Homeರಾಜ್ಯಎಸ್‌‍ಐಆರ್‌ ವಿಚಾರಕ್ಕೆ ಕಾಂಗ್ರೆಸ್‌‍-ಬಿಜೆಪಿ ನಡುವೆ ಜಟಾಪಟಿ

ಎಸ್‌‍ಐಆರ್‌ ವಿಚಾರಕ್ಕೆ ಕಾಂಗ್ರೆಸ್‌‍-ಬಿಜೆಪಿ ನಡುವೆ ಜಟಾಪಟಿ

Congress-BJP clash over SIR issue

ಬೆಂಗಳೂರು,ಜೂ. 30-ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌‍ಐಆರ್‌) ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಜಟಾಪಟಿ ಆರಂಭವಾಗಿದೆ.
ನಗರದ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಎಸ್‌‍ಐಆರ್‌ ಕಾರ್ಯದ ವೇಳೆ ಕಾಂಗ್ರೆಸ್‌‍ ಹಾಗೂ ಬಿಜೆಪಿ ಏಜೆಂಟ್‌ಗಳ ನಡುವೆ ಗಲಾಟೆ ನಡೆದಿದೆ.

ಅಧಿಕಾರಿಗಳು ಎಸ್‌‍ಐಆರ್‌ ಕಾರ್ಯ ಆರಂಭಿಸುತ್ತಿದ್ದಂತೆ ಕಾಂಗ್ರೆಸ್‌‍ ಏಜೆಂಟ್‌ಗಳು ಕಾರ್ಯಾಚರಣೆಗೆ ಅಡ್ಡಿಪಡಿಸಿದರು.ಕಾಂಗ್ರೆಸ್‌‍ ಪಕ್ಷವನ್ನು ನಿರ್ಲಕ್ಷಿಸಿ ಬಿಜೆಪಿ ಪ್ರತಿನಿಧಿಗಳೊಂದಿಗೆ ಮಾತ್ರ ಸಭೆ ನಡೆಸಲಾಗಿದೆ ಎಂದು ಕಾಂಗ್ರೆಸ್‌‍ ಮುಖಂಡರು ಆರೋಪಿಸಿದರು.

ಎಸ್‌‍ಐಆರ್‌ ಕಾರ್ಯಕ್ಕೆ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 31 ಬಿಎಲ್‌ಒಗಳು ಹಾಜರಾಗಬೇಕಿದ್ದರೂ, ಕೇವಲ 14 ಮಂದಿ ಮಾತ್ರ ಬಂದಿದ್ದಾರೆ. ಉಳಿದ ಸಿಬ್ಬಂದಿ ಬರುವವರೆಗೆ ಎಸ್‌‍ಐಆರ್‌ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್‌‍ ಏಜೆಂಟ್‌ಗಳು ಪಟ್ಟು ಹಿಡಿದರು.

ಇನ್ನೊಂದೆಡೆ ಬಿಜೆಪಿಯ 11 ಮಂದಿ ಕಾರ್ಯಕರ್ತರು ಹಾಗೂ ಏಜೆಂಟ್‌ಗಳು ಆಗಮಿಸಿ, ಲಭ್ಯವಿರುವ ಸಿಬ್ಬಂದಿಯೊಂದಿಗೆ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿ ಉಂಟಾಗಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಕಾಂಗ್ರೆಸ್‌‍ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರ ನಡುವಿನ ಈ ಜಟಾಪಟಿಯಿಂದ ಎಸ್‌‍ಐಆರ್‌ ಸಿಬ್ಬಂದಿಗಳು ಗೊಂದಲಕ್ಕೀಡಾದರು. ಹೀಗಾಗಿ ಚಾಮರಾಜಪೇಟೆ ಕ್ಷೇತ್ರದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಿಗಧಿತ ಸಮಯಕ್ಕೆ ಆರಂಭವಾಗಲಿಲ್ಲ.ನಂತರ ಹಿರಿಯ ಅಧಿಕಾರಿಗಳು ಉಭಯ ಪಕ್ಷದವರನ್ನು ಸಮಾಧಾನಪಡಿಸಿ ಎಸ್‌‍ಐಆರ್‌ ಪ್ರಕ್ರಿಯೆಗೆ ಚಾಲನೆ ನೀಡಿದರು.

ಅದೇ ರೀತಿ ನಗರದ ಇತರ ಕೆಲ ಪ್ರದೇಶಗಳಲ್ಲೂ ಎಸ್‌‍ಐಆರ್‌ ಆರಂಭದ ವೇಳೆ ಗದ್ದಲಗಳು ನಡೆದಿರುವ ಬಗ್ಗೆ ವರದಿಯಾಗಿವೆ.ಮನೆ ಬಾಗಿಲಿಗೆ ಬಂದ ಬಿಎಲ್‌ಓಗಳು ನೀಡಿದ ಫಾರಂ ಭರ್ತಿ ಮಾಡಲು ಕೆಲವರು ಪರದಾಡಿದ ಘಟನೆಗಳು ನಡೆದಿವೆ.ಇದರ ಜೊತೆಗೆ ರಾಜ್ಯದ ಇತರ ಕೆಲ ಭಾಗಗಳಲ್ಲೂ ಎಸ್‌‍ಐಆರ್‌ ಆರಂಭಕ್ಕೂ ಮುನ್ನ ತಾಂತ್ರಿಕ ದೋಷ ಕಂಡು ಬಂದವು.

RELATED ARTICLES

Latest News