Homeರಾಜ್ಯಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಹಣ ವಸೂಲಿ : ತೀವ್ರ ಬೇಸರ ವ್ಯಕ್ತಪಡಿಸಿದ ಭಕ್ತರು

ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಹಣ ವಸೂಲಿ : ತೀವ್ರ ಬೇಸರ ವ್ಯಕ್ತಪಡಿಸಿದ ಭಕ್ತರು

ತಿ.ನರಸೀಪುರ ಜು. 27-ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ 2 ಸಾವಿರ ರೂ.ಗಳ ವಿಶೇಷ ಟಿಕೆಟ್‌ ನಿಗದಿಪಡಿಸಿರುವುದು ಹಾಗೂ ಕುಡಿಯುವ ನೀರಿನ ಬಾಟಲಿಗಳ ದರವನ್ನು ಹೆಚ್ಚಿಸಿರುವುದನ್ನು ಖಂಡಿಸಿ, ಕನ್ನಡ ಸೇನೆ ಕರ್ನಾಟಕ ಸಂಘಟನೆಯ ವತಿಯಿಂದ ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಆರ್ಚ್‌ ಬಳಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಮೈಸೂರಿನ ಬಲ್ಲಾಳ್‌ ಸರ್ಕಲ್‌ ಸಮೀಪದ ಪಂಚವಟಿ ಹೋಟೆಲ್‌ನಲ್ಲಿ ನಡೆದ ಸಂಘಟನೆಯ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಕೆ. ರಾಚು, ಆಷಾಢ ಮಾಸದ ಶುಕ್ರವಾರಗಳಂದು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ದೇವಿಯ ದರ್ಶನಕ್ಕೆ 2 ಸಾವಿರ ರೂ.ಗಳ ವಿಶೇಷ ಟಿಕೆಟ್‌ ನಿಗದಿಪಡಿಸಿರುವುದು ಸಾಮಾನ್ಯ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2 ಸಾವಿರ ರೂ.ಗಳನ್ನು ಪಾವತಿಸಿದ ಭಕ್ತರೂ ಸಹ ಗಂಟೆಗಟ್ಟಲೆ ಸರದಿಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮತ್ತೊಂದೆಡೆ ವಿಐಪಿಗಳಿಗೆ ನೇರ ದರ್ಶನದ ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವಯೋವದ್ಧರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ಆರೋಪಿಸಿದರು.

ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ತಾವರೆಕಟ್ಟೆ ಆರ್ಚ್‌ ಬಳಿ ಪ್ರತಿಭಟನೆ ಹಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ಪೂರ್ವಭಾವಿ ಸಭೆಯಲ್ಲಿ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷೆ ಎಂ.ವಿ. ಶೈಲಜಾ, ಗೌರವಾಧ್ಯಕ್ಷೆ ದಾಕ್ಷಾಯಣಿ, ಎಂ. ಮಲ್ಲೇಶ್‌, ಉಪಾಧ್ಯಕ್ಷ ಕಾಳಸ್ವಾಮಿ, ಯಶೋಧ, ದಿವ್ಯ, ಕಾರ್ಮಿಕ ಘಟಕದ ಅಧ್ಯಕ್ಷ ಸಿದ್ದರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಆನಂದ್‌, ಕುಮಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

Latest News