ಜಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ಮಲ್ಲಿಕಾರ್ಜುನ ಪುತ್ರ ಸಮರ್ಥ್. ಎಸ್ .ಎಸ್, ಬಿಜೆಪಿಯಿಂದ ಶ್ರೀನಿವಾಸ.ಟಿ ದಾಸಕರಿಯಪ್ಪ, ಬಾಗಲಕೋಟೆಯಿಂದ ಕಾಂಗ್ರೆಸ್‌ನ ಉಮೇಶ್ ಮೇಟಿ ಮತ್ತು ಬಿಜೆಪಿಯಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇದರ ನಡುವೆ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ. ಪ್ರಬಲ ಆಕಾಂಕ್ಷಿಯಾಗಿದ್ದ ದಾವಣಗೆರೆ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಸಾದಿಕ್ ಪೈಲ್ವಾನ್, ಬಂಡಾಯ ಅಭ್ಯರ್ಥಿಯಾಗಿ ತಮ ಬೆಂಬಲಿಗರ ಜೊತೆ ಆಗಮಿಸಿ ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್ಸಿಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಸೈಯದ್ ಉಸ್ತಾದ್ ಅವರನ್ನು ಮನವೊಲಿಸಿ ಕಣದಿಂದ ಹಿಂದಕ್ಕೆ ಸರಿಯುವಂತೆ ಮಾಡುವ ಹೊಣೆಗಾರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಕೆಪಿಸಿಸಿ ವಹಿಸಿದೆ. ಇಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ತಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಳೆ ಮತ್ತು ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಬಲಾಬಲ ಪ್ರದರ್ಶನ
ಇನ್ನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪೈಪೋಟಿಗೆ ಬಿದ್ದವರಂತೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಬಲಾಬಲ ಪ್ರದರ್ಶಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಒಂದೇ ಮಾರ್ಗದಲ್ಲಿ ತೆರೆದ ವಾಹನ ಮೂಲಕ ಮೆರವಣಿಗೆಯಲ್ಲಿ ಸಾಗಿ ಪ್ರಮುಖ ಬೀದಿಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು.
ಬಿಜೆಪಿ ಅಭ್ಯರ್ಥಿಗಳು ಭಾರತ್ ಮಾತಾಕಿ ಜೈ, ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಹಾಕಿದರೆ. ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳಿಗೆ ಜೈಕಾರ ಹಾಕಿದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದರು.
ದಾವಣಗೆರೆಯಲ್ಲಿ ಅಬ್ಬರ
ಕರ್ನಾಟಕದ ಎರಡನೇ ರಾಜಧಾನಿಯಂತಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಅಬ್ಬರದ ಮೆರವಣಿಗೆ ಮೂಲಕ ಆಗಮಿಸಿ ತಮ ಉಮೇದುವಾರಿಕೆ ಸಲ್ಲಿಸಿದರು.
ಕೊನೆ ಕ್ಷಣದವರೆಗೂ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ.ಎಸ್.ಎಸ್ ಪರವಾಗಿ ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಮುಖಂಡರು ಹಾಗೂ ಭಾರೀ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದರು.
ತಮ ಸಮುದಾಯಕ್ಕೆ ಟಿಕೆಟ್ ಕೊಡಲೇಬೇಕೆಂದು ಕೊನೆ ಕ್ಷಣದವರೆಗೂ ಪ್ರಯತ್ನ ನಡೆಸಿದ ವಸತಿ ಸಚಿವ ಜಮೀರ್ ಅಹದ್ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕರು ಗೈರು ಹಾಜರಾಗಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು.
ನಾಮಪತ್ರ ಸಲ್ಲಿಸುವ ಮುನ್ನ ಸಮರ್ಥ ಅವರು ನಗರದೇವತೆ ದುರ್ಗಾಂಬಿಕ ದೇವಿ ಹಾಗೂ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಹಜರತ್ ಷಾವಲಿ ದರ್ಗಾದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಬೃಹತ್ ಮೆರವಣಿಗೆ ಮೂಲಕ ಮಹಾನಗರ ಪಾಲಿಕೆಯಲ್ಲಿನ ದಕ್ಷಿಣ ಕ್ಷೇತ್ರ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಮತ್ತೊಮೆ ಉಮೇದುವಾರಿಕೆ ಮಾಡಿದರು.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರೂ ಪಕ್ಷದ ನಾಯಕರೊಂದಿಗೆ ಬಿ ಫಾರಂ ಸಮೇತ ಮತ್ತೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ದುರ್ಗಾಂಬಿಕಾ ದೇವಸ್ಥಾನದಿಂದ ಮೆರವಣಿಗೆ ನಡೆಸಿದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಂಸದರಾದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಬಾಗಲಕೋಟೆಯಲ್ಲೂ ಶಕ್ತಿ ಪ್ರದರ್ಶನ
ಬಾಗಲಕೋಟೆಯಲ್ಲಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಬೃಹತ್ ಶೋಭಾಯಾತ್ರೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಸಂಸದರಾದ ಪಿ.ಸಿ ಗದ್ದಿಗೌಡರ್,ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣ ಸಾ. ಭಾಂಡೆಗೆ ಮಾಜಿ ಸಚಿವರಾದ ಬಿ.ಶ್ರೀರಾಮುಲು, ಮುರುಗೇಶ್ ನಿರಾಣಿ ಮತ್ತಿತರರು ಇದ್ದರು.
ಕಾಂಗ್ರೆಸ್‌ನ ಉಮೇಶ ಮೇಟಿ ಕೂಡ ನಾಮಪತ್ರ ಸಲ್ಲಿಸಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಆರ್. ಬಿ.ತಿಮಾಪುರ, ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಶಿವರಾಜ ತಂಗಡಗಿ, ರಹೀಂಖಾನ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ಬಂಡಾಯದ ಭೀತಿ
ದಾವಣಗೆರೆಯಲ್ಲಿ ಸೋಲು-ಗೆಲುವಿನಲ್ಲಿ ನಿರ್ಣಾಯಕ ಸ್ಥಾನದಲ್ಲಿರುವ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ಇದುವರೆಗೂ ನೀಡಲಿಲ್ಲ. ಶಾಮನೂರು ಶಿವಶಂಕರಪ್ಪನವರ ಪ್ರಭಾವ ಕ್ಷೇತ್ರದಲ್ಲಿ ಇದ್ದಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಟಿಕೆಟ್ ನೀಡುತ್ತಾ ಬಂದಿತ್ತು. ಅವರು ಗೆಲುವನ್ನೂ ಸಾಧಿಸಿಕೊಂಡು ಬರುತ್ತಿದ್ದರು. ಆದರೆ ಅವರ ನಿಧನದ ನಂತರ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಸಮುದಾಯದಲ್ಲಿ ಕೇಳಿಬಂದಿತ್ತು.
ಎಸ್.ಎಸ್ .ಮಲ್ಲಿಕಾರ್ಜುನ್ ಅವರ ಲಾಬಿ/ಒತ್ತಡ ಏನಾದರೂ ಇಲ್ಲದೇ ಇದ್ದ ಪಕ್ಷದಲ್ಲಿ ಮುಸ್ಲಿಮರಿಗೇ ಟಿಕೆಟ್ ನೀಡುವ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಒಂದು ಹಂತಕ್ಕೆ ಬಂದಿದ್ದರು. ಆದರೆ, ಶಾಮನೂರು ಕುಟುಂಬಕ್ಕೇ ಟಿಕೆಟ್ ನೀಡುವ ಅನಿವಾರ್ಯತೆಗೆ ಕಾಂಗ್ರೆಸ್ ಹೈಕಮಾಂಡ್ ಬಿತ್ತು.
ಏಪ್ರಿಲ್ ಒಂಬತ್ತರಂದು ನಡೆಯುವ ಚುನಾವಣೆಯಲ್ಲಿ ಎಷ್ಟು ಮತದಾರರು ಇದ್ದಾರೆ ಎನ್ನುವ ಮಾಹಿತಿಯನ್ನು ಜಿಲ್ಲಾಧಿಕಾರಿಯಾಗಿರುವ ಜಿಎಂ ಗಂಗಾಧರಸ್ವಾಮಿ ನೀಡಿದ್ದಾರೆ. ಉಪಚುನಾವಣೆಯ ಫಲಿತಾಂಶ ಮೇ ನಾಲ್ಕರಂದು ಹೊರಬೀಳಲಿದೆ. ಅಲ್ಪಸಂಖ್ಯಾತ ಸಮುದಾಯದ ಒತ್ತಡಕ್ಕೆ ಸೆಡ್ಡು ಹೊಡೆದು, ಶಾಮನೂರು ಕುಟುಂಬ ಟಿಕೆಟ್ ಪಡೆದಿರುವ ಹಿನ್ನೆಲೆಯಲ್ಲಿ, ಚುನಾವಣೆ ಗೆಲ್ಲಲೇಬೇಕಾದ ಅನಿವಾರ್ಯತೆ ಕಾಂಗ್ರೆಸ್ಸಿಗೆ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
