ಬೆಂಗಳೂರು, ಮೇ 27- ದೆಹಲಿಯಲ್ಲಿ ವರಿಷ್ಠ ನಾಯಕರ ಜೊತೆಗಿನ ಚರ್ಚೆ ಮತ್ತು ಇತರ ಬೆಳವಣಿಗೆಗಳ ಬಗ್ಗೆ ನಾಳೆ ಮಾತನಾಡುವು ದಾಗಿ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಗೌಪ್ಯತೆ ಕಾಪಾಡಿ ಕೊಂಡಿದ್ದಾರೆ.
ದೇಶದ ಮೊದಲ ಪ್ರಧಾನಿ ಜವಾಹಾರ್‌ಲಾಲ್ ನೆಹರೂ ಅವರ 62ನೇ ಪುಣ್ಯಸರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿದ್ದ ನೆಹರೂ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದರು.
ದೆಹಲಿಯಲ್ಲಿ ನಿನ್ನೆ ನಡೆದಂತಹ ಮ್ಯಾರಥಾನ್ ಸಭೆಯ ಬಗ್ಗೆ ಪ್ರಶ್ನೆ ಎದುರಾದಾಗ, ನಾಳೆ ಮಾತನಾಡುವುದಾಗಿ ಚುಟುಕಾಗಿ ಉತ್ತರಿಸಿ ನಿರ್ಗಮಿಸಿದರು.ದೆಹಲಿ ಭೇಟಿ ಬಳಿಕ ರಾಜ್ಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ ಎಂಬ ಬಗ್ಗೆ ಯಾವುದೇ ಉತ್ತರ ನೀಡದೇ ತಮ ಪಾಡಿಗೆ ತಾವು ತೆರಳಿದರು.
ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ ಅವರು, ಜವಾಹಾರ್‌ಲಾಲ್ ನೆಹರೂ ಅವರನ್ನು ಕೊಂಡಾಡಿದರು. ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿಯಾಗಿ ನೆಹರೂ ಅತ್ಯುತ್ತಮ ಸೇವೆ ಸಲ್ಲಿಸಿದ್ದರು. 17 ವರ್ಷಗಳ ಕಾಲ ಪ್ರಧಾನಿಯಾಗಿ ದೇಶದ ಜನರ ಸೇವೆ ಸಲ್ಲಿಸಿದ್ದಾರೆ. 1964ರ ಮೇ ತಿಂಗಳಿನಲ್ಲಿ ನಿಧನರಾದರು. ಅವರ ಪುಣ್ಯಸರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಕಾಂಗ್ರೆಸ್ ಪಕ್ಷ ವಿಶೇಷವಾಗಿ ನೆಹರೂ ಅವರ ಸರಣೆ ಕೈಗೊಂಡಿದೆ. ನಮ ಸರ್ಕಾರ ಕೂಡ ನೆಹರೂ ಅವರಿಗೆ ಗೌರವ ಸೂಚಿಸುತ್ತಿದೆ ಎಂದು ಹೇಳಿದರು.
ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಅವರ ಪಾತ್ರ ದೊಡ್ಡದು. ಅವರು ಸೋಷಿಯಲಿಸ್ಟ್ ಮತ್ತು ಕ್ಯಾಪಿಟಲ್‌ಲಿಸ್ಟ್ ನಡುವಿನ ಮಿಶ್ರ ಆರ್ಥಿಕತೆಗೆ ಒತ್ತು ನೀಡಿದ್ದರು. ದೊಡ್ಡದೊಡ್ಡ ಉದ್ಯಮಗಳ ಸ್ಥಾಪನೆ, ಆಣೆಕಟ್ಟುಗಳ ನಿರ್ಮಾಣ ಮಾಡಿದ್ದರು. ಶಿಕ್ಷಣ, ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದರು ಎಂದರು.
ದೇಶದ ಜನರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಯಲು ನೆಹರೂ ಅವರು ಕಾರಣ. ಪಂಚವಾರ್ಷಿಕ ಯೋಜನೆ ರೂಪಿಸಿ ದೇಶದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲೇ ನಾವು ನಡೆಯುತ್ತಿದ್ದು, ಅವರ ಆದರ್ಶಗಳು ನಮಗೆ ಮೇಲ್ಪಂಕ್ತಿಯಾಗಿವೆ ಎಂದು ಹೇಳಿದರು.ನೆಹರೂ ಅವರ ಆತಕ್ಕೆ ಚಿರಶಾಂತಿ ಸಿಗಲಿ ಎಂದು ಇದೇ ವೇಳೆ ಪ್ರಾರ್ಥಿಸಿದರು.
