Homeರಾಜ್ಯಜಿಬಿಎ ವ್ಯಾಪ್ತಿಯ ಪಂಚ ಪಾಲಿಕೆಗಳ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ

ಜಿಬಿಎ ವ್ಯಾಪ್ತಿಯ ಪಂಚ ಪಾಲಿಕೆಗಳ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ

Election Commission prepares for elections to five municipalities under GBA

ಬೆಂಗಳೂರು. ಮೇ.6- ಅಂತೂ ಇಂತೂ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವ ಸಾಧ್ಯತೆಗಳು ಕಂಡು ಬರುತ್ತಿವೆ.ಚುನಾವಣೆಗೆ ದಿನಾಂಕ ನಿಗದಿ ಮಾಡುವ ಪ್ರಕ್ರಿಯೆ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ಈ ಕುರಿತಂತೆ ಚರ್ಚಿಸಲು ರಾಜ್ಯ ಚುನಾವಣಾ ಆಯೋಗ ಮೇ 8ರಂದು ಮಹತ್ವದ ಸಭೆ ಕರೆದಿದೆ.

ಜಿಬಿಎ ಕಾಯ್ದೆಯ ಪ್ರಕರಣ 34(4) ಅನ್ವಯ, ಪ್ರಾಧಿಕಾರದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಚುನಾವಣಾ ದಿನಾಂಕ ನಿಗದಿ ಪಡಿಸಬೇಕಿರುವುದರಿಂದ ಮೇ.8 ರಂದು ವಿಧಾನಸೌಧದಲ್ಲಿ ಜಿಬಿಎ ಸದಸ್ಯರ ಸಭೆ ಕರೆಯಲಾಗಿದೆ. ಈಗಾಗಲೇ ವಾರ್ಡ್‌ ವಿಂಗಡಣೆ, ಮೀಸಲಾತಿ ಹಾಗೂ ಅಂತಿಮ ಮತದಾರರ ಪಟ್ಟಿ ಸಿದ್ಧಗೊಂಡಿದ್ದು, ಚುನಾವಣೆಗೆ ಬೇಕಾದ ಪೂರ್ವ
ಸಿದ್ಧತೆಗಳನ್ನು ಆಯೋಗ ಪೂರ್ಣಗೊಳಿಸಿದೆ.

ಸಭೆಗೆ ಸಂಬಂಧಿಸಿದ ಮಾಹಿತಿ ಈಗಾಗಲೇ ಜಿಬಿಎ ಸದಸ್ಯರಿಗೆ ನೀಡಲಾಗಿದೆ.ಒಟ್ಟು 86 ಸದಸ್ಯರನ್ನು ಒಳಗೊಂಡಿರುವ ಜಿಬಿಎ ಸಮಿತಿಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಬಿಎ ಮುಖ್ಯ ಆಯುಕ್ತರು, ಐದು ನಗರಪಾಲಿಕೆ ಆಯುಕ್ತರು, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಶಾಸಕರು, ಲೋಕಸಭಾ ಸದಸ್ಯರು, ವಿಧಾನಪರಿಷತ್‌ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ ಇತರೆ ಅಧಿಕಾರಿಗಳು. ಶಾಸಕರುಸೇರಿದ್ದಾರೆ.

ಸಭೆಯಲ್ಲಿ ಸದಸ್ಯರ ಸಲಹೆ ಮತ್ತು ಮನವಿಗಳನ್ನು ಸ್ವೀಕರಿಸಿದ ನಂತರ, ಚುನಾವಣಾ ದಿನಾಂಕವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಜೂನ್‌ ತಿಂಗಳಲ್ಲಿ ಜಿಬಿಎ ಚುನಾವಣೆಗಾಗಿ ಆಯೋಗ ಎರಡು ದಿನಾಂಕಗಳನ್ನು ನಿಗದಿ ಮಾಡಿಕೊಂಡಿದೆ. ತನ್ನ ನಿರ್ಧಾರವನ್ನು ಸಭೆಯಲ್ಲಿ ಪ್ರಕಟಿಸಿ ಒಪ್ಪಿಗೆ ಪಡೆದ ನಂತರ ಚುನಾವಣಾ ದಿನಾಂಕ ಸ್ಪಷ್ಟವಾಗಲಿದೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ವಾರ್ಡುವಾರು ಮತದಾನ ಕೇಂದ್ರದ ಪಟ್ಟಿಗೆಆಯೋಗದ ಅನುಮೋದನೆ ಪಡೆದು ಪ್ರಚುರ ಪಡಿಸುವ ಪ್ರಸ್ತಾವನೆ, ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಕುರಿತು, ಮತಗಟ್ಟೆ ಸಿಬ್ಬಂದಿ ನೇಮಕ ಮಾಡುವ ಬಗ್ಗೆ, ಮತಗಟ್ಟೆ ಸಿಬ್ಬಂದಿಗಳ ತರಬೇತಿ, ಮತಪೆಟ್ಟಿಗೆಗಳ ಎತ್ತುವಳಿ, ಸಾಗಾಣಿಕೆ, ಸಂಗ್ರಹಣೆ ಸಂಬಂಧ ನೋಡಲ್‌ ಅಧಿಕಾರಿಗಳನ್ನು ನೇಮಕ, ಮಸ್ಟರಿಂಗ್‌‍, ಡಿ-ಮಸ್ಟರಿಂಗ್‌ ಮತ್ತು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪನೆ, ಭದ್ರತಾ ಕೊಠಡಿ ವ್ಯವಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌ ಮತ್ತು ಹೋರ್ಡಿಂಗ್‌ ಹಾಕುವುದನ್ನು ನಿಷೇಧಿಸುವುದು ಹಾಗೂ ಚುನಾವಣಾ ಪ್ರಚಾರಕ್ಕಾಗಿ ಸಭೆ ನಡೆಸಲು ರಾಜಕೀಯ ಪಕ್ಷಗಳಗೆ ಅನುಮತಿ ನೀಡುವ ಬಗ್ಗೆ ಮೇ.8 ರ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ವರದಿಯಾಗಿದೆ.

ಜಿಬಿಎ ಚುನಾವಣೆಗೆ ಮೇ.8 ರಂದು ನಡೆಯುವ ಸಭೆಯಲ್ಲಿ ಅಂತಿಮ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಈಗಾಗಲೇ ಸರ್ಕಾರಕ್ಕೆ 66 ಕೋಟಿ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ನೀಡಲಾಗಿದೆ.ಸುಮಾರು 6 ಸಾವಿರ ಸಿಬ್ಬಂದಿಗಳು ಚುನಾವಣೆ ಕೆಲಸ ಕಾರ್ಯಕ್ಕೆ ನೇಮಿಸಲು ಸಿದ್ದತೆ ನಡೆಸಲಾಗಿದೆ.

ಒಂದು ವೇಳೆ ಸಭೆಯಲ್ಲಿ ಚುನಾವಣೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕತೆ ಮೇ ಮೂರನೇ ವಾರ ಚುನಾವಣೆ ಅಯೋಗ ಜಿಬಿಎ ಚುನಾವಣೆಗೆ ದಿನಾಂಕ ನಿಗದಿಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ. ಅನಿವಾರ್ಯ; ಜೆಡಿಎಸ್‌‍ ಹೊರತುಪಡಿಸಿದರೆ ಬಿಜೆಪಿ ಹಾಗೂ ಕಾಂಗ್ರೆಸ್‌‍ ಮುಖಂಡರುಗಳಿಗೆ ಜಿಬಿಎ ಚುನಾವಣೆ ನಡೆಸುವುದು ಬೇಕಾಗಿಲ್ಲ.

ಹೀಗಾಗಿ ಏನಾದರೂ ನೆಪವೊಡ್ಡಿ ಚುನಾವಣೆ ಮುಂದೂಡುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಜೂ.30ರೊಳಗೆ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಸ್ಪಷ್ಟ ಸೂಚನೆ ನೀಡಿರುವುದರಿಂದ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸುವುದು ಅನಿವಾರ್ಯವಾಗಿದೆ.

ಚುನಾವಣೆ ನಡೆಸಲು ಅಗತ್ಯ ಸಿಬ್ಬಂದಿ ಇಲ್ಲ ಎಂದು ಆಯೋಗ ಸುಪ್ರೀಂ ಕೋರ್ಟ್‌ ಅಫಿಡವಿಟ್‌ ಸಲ್ಲಿಸಿದೆ. ಆದರೆ, ನ್ಯಾಯಾಲಯದಿಂದ ಇದುವರೆಗೂ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಅನಿವಾರ್ಯವಾಗಿ ಚುನಾವಣಾ ಕಾರ್ಯಗಳನ್ನು ಆಯೋಗ ಮುಂದುವರೆಸಬೇಕಿದೆ.

RELATED ARTICLES

Latest News