Tuesday, April 14, 2026
Homeರಾಜ್ಯಅರ್ಹ ರೈತರಿಗೆ ಖಾತೆ ಮಾಡಿಕೊಡುವಲ್ಲಿ ವಿಳಂಬ : ಅಧಿಕಾರಿಗಳಿಗೆ ರೇವಣ್ಣ ತರಾಟೆ

ಅರ್ಹ ರೈತರಿಗೆ ಖಾತೆ ಮಾಡಿಕೊಡುವಲ್ಲಿ ವಿಳಂಬ : ಅಧಿಕಾರಿಗಳಿಗೆ ರೇವಣ್ಣ ತರಾಟೆ

Delay in providing Khata to eligible farmers: Revanna lashes out at officials

ಹಾಸನ,ಏ.14- ಅರ್ಹ ರೈತರಿಗೆ ಖಾತೆ ಮಾಡಿಕೊಡುವಲ್ಲಿ ವರ್ಷಗಳ ವಿಳಂಬವಾಗುತ್ತಿರುವುದಕ್ಕೆ ಶಾಸಕ ರೇವಣ್ಣ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ನಗರದ ನೂತನ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅರ್ಹ ರೈತರು ಖಾತೆಗಾಗಿ ಅರ್ಜಿ ಸಲ್ಲಿಸಿದರೂ 3-4 ದಶಕಗಳಿಂದ ಕಡತಗಳು ಕಚೇರಿಗಳಲ್ಲೇ ವಿಲೇವಾರಿಯಾಗದೆ ಬಾಕಿ ಉಳಿದಿರುವುದರಿಂದ ರೈತರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಗಿಮುದ್ದೆನಹಳ್ಳಿ ಗ್ರಾಮದಲ್ಲಿ 1990-91ರಲ್ಲಿ ಸರ್ಕಾರದ ಅನುಮತಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಮನೆ ನಿರ್ಮಿಸಿಕೊಂಡವರಿಗೂ ಇಂದಿಗೂ ಖಾತೆ ಮಾಡಿಕೊಟ್ಟಿಲ್ಲ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು, ಱಱಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಲ ಕಳೆಯುವುದೇ ಕೆಲಸವೇ? ಕಂದಾಯ ಇಲಾಖೆ ಕೆಲಸ ಮಾಡುವುದು ಹೇಗೆ? ಎಂದು ಅಧಿಕಾರಿಗಳನ್ನು ಕಟುವಾಗಿ ಪ್ರಶ್ನಿಸಿದರು.

30 ವರ್ಷಗಳಿಂದ ಭೂಸ್ವಾಧೀನ ಮಾಡಿಕೊಂಡು ಕೃಷಿ ಮಾಡುತ್ತಿರುವ ರೈತರಿಗೆ ಖಾತೆ ಮಾಡಿಕೊಡದಿರುವುದೇನು? ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣವೇನು ಎಂದು ಕೇಳಿದ ರೇವಣ್ಣ, ಕೆಲವರಿಗೆ ಇಡುವಳಿ ದಾಖಲೆ ಇದ್ದರೂ ಪಹಣಿ ಇಲ್ಲ ಎಂಬ ಕಾರಣ ನೀಡಿ ಖಾತೆ ಮಾಡಿಕೊಡಲಾಗಿಲ್ಲ ಎಂಬ ಅಧಿಕಾರಿಗಳ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ವರ್ಷ ಇಲಾಖೆ ನಡೆಸುವ ದುರಸ್ತಿ ಹಾಗೂ ಖಾತೆ ಅಭಿಯಾನದ ವೇಳೆ ಅರ್ಹ ರೈತರಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಖಾತೆ ಮಾಡಿಕೊಡಬಹುದಲ್ಲವೇ ಎಂದು ಪ್ರಶ್ನಿಸಿದ ಅವರು, ಸರ್ಕಾರದಿಂದ ಮಂಜೂರಾದ ಭೂಮಿಗೂ ಖಾತೆ ಮಾಡಿಕೊಡಲು ವಿಳಂಬವಾಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯ ವಲ್ಲದೆ ಮತ್ತೇನು ಎಂದು ಹೇಳಿದರು.

ಶಾಂತಿ ಗ್ರಾಮದಲ್ಲಿ ಸಂಬಂಧಪಟ್ಟ ಆರ್‌ಐ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮುಂದಿನ 15 ದಿನಗಳಲ್ಲಿ ಅರ್ಹರಿಗೆ ದಾಖಲೆಗಳನ್ನು ಒದಗಿಸಬೇಕು. ಎಷ್ಟು ಮಂದಿಗೆ ಭೂಮಿ ಇದೆ, ಯಾರಿಗೆ ಖಾತೆ ಮಾಡಬೇಕು, ಅರಣ್ಯ ಪ್ರದೇಶ ಎಷ್ಟು ಇದೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.ಸಭೆಯಲ್ಲಿ ತಹಸಿಲ್ದಾರ್‌ ಗೀತಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News