ಬೆಂಗಳೂರು, ಜೂ. 15- ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಜೊತೆಗೆ ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಿ, ಮಧ್ಯಂತರ ಹೊಸ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೂರ್ಣಾವಧಿಯ ಆಯವ್ಯಯ ಮಂಡಿಸಿ ಅಂಗೀಕಾರ ಪಡೆದುಕೊಂಡಿದ್ದಾರೆ. ಅಧಿಕಾರ ಹಂಚಿಕೆಯ ಬಳಿಕ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ಮೊದಲ ದಿನವೇ ಹಲವಾರು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ಅವಧಿ ಕಡಿಮೆ ಇದ್ದು, ಮುಂದಿನ ಎರಡು ವರ್ಷಗಳಲ್ಲಿ ಜನಪರವಾಗಿ ಆಡಳಿತ ನೀಡಿ, ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಬಜೆಜ್ ಮಂಡನೆ ವೇಳೆ ಅಧಿಕಾರ ಹಂಚಿಕೆಯ ಗೊಂದಲಗಳಾಗಿತ್ತು. ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಅಧಿಕಾರ ಬಿಟ್ಟುಕೊಡಬೇಕು. ಬಜೆಟ್ ಮಂಡಿಸಬಾರದು ಎಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದರು ಎಂದು ಹೇಳಲಾಗಿತ್ತು. ಕೆಲ ಸಂದರ್ಭಗಳಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಡಿ.ಕೆ.ಶಿವಕುಮಾರ್ ಔಪಚಾರಿಕ ಸಭೆ ನಡೆಸಿ, ರಾಜ್ಯದ ಹಣಕಾಸಿನ ಸ್ಥಿತಿಯ ಬಗ್ಗೆ ನೇರವಾಗಿ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದ್ದರು.
ಗೊಂದಲಗಳು ಹಾಗೂ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕಾಗಿ ಸಿದ್ದರಾಮಯ್ಯ ಅವರು ಯಾವುದೇ ಹೊಸ ಯೋಜನೆಗಳನ್ನು ಘೋಷಿಸದೆ ಸಪ್ಪೆ ಬಜೆಟ್ ಮಂಡಿಸಿದ್ದರು. ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನ ಒದಗಿಸುವ ಮೂಲಕ ಯಥಾಸ್ಥಿತಿಯ ಹಾಗೂ ಕೊರತೆಯ ಬಜೆಟ್ ಅನ್ನು ಸಿದ್ದರಾಮಯ್ಯ ಅವರು ಮಂಡಿಸಿದಾಗ ಅಚ್ಚರಿ ವ್ಯಕ್ತವಾಗಿತ್ತು. 16 ಆಯವ್ಯಯಗಳನ್ನು ಸಿದ್ಧಪಡಿಸಿದ್ದ ಸಿದ್ದರಾಮಯ್ಯ ಅವರಿಂದ 17ನೇ ಬಜೆಟ್‌ನಲ್ಲಿ ಭಾರೀ ನಿರೀಕ್ಷೆಗಳಿದ್ದವು. ಆದರೆ ಅದೆಲ್ಲವೂ ಹುಸಿಯಾಗಿತ್ತು.
ಇದೇ ರೀತಿ ರಾಜ್ಯದಲ್ಲಿ ನೀರಸವಾದ ಆಡಳಿತ ನಡೆದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾದ ಹಿನ್ನೆಡೆಯಾಗಬಹುದು ಎಂಬ ಎಚ್ಚರಿಕೆಗಳು ಕೇಳಿ ಬರುತ್ತಿವೆ. ಅದಕ್ಕಾಗಿ ಡಿ.ಕೆ.ಶಿವಕುಮಾರ್ ಹೊಸ ಬಜೆಟ್‌ನ ಮೂಲಕ ಜನಪ್ರಿಯ ಯೋಜನೆಗಳ ಮೊರೆ ಹೋಗಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
2028ರ ವಿಧಾನಸಭಾ ಚುನಾವಣೆಯನ್ನು ಗೆಲ್ಲಬೇಕಾದರೆ ಮಹತ್ವಾಕಾಂಕ್ಷೆ ಯೋಜನೆಗಳನ್ನು ಜನರ ಮುಂದಿಡುವುದು ಅನಿವಾರ್ಯವಾಗಿದೆ. ಈಗಾಗಲೇ ಅಸ್ಥಿತ್ವದಲ್ಲಿರುವ ಬಜೆಟ್ ಯೋಜನೆಗಳನ್ನೇ ಮುಂದುವರೆಸಿದರೆ, ಡಿ.ಕೆ.ಶಿವಕುಮಾರ್ ಅವರಿಗೆ 2027-28ನೇ ಸಾಲಿಗೆ ಒಂದು ಪೂರ್ಣಾವಧಿಯ ಬಜೆಟ್ ಮಂಡನೆಗೆ ಮಾತ್ರ ಅವಕಾಶ ಸಿಗುತ್ತದೆ.
2028-29ನೇ ಸಾಲಿನ ಬಜೆಟ್‌ಗೆ ಚುನಾವಣೆಯ ವರ್ಷ ಎದುರಾಗಲಿದ್ದು, ಲೇಖಾನುದಾನ ಮಾತ್ರ ಪಡೆಯಬೇಕಾಗುತ್ತದೆ. ಹೀಗಾಗಿ ಸ್ವಯಂ ಅನುಭವ ಹಾಗೂ ರಾಜ್ಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಅವರು, ಜುಲೈನಲ್ಲಿ ನಡೆಯುವ ಮುಂಗಾರು ಅಧಿವೇಶನದ ವೇಳೆಗೆ ಮತ್ತೊಂದು ಬಜೆಟ್ ಮಂಡಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸ್ತುತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಎರಡು ಸುತ್ತಿನ ಸಭೆ ನಡೆಸಿ, ಇಲಾಖಾವಾರು, ಅಪರ ಮುಖ್ಯಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಮುಖ್ಯಸ್ಥರ ಜೊತೆ ಮೊದಲ ಸುತ್ತಿನ ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಜೊತೆ ಜೂನ್ 13ರಂದು ಎರಡನೇ ಹಂತದ ಸಭೆ ನಡೆಸಿದ್ದಾರೆ.
ಇಂದಿನಿಂದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಗಳನ್ನು ಆರಂಭಿಸಿದ್ದಾರೆ. ಸಂಪುಟದಲ್ಲಿ 13 ಮಂದಿ ಮಾತ್ರ ಸಚಿವರುಗಳಿದ್ದು, ಬಹುತೇಕ ಖಾತೆಗಳು ಸಚಿವ ರಹಿತವಾಗಿವೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರೇ ನೇರವಾಗಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಆರ್ಥಿಕ ಸ್ಥಿತಿಗತಿ ಸಕಾರಾತಕವಾಗಿದೆ ಎಂದಾದರೆ, ಹೊಸ ಬಜೆಟ್ ಮಂಡಿಸಿ ಜನಪ್ರಿಯ ಯೋಜನೆಗಳನ್ನು ಘೋಷಿಸುವುದು ಡಿ.ಕೆ.ಶಿವಕುಮಾರ್ ಅವರ ಇರಾದೆ ಎಂದು ಮೂಲಗಳು ತಿಳಿಸಿವೆ.
