Homeರಾಜ್ಯಸಚಿವ ಸಂಪುಟ ವಿಸ್ತರಣೆ : ಮುಂದಿನ ವಾರ ಸಿಎಂ ಡಿಕೆಶಿ ದೆಹಲಿಗೆ

ಸಚಿವ ಸಂಪುಟ ವಿಸ್ತರಣೆ : ಮುಂದಿನ ವಾರ ಸಿಎಂ ಡಿಕೆಶಿ ದೆಹಲಿಗೆ

Cabinet expansion: CM DK Shivakumar to visit Delhi next week

ಬೆಂಗಳೂರು, ಜೂ.17- ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕಮಾಂಡ್‌ ಬಳಿ ಚರ್ಚಿಸಿ ಅನುಮತಿ ಪಡೆಯಲು ಮುಂದಿನ ವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಲಿದ್ದಾರೆ. ಸಂಪುಟ ಸೇರ್ಪಡೆಗೊಳ್ಳಲು ಶಾಸಕರಿಂದ ತೀವ್ರ ಒತ್ತಡ ಹಾಗೂ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇದೇ ತಿಂಗಳಲ್ಲಿ ಮೊದಲ ಹಂತದಲ್ಲಿ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ.

ಹೀಗಾಗಿ ಮುಖ್ಯಮಂತ್ರಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರು ಮುಂದಿನ ಸೋಮವಾರ ಇಲ್ಲವೆ ಮಂಗಳವಾರ ದೆಹಲಿಗೆ ತೆರಳಿ ಹೈಕಮಾಂಡ್‌ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಿನ್ನೆ ರಾತ್ರಿ ನಡೆದ ಕಾಂಗ್ರೆಸ್‌‍ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನ ಪರಿಷತ್ತಿನ ಚುನಾವಣೆಯ ಜೊತೆಗೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌‍ಐಆರ್‌) ಹಾಗೂ ಸಂಪುಟ ವಿಸ್ತರಣೆ ವಿಚಾರ ಪ್ರಸ್ತಾಪವಾಗಿದೆ. ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕೇವಲ 20 ಶಾಸಕರಿಗೆ ಮಾತ್ರ ಅವಕಾಶವಿದ್ದು, ಉಳಿದವರಿಗೆ ನಿಗಮ-ಮಂಡಳಿಯಲ್ಲಿ ಅವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಮೊದಲ ಬಾರಿಗೆ ಶಾಸಕರಾದವರಿಗೆ ಸಂಪುಟದಲ್ಲಿ ಅವಕಾಶವಿಲ್ಲ. ಪ್ರಾತಿನಿಧ್ಯ ಸಿಗದ ಪ್ರದೇಶ, ಜಾತಿ, ವರ್ಗಗಳಿಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆದ್ಯತೆ ನೀಡಲಾಗುವುದು. ಅರ್ಹತೆ, ಹಿರಿತನ, ಅನುಭವವನ್ನು ಪರಿಗಣಿಸಲಾಗುವುದು. ಎಲ್ಲರಿಗೂ ಅವಕಾಶ ಸಿಗುವುದಿಲ್ಲ ಎಂಬುದು ನಿಮಗೂ ಗೊತ್ತಿದೆ. ಸಚಿವ ಸ್ಥಾನ ಸಿಗದ ಶಾಸಕರಿಗೆ ಅವರ ಹಿರಿತನ ಮತ್ತು ಅನುಭವದ ಆಧಾರದ ಮೇಲೆ ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗುವುದು. ಅವಕಾಶ ವಂಚಿತರು ಅಸಮಾಧಾನಗೊಳ್ಳಬಾರದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎನ್ನಲಾಗಿದೆ.

ನಮ ಮುಂದೆ ಹಲವು ಸವಾಲುಗಳಿದ್ದು, ಒಗ್ಗಟ್ಟಿನಿಂದ ಸರ್ಕಾರವನ್ನು ಮುನ್ನಡೆಸೋಣ. ಎಸ್‌‍ಐಆರ್‌ ವಿಚಾರದಲ್ಲಿ ಜಾಗೃತರಾಗಿ ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟುಹೋಗದಂತೆ ಎಚ್ಚರ ವಹಿಸಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶವಿಟ್ಟುಕೊಂಡು ನಿಮ ಕ್ಷೇತ್ರಗಳಲ್ಲಿ ಕೆಲಸ ಮಾಡಿ. ಅನುದಾನ ಹಂಚಿಕೆಯಲ್ಲಿ ಅಸಮಾಧಾನವಾಗದಂತೆ ಗಮನ ಹರಿಸಲಾಗುವುದು. ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ಧಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES
spot_img

Latest News