ಬೆಂಗಳೂರು,ಸೆ.21- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆಯಾಗುವ ಮುನ್ಸೂಚನೆಗಳಿವೆ.ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿದ್ದು, ಕೆಲವೆಡೆ ಗುಡುಗು-ಮಿಂಚಿನಿಂದ ಕೂಡಿದ ಮಳೆಯಾಗಲಿದೆ.ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಕೆಲವೆಡೆ ಆಗಾಗ್ಗೆ ಹಗುರ ಮಳೆಯಾಗುವ ನಿರೀಕ್ಷೆಯಿದೆ.ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಮೇಲೈ ಗಾಳಿ ಕೆಲವೆಡೆ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಮಳೆ ಚೇತರಿಕೆ ಕಂಡಿದ್ದು ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುತ್ತಿದೆ.
ಮಂಗಳೂರು 29.3 ಮಿ.ಮೀ., ನರಗುಂದ 87.8 ಮಿ.ಮೀ., ಕುಷ್ಟಗಿ 45 ಮಿ.ಮೀ., ಹುಕ್ಕೇರಿ 35 ಮಿ.ಮೀ., ಸಿಂದಗಿ 33 ಮಿ.ಮೀ., ಬೆಂಗಳೂರಿನ ಹೊಸಹಳ್ಳಿ 43.4 ಮಿ.ಮೀ., ಟಿ.ಜಿ.ಹಳ್ಳಿ 30.2 ಮಿ.ಮೀ.ನಷ್ಟು ಮಳೆಯಾಗಿದ್ದು ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.
ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆಗಳಿದ್ದರೂ ಪೂರ್ವಭಾಗದ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ವಿರಳವಾಗಿದೆ. ಇಂದಿನಿಂದ ಸೆ.24 ರವರೆಗೂ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಮುನ್ಸೂಚನೆಗಳಿವೆ. ವಾಯುಭಾರ ಕುಸಿತದ ಚಲನೆ ಮತ್ತು ತೀವ್ರತೆ ಆಧಾರದ ಮೇಲೆ ಮಳೆಯ ಪ್ರಮಾಣ ಅವಲಂಬಿತವಾಗಿದೆ.
ನಿರಂತರ ಒಣಹವೆಯಿಂದಾಗಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳು ಒಣಗುತ್ತಿದ್ದವು. ರಾಜ್ಯದಲ್ಲಿ ಬರದ ಕರಾಳ ಛಾಯೆ ಆವರಿಸಿ ರೈತರು ಕಂಗಾಲಾಗಿದ್ದರು. ಆದರೆ ಅಲ್ಲಲ್ಲಿ ಬೀಳುತ್ತಿರುವ ಅಲ್ಪಸ್ವಲ್ಪ ಮಳೆ ಸದ್ಯಕ್ಕೆ ತಾತ್ಕಾಲಿಕ ಸಮಾಧಾನ ತಂದಿದೆ.
