ಬೆಂಗಳೂರು, ಮೇ 27- ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವವರೆಗೂ ಮುಖ್ಯಮಂತ್ರಿಯ ಹುದ್ದೆಯ ಬಗ್ಗೆ ಚರ್ಚೆ ನಡೆಸುವುದು ಅಪ್ರಸ್ತುತ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬುದು ವದಂತಿ. ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ ಆಕಾಂಕ್ಷಿ ಎಂಬುದು ಕೂಡ ಅಪ್ರಸ್ತುತವಾಗಲಿದೆ ಎಂದರು. ನಾನು ದೆಹಲಿಯಲ್ಲಿ ಯಾರನ್ನೂ ಭೇಟಿ ಮಾಡಿಲ್ಲ, ಯಾವ ಹುದ್ದೆಯನ್ನು ಕೇಳಲಿಲ್ಲ ಎಂದು ಸ್ಪಷ್ಟಪಡಿಸಿದರು. ಹೈಕಮಾಂಡ್‌ನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ವರಿಷ್ಠ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿದರು. ಮೂರ್ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆದಿದೆ. ಅಲ್ಲಿ ಏನು ಚರ್ಚೆಯಾಗಿದೆ ಎಂದು ನಮಗ್ಯಾರಿಗೂ ಮಾಹಿತಿ ಇಲ್ಲ ಎಂದರು.
ಇಂದು ಎಐಸಿಸಿಯ ಪ್ರಧಾನ ಕಾರ್ಯದರ್ಶಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರು ಯಾವ ವಿಷಯ ಹೇಳುತ್ತಾರೆ? ಎಂಬುದರ ಆಧಾರದ ಮೇಲೆ ನಮ ಹಾಗೂ ಎಲ್ಲರ ತೀರ್ಮಾನಗಳು ನಿರ್ಧರಿತವಾಗಲಿವೆ ಎಂದರು.
ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮಾಹಿತಿ ನೀಡಿ, ರಾಜ್ಯಸಭೆ, ವಿಧಾನಪರಿಷತ್ತಿನ ಚುನಾವಣೆಗೆ ಸದಸ್ಯರ ಆಯ್ಕೆ ಕುರಿತು ಮಾತ್ರ ಚರ್ಚೆಯಾಗಿದೆ ಎಂದಿದ್ದಾರೆ. ಅದನ್ನು ಹೊರತು ಪಡಿಸಿ ನಮಗೆ ಬೇರೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಒಳಗೆ ನಡೆದಿರುವ ಚರ್ಚೆಯ ಬಗ್ಗೆ ಮಾಹಿತಿ ಇಲ್ಲದೇ ಏನೇ ಹೇಳಿದರೂ ಅದು ಅನಧಿಕೃತವಾಗಲಿದೆ. ಸುರ್ಜೇವಾಲ ಅವರು ಅಧಿಕೃತವಾಗಿ ಮಾಹಿತಿ ನೀಡುವವರಿಗೂ ಉಳಿದೆಲ್ಲವೂ ವದಂತಿಗಳು ಮಾತ್ರ ಎಂದರು.
ಸಿದ್ದರಾಮಯ್ಯ ಅವರು ಸುಲಭಕ್ಕೆ ಪದತ್ಯಾಗಕ್ಕೆ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂದು ನಾನು ಹೇಗೆ ಹೇಳಲು ಸಾಧ್ಯ. ನಿನ್ನೆ ನಾನು ಅವರ ಜೊತೆ ನಾನೂ ದೆಹಲಿಗೆ ಹೋಗಿಬಂದಿದ್ದೇನೆ. ಆದರೆ ಹೈಕಮಾಂಡ್ ಜೊತೆ ನಡೆದ ಚರ್ಚೆಯ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ನಾಳೆ ಅಥವಾ ನಾಡಿದ್ದು ಸುರ್ಜೇವಾಲ ಅವರೇ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಲಿದ್ದಾರೆ ಎಂದರು.
ಮಾಧ್ಯಮದವರು ನಾನಾ ರೀತಿ ತಿರುಗಿಸಿ, ಮುರುಗಿಸಿ ಪ್ರಶ್ನೆ ಕೇಳಿದರೂ ಪರಮೇಶ್ವರ್ ಅವರು ಯಾವುದೇ ಗುಟ್ಟು ಬಿಟ್ಟುಕೊಡದೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಂದು ಪ್ರಕಟಿಸುವವರೆಗೂ ಎಲ್ಲವೂ ವದಂತಿ ಮಾತ್ರ ಎಂದಿದ್ದಾರೆ.
