Homeರಾಜ್ಯಅಧಿಕಾರ ಕಚ್ಚಾಟದಲ್ಲಿ ಅಡಗಿ ಹೋದ ಕಾಂಗ್ರೆಸ್‌‍ ಧ್ವನಿ, ಸಮಸ್ಯೆಗಳ ವಿರುದ್ಧ ಹೋರಾಡಲು ವಿಫಲ

ಅಧಿಕಾರ ಕಚ್ಚಾಟದಲ್ಲಿ ಅಡಗಿ ಹೋದ ಕಾಂಗ್ರೆಸ್‌‍ ಧ್ವನಿ, ಸಮಸ್ಯೆಗಳ ವಿರುದ್ಧ ಹೋರಾಡಲು ವಿಫಲ

Congress's voice lost in power struggle

ಬೆಂಗಳೂರು, ಮೇ 15- ನೀಟ್‌ ಪರೀಕ್ಷೆ ರದ್ದು, ಪೆಟ್ರೋಲ್‌, ಡೀಸೆಲ್‌, ಸಿಎನ್‌ಜಿ ಗ್ಯಾಸ್‌‍ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳಿಂದ ಜನ ಬಳಲುತ್ತಿದ್ದರೂ ವಿರೋಧ ಪಕ್ಷವಾದ ಕಾಂಗ್ರೆಸ್‌‍ ಧ್ವನಿ ಎತ್ತದೆ ತನ್ನದೇ ಆದ ವೈಫಲ್ಯಗಳಲ್ಲಿ ಮುಳುಗಿ ಹೋಗಿದೆ.


ರಾಷ್ಟ್ರ ರಾಜಕಾರಣದಲ್ಲಿ ಸೋಲಿನ ಸರಣಿ ಮುಂದುವರೆದಿದ್ದರಿಂದಾಗಿ ಕಾಂಗ್ರೆಸ್‌‍ ಪಕ್ಷ ಧ್ವನಿಯನ್ನೇ ಕಳೆದುಕೊಂಡಂತಾಗಿದೆ. ಅದರಲ್ಲೂ ಜನ ಸಾಮಾನ್ಯರನ್ನು ಬಾಧಿಸುವ ಸಮಸ್ಯೆಗಿಂತಲೂ ಎಸ್‌‍ಐಆರ್‌, ಪೆಗಾಸಿಸ್‌‍, ರಫೇಲ್‌ನಂತಹ ಹೈಟೆಕ್‌ ವಿವಾದಗಳ ಬೆನ್ನು ಹತ್ತಿ ಜನ ಸಾಮಾನ್ಯರನ್ನು ಬಾಧಿಸುವ ವಿಚಾರಗಳನ್ನೇ ಮರೆತಂತಿದೆ.

ದೇಶದಲ್ಲಿ ದಿನಕ್ಕೊಂದು ಬೆಲೆ ಏರಿಕೆ ಜನ ಸಾಮಾನ್ಯರನ್ನು ಕಂಗೆಡುವಂತೆ ಮಾಡುತ್ತಿದೆ. ರಾಜ್ಯದಲ್ಲೂ ವಿದ್ಯುತ್‌, ನೀರು, ಹಾಲು, ಮದ್ಯದ ದರ ಮತ್ತು ಆಸ್ತಿ ತೆರಿಗೆ ಏರಿಸಲಾಗಿದೆ. ಇದು ಜನರನ್ನು ಮತ್ತಷ್ಟು ಹತಾಶರಾಗುವಂತೆ ಮಾಡಿದೆ.

ಕಾಂಗ್ರೆಸ್‌‍ ಸರ್ಕಾರ ಯಾವುದಾದರೂ ಬೆಲೆ ಏರಿಕೆ ಮಾಡಿದರೆ, ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ರಾಜ್ಯಾಧ್ಯಕ್ಷರವರೆಗೂ ಎಲ್ಲರೂ ಅಬ್ಬರಿಸಿ-ಬೊಬ್ಬಿರಿಯುತ್ತಾರೆ. ಈ ಮೂಲಕ ಜನ ಸಾಮಾನ್ಯರ ಸಮಸ್ಯೆಗಳಿಗೆ ಸರ್ಕಾರದ ವೈ ಫಲ್ಯಗಳನ್ನು ಜನರಿಗೆ ಮನವರಿಕೆ ಮಾಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಆದರೆ ಕೇಂದ್ರ ಸರ್ಕಾರದ ಬೆಲೆ ಏರಿಕೆಗಳ ಸಂದರ್ಭದಲ್ಲಿ ಮಾತನಾಡುವವರೇ ಇಲ್ಲವಾಗಿದೆ. 23 ಲಕ್ಷ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಬರೆದು, ವೈದ್ಯಕೀಯ ಶಿಕ್ಷಣ ಪ್ರವೇಶದ ಕನಸಿನೊಂದಿಗೆ ಫಲಿತಾಂಶಕ್ಕಾಗಿ ಕಾದು ಕುಳಿತ್ತಿದ್ದಾಗ ಏಕಾಏಕಿ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ. ಅಷ್ಟೂ ಜನ ವಿದ್ಯಾರ್ಥಿಗಳ ಕನಸ್ಸಿಗೆ ಕೊಳ್ಳಿ ಇಟ್ಟಂತಾಗಿದೆ. ಇದರ ವಿರುದ್ಧ ಎನ್‌ಎಸ್‌‍ಯುಐ ಅಲ್ಲಲ್ಲಿ ಪ್ರತಿಭಟನೆ ಮಾಡಿದ್ದನ್ನು ಬಿಟ್ಟರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪತ್ರಿಕಾ ಹೇಳಿಕೆಗಳ ಮೂಲಕ ತಮ ಆಕ್ರೋಶ ಹೊರ ಹಾಕಿದ್ದಾರೆ.

ನಿನ್ನೆ-ಮೊನ್ನೆ ರಾಜಕೀಯಕ್ಕೆ ಬಂದ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್‌ ವಿಜಯ್‌, ನೀಟ್‌ ಪರೀಕ್ಷೆಯನ್ನೇ ರದ್ದು ಮಾಡಿ ಎಂದು ಒತ್ತಾಯಿಸಿದರು. ಅತೀ ಹೆಚ್ಚು ಮೆಡಿಕಲ್‌ ಕಾಲೇಜುಗಳನ್ನು ಹೊಂದಿರುವ ಕರ್ನಾಟಕದ ರಾಜಕಾರಣಿಗಳು ನೀಟ್‌ ಪರೀಕ್ಷೆಯಿಂದಾಗುತ್ತಿರುವ ಅನ್ಯಾಯದ ಬಗ್ಗೆ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ವಿಜಯ್‌ ಹೇಳಿಕೆಯ ಬಳಿಕ ರಾಜ್ಯದ ನಾಯಕರುಗಳಿಗೆ ಜ್ಞಾನೋದಯವಾದಂತಾಗಿದೆ. ನೀಟ್‌ ಪರೀಕ್ಷೆಯಿಂದ ಅನ್ಯಾಯವಾಗುತ್ತಿದೆ ಎಂದು ಸಣ್ಣದಾಗಿ ಸೊಲ್ಲು ಎತ್ತಿದ್ದಾರೆ.

ಆದರೆ ಕಾಂಗ್ರೆಸ್‌‍ ಪಕ್ಷ ಪತ್ರಿಕಾ ಹೇಳಿಕೆ ನೀಡುವುದನ್ನು ಹೊರತು ಪಡಿಸಿದರೆ ಬೀದಿಗಿಳಿಯುವ ಮನಸ್ಸು ಮಾಡಿಲ್ಲ. ನೀಟ್‌ ಪರೀಕ್ಷೆಯ ಅಕ್ರಮಗಳು ಸಂಪೂರ್ಣ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ಹೊಣೆಗಾರಿಕೆ ವೈಫಲ್ಯವನ್ನು ತೋರಿಸುತ್ತಿದ್ದು, ಉತ್ತರ ನೀಡಲಾಗದೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಪಲಾಯನ ಮಾಡುತ್ತಿದ್ದಾರೆ. ಅಂತಹ ರಾಜಕೀಯ ಸಂದರ್ಭವನ್ನು ಬಳಸಿಕೊಳ್ಳಲಾಗದೆ, ಕಾಂಗ್ರೆಸ್‌‍ ಅವಕಾಶವನ್ನು ಕೈ ಚೆಲ್ಲಿರುವುದಕ್ಕೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ಕಳೆದ ಬಾರಿ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ಏಕಾಏಕಿ 983 ರೂ.ಗಳಷ್ಟು ಹೆಚ್ಚಳ ಮಾಡಿದ್ದಾಗಲೂ ಕಾಂಗ್ರೆಸ್‌‍ ಬೀದಿಗಿಳಿಯಲಿಲ್ಲ. ಸಿಲಿಂಡರ್‌ ಬೆಲೆ ಹೆಚ್ಚಳದ ಪರಿಣಾಮ ಹೋಟೆಲ್‌ಗಳಲ್ಲಿ ತಿಂಡಿ, ಊಟದ ಬೆಲೆ ದುಬಾರಿಯಾಗಿದೆ. ಹೆಚ್ಚುವರಿ ಹಣ ಕೊಡಬೇಕಾದರೆ ಜನರು ಎಂದಿನಂತೆ ಸಿದ್ದರಾಮಯ್ಯ ಸರ್ಕಾರವನ್ನೇ ನಿಂದಿಸುತ್ತಿದ್ದಾರೆ. ಸಿಲಿಂಡರ್‌ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಯಾರಿಗೂ ಅನಿಸುತ್ತಿಲ್ಲ.

ಸಿದ್ದರಾಮಯ್ಯ ಅವರ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಆರ್ಥಿಕವಾಗಿ ದಿವಾಳಿಯಾಗಿದೆ. ಅದಕ್ಕೆ ಹಣ ಕ್ರೊಢೀಕರಿಸಲು ಈ ರೀತಿ ಬೆಲೆ ಹೆಚ್ಚಳ ಮಾಡುತ್ತಿದೆ ಎಂದೇ ಭಾವಿಸುತ್ತಿದ್ದಾರೆ.ರಾಷ್ಟ್ರ ಅಥವಾ ರಾಜ್ಯಗಳ ಕಾಂಗ್ರೆಸ್‌‍ ನಾಯಕರು ಬೆಲೆ ಏರಿಕೆಗಳ ಪರಿಣಾಮಗಳನ್ನು ಮತ್ತು ಹೊಣೆಗಾರಿಕೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಇದೀಗ ಪೆಟ್ರೋಲ್‌, ಡೀಸೆಲ್‌ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಅದರ ಪರಿಣಾಮ ಸಹಜವಾಗಿಯೇ, ಬಸ್‌‍ ಪ್ರಯಾಣ ದರದಿಂದ ಆರಂಭಿಸಿ ಎಲ್ಲಾ ಬೆಲೆಗಳು ಹೆಚ್ಚಳವಾಗಲಿವೆ. ಬಸ್‌‍ ಪ್ರಯಾಣ ದರ ಏರಿಕೆಯಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷಗಳು ಬೀದಿಗಿಳಿಯುವುದು ಶತಸ್ಸಿದ್ಧ. ಮತ್ತೊಮೆ ಸಿದ್ದರಾಮಯ್ಯ ಅವರ ಸರ್ಕಾರವೇ ಅಪರಾಧಿ ಸ್ಥಾನದಲ್ಲಿ ನಿಲ್ಲುವುದು ಅನಿವಾರ್ಯವಾಗುತ್ತದೆ.
ಅಧಿಕಾರ ಹಂಚಿಕೆಯ ಗೊಂದಲ ಕೇವಲ ಆಡಳಿತದ ಮೇಲಷ್ಟೇ ಪರಿಣಾಮ ಬೀರಿಲ್ಲ. ಜನ ಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಬೇಕಿದ್ದ ರಚನಾತಕ ವಿರೋಧ ಪಕ್ಷದ ದೌರ್ಬಲ್ಯಕ್ಕೂ ಸಾಕ್ಷಿಯಾಗಿದೆ.

RELATED ARTICLES

Latest News