ಬೆಂಗಳೂರು,ಜು.27- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ನಿಯಮಗಳಲ್ಲಿ ಹಠಾತ್ ಪರಿಷ್ಕರಣೆ ಹಾಗೂ ಆದಾಯ ಮಿತಿಯ ಹೊಸ ಗೊಂದಲಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಯೋಜನೆಗಳ ಲಾಭ ಪಡೆಯುತ್ತಿದ್ದ ಫಲಾನುಭವಿಗಳ ಪಟ್ಟಿಯನ್ನು ಕಿರಿದುಗೊಳಿಸುವ ಹಾಗೂ ಕೆಲವು ವರ್ಗಗಳನ್ನು ಪರೋಕ್ಷವಾಗಿ ಅನರ್ಹಗೊಳಿಸುವ ಪ್ರಕ್ರಿಯೆ ಆರಂಭವಾಗಿರುವುದು ಜನಸಾಮಾನ್ಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ (ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಮತ್ತು ಅನ್ನಭಾಗ್ಯ) ವಾರ್ಷಿಕ ವೆಚ್ಚವು ಸಾವಿರಾರು ಕೋಟಿ ರೂಪಾಯಿಗಳನ್ನು ಮೀರಿ ನಿಂತಿದೆ. ಈ ಬೃಹತ್ ಮೊತ್ತದ ನಿರ್ವಹಣೆಗಾಗಿ ಸರ್ಕಾರವು ಅಭಿವೃದ್ಧಿ ಅನುದಾನಗಳಲ್ಲಿ ಹೊಂದಾಣಿಕೆ ಮಾಡುತ್ತಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.
ಆದಾಯ ಮಿತಿ :
ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರವು ವಾರ್ಷಿಕ 3 ಲಕ್ಷ ರೂ. ಆದಾಯದ ಮಿತಿ ನಿಗದಿಪಡಿಸಿದೆ. ಆದರೆ, ಅದೇ ಕಾರ್ಡ್ದಾರರು ಮಾಸಾಶನ (ಪಿಂಚಣಿ) ಪಡೆಯಲು ವಾರ್ಷಿಕ ಆದಾಯ 32 ಸಾವಿರ ರೂ. ಮೀರುವಂತಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಿರುವುದು ಫಲಾನುಭವಿಗಳನ್ನು ತೀವ್ರ ಗೊಂದಲ ಹಾಗೂ ಆತಂಕಕ್ಕೆ ಸಿಲುಕಿಸಿದೆ.ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ನೀಡಲಾಗುವ ಸಾಮಾಜಿಕ ಭದ್ರತಾ ಪಿಂಚಣಿ ಹಣವು ಕೆಲವು ತಿಂಗಳುಗಳಲ್ಲಿ ಕಾಲಕಾಲಕ್ಕೆ ಬಾರದೆ ಸತಾಯಿಸುತ್ತಿರುವುದು ಪಿಂಚಣಿದಾರರ ಕಣ್ಣೀರಿಗೆ ಕಾರಣವಾಗಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮೂಲಸೌಕರ್ಯ ಅಭಿವೃದ್ಧಿ, ರಸ್ತೆ ನಿರ್ಮಾಣ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅನುದಾನದಲ್ಲಿ ಕಡಿತ ಮಾಡಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿವೆ.
ಕಳೆದ ವರ್ಷಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿರೋಧ ಪಕ್ಷಗಳು ನಿರಂತರವಾಗಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಲೇ ಬಂದಿವೆ.ಹಿಂದಿನ ಬಜೆಟ್ ಮಂಡನೆಗಳ ಸಂದರ್ಭದಲ್ಲೂ ಸಹ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಇಲಾಖೆಗಳ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ನೌಕರರು ನಡೆಸಿದ ಪ್ರತಿಭಟನೆಗಳು ಮತ್ತು ಸರ್ಕಾರದ ಮೇಲಿನ ಒತ್ತಡಗಳು ಇಂದಿನ ಆರ್ಥಿಕ ಬಿಕ್ಕಟ್ಟಿನ ಮುನ್ಸೂಚನೆಯನ್ನು ನೀಡಿದ್ದವು.
ಪರಸ್ಪರ ಯೋಜನೆಗಳ ಸಮತೋಲನ ಸಾಧಿಸಲು ಸರ್ಕಾರವು ತೆರಿಗೆ ಸಂಗ್ರಹ ಹೆಚ್ಚಿಸಲು ಮುಂದಾಗಿದ್ದು, ವಿದ್ಯುತ್ ದರ ಪರಿಷ್ಕರಣೆ, ಮುದ್ರಾಂಕ ಶುಲ್ಕ ಹೆಚ್ಚಳ ಹಾಗೂ ಇಂಧನದ ಮೇಲಿನ ತೆರಿಗೆ ಏರಿಕೆಯಂತಹ ನಿರ್ಧಾರಗಳು ನೇರವಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ.
ಚುನಾವಣೆಗೂ ಮುನ್ನ ಯಾವುದೇ ಕಠಿಣ ಮಾನದಂಡಗಳನ್ನು ಹೇರದೆ ಯೋಜನೆಗಳನ್ನು ಜಾರಿಗೆ ತಂದ ಸರ್ಕಾರ, ಈಗ ಆರ್ಥಿಕ ಹೊರೆ ಅಥವಾ ಪರಿಷ್ಕರಣೆಯ ನೆಪದಲ್ಲಿ ಸೌಲಭ್ಯಗಳನ್ನು ಮೊಟಕುಗೊಳಿಸಲು ಮುಂದಾಗಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಆದಾಯ ತೆರಿಗೆ ಪಾವತಿದಾರರು ಮತ್ತು ತುಲನಾತಕವಾಗಿ ಆರ್ಥಿಕವಾಗಿ ಸಬಲರಾಗಿರುವವರನ್ನು ಗುರಿಯಾಗಿಸಿ ಪಟ್ಟಿ ಸಿದ್ಧಪಡಿಸುತ್ತಿದ್ದು, ಇದು ಅಂತಿಮವಾಗಿ ನಿಜವಾದ ಅರ್ಹರ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ.ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಶ್ರೀಸಾಮಾನ್ಯರ ಜೀವನಮಟ್ಟದ ಮೇಲೆ ದೊಡ್ಡ ಪ್ರಭಾವ ಬೀರಿವೆ.
ಫಲಾನುಭವಿಗಳ ವ್ಯಾಪ್ತಿ :
ರಾಜ್ಯದಲ್ಲಿ ಸುಮಾರು 1.74 ಕೋಟಿ ಗೃಹಜ್ಯೋತಿ, 1.28 ಕೋಟಿ ಗೃಹಲಕ್ಷ್ಮಿ, 1.26 ಕೋಟಿ ಅನ್ನಭಾಗ್ಯ ಫಲಾನುಭವಿಗಳಿದ್ದಾರೆ. ಶಕ್ತಿ ಯೋಜನೆಯಡಿ ಕೋಟ್ಯಂತರ ಮಹಿಳೆಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದೆ. ಯುವನಿಧಿ ಯೋಜನೆಯಲ್ಲಿಯೂ ಸಾವಿರಾರು ಯುವಕರು ನೊಂದಾಯಿಸಿಕೊಂಡಿದ್ದಾರೆ. ಪ್ರಸ್ತುತ ಗ್ಯಾರಂಟಿ ಯೋಜನೆಗಳನ್ನು ಶೇ. 50ರಷ್ಟು ಮಿತಿಗೊಳಿಸುವ ಅಥವಾ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಚಿಂತನೆಗಳು ನಡೆಯುತ್ತಿರುವುದು ಫಲಾನುಭವಿಗಳಲ್ಲಿ ಭೀತಿಯನ್ನು ಹುಟ್ಟುಹಾಕಿದೆ.
ಕಾರ್ಮಿಕರ ಬದುಕಿಗೆ ಬರೆ :
ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯ ನಿಯಮಗಳಲ್ಲಿನ ಬದಲಾವಣೆಗಳು ಕೂಲಿ ಕಾರ್ಮಿಕರ ಬದುಕಿಗೆ ಕಂಟಕವಾಗಿ ಪರಿಣಮಿಸಿವೆ.ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಿ, ಕೆರೆ ಹೂಳೆತ್ತುವುದು ಸೇರಿದಂತೆ ಸಾಮೂಹಿಕ ಉದ್ಯೋಗ ಸೃಜನೆಯ ಕಾಮಗಾರಿಗಳನ್ನು ಕೈಬಿಟ್ಟಿರುವುದು ಭೀಕರ ಬರ ಪರಿಸ್ಥಿತಿಯಲ್ಲಿರುವ ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆದಂತಾಗಿದೆ.
ವೈಯಕ್ತಿಕ ಕೆಲಸ ಮಾಡಲು ನಮಗೆ ಹೊಲವೂ ಇಲ್ಲ, ಮನೆಯೂ ಇಲ್ಲ :
ಸಾಮೂಹಿಕ ಕೆಲಸಗಳ ರದ್ದತಿಯಿಂದ ನಮ ಬದುಕು ಬೀದಿಗೆ ಬಂದಿದೆ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.ವಿಶೇಷಚೇತನರು, ವೃದ್ಧರು, ಮನಸ್ವಿನಿ ಸೇರಿದಂತೆ ವಿವಿಧ ಮಾಸಾಶನಗಳನ್ನು ಪಡೆಯುತ್ತಿರುವವರು ಸರ್ಕಾರದ ಈ ನೂತನ ಹಾಗೂ ಅವೈಜ್ಞಾನಿಕ ಮಾನದಂಡಗಳಿಂದ ಸೌಲಭ್ಯ ವಂಚಿತರಾಗುವ ಅಪಾಯ ಎದುರಾಗಿದೆ. ಚುನಾವಣಾ ಪೂರ್ವದಲ್ಲಿ ಜನಪ್ರಿಯತೆಗಾಗಿ ಭರವಸೆಗಳನ್ನು ನೀಡಿ, ಅಧಿಕಾರಕ್ಕೆ ಬಂದ ಮೇಲೆ ಮಾನದಂಡಗಳ ನೆಪದಲ್ಲಿ ಸೌಲಭ್ಯಗಳನ್ನು ಕಡಿತಗೊಳಿಸುತ್ತಿರುವುದು ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಸಿದುಕೊಂಡಂತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
