ಬೆಂಗಳೂರು, ಜು.9- ಒಂದೆರಡು ವಾರದಲ್ಲಿ ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆಯಾಗಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ಣಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಸರ್ಕಾರ ನಡೆಯಲು ಅಧಿಕಾರ ವಿಕೇಂದ್ರೀಕರಣವಾಗಬೇಕು. ಎಲ್ಲರಿಗೂ ಅನುಕೂಲವಾಗಬೇಕೆಂದು ಎಂದರು.
ಕಾಂಗ್ರೆಸ್‌ನವರು ಒಟ್ಟಿಗೆ ಕಾಫಿ ಕುಡಿದರೂ ಪ್ರತ್ಯೇಕ ಸಭೆಯೆಂದು ಬಿಂಬಿಸಲಾಗುತ್ತದೆ. ಒಟ್ಟಾಗಿ ಊಟ ಮಾಡಲು ಯಾವುದಾದರೂ ನಿರ್ಬಂಧವಿದೆಯೇ? ಮಲ್ಲಿಕಾರ್ಜುನ
ಖರ್ಗೆಯವರು ನನ್ನ ತಂದೆ. ದೆಹಲಿಗೆ ಹೋದಾಗ ನಾನು ಮನೆಗೆ ಹೋದರೆ, ಪ್ರಿಯಾಂಕ ಖರ್ಗೆಯಿಂದ ಎಐಸಿಸಿ ಅಧ್ಯಕ್ಷರ ಭೇಟಿ ಎಂದು ವರದಿ ಪ್ರಕಟವಾಗುತ್ತದೆ. ನಾನು ವಾಸವಿರುವುದು ಅವರ ಮನೆಯಲ್ಲೇ. ಈ ರೀತಿಯ ಸುದ್ದಿಗಳಿಗೆ ಏನೆಂದು ಸ್ಪಷ್ಟನೆ ನೀಡಬೇಕು ಎಂದರು.
ಜಾಗತಿಕ ಹೂಡಿಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಥಾಪಿಸುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಇದು ಎನ್‌ಐಆರ್‌ಗೆ ಸಂಬಂಧಪಟ್ಟ ವಿಷಯ ಅಲ್ಲ. ಬಂಡವಾಳ ಹೂಡಿಕೆ, ಉದ್ಯೋಗವಕಾಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸದ್ಯಕ್ಕೆ ಈ ವಿಚಾರಗಳನ್ನು ಬೇರೆ ಬೇರೆ ಇಲಾಖೆಗಳು ನಿರ್ವಹಣೆ ಮಾಡುತ್ತಿವೆ. ಹೊಸ ಇಲಾಖೆ ರಚಿಸುವುದರಿಂದ ಯಾವುದೇ ಇಲಾಖೆ ಅಧಿಕಾರ ವ್ಯಾಪ್ತಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಶಿಷ್ಟಾಚಾರ ಮತ್ತು ನೀತಿಗಳಿಗೂ ತೊಂದರೆಯಾಗದಂತೆ ಮತ್ತು ಗಡಿ ರೇಖೆ ಮೀರದಂತೆ ಇಲಾಖೆ ರೂಪಿಸಬೇಕು ಎಂದರು.
ಕೃಷಿಸಾಲ ಮನ್ನಾ ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣ ಕೊಡಿಸಲಿ, ಪ್ರಧಾನಮಂತ್ರಿಯವರು ಈ ಬಗ್ಗೆ ಗಮನ ಹರಿಸಿ ರಾಷ್ಟ್ರ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಿ ಎಂದರು.
ವಿಬಿಜಿ-ರಾಮ್‌ಜಿ ಯೋಜನೆಗೂ ರಾಜ್ಯ ಸರ್ಕಾರವೇ ಹಣ ಕೊಡಬೇಕು. ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೂ ರಾಜ್ಯ ಪಾಲುದಾರರಾಗಬೇಕು, ಸಾಲ ಮನ್ನಾವನ್ನು ರಾಜ್ಯವೇ ಮಾಡಬೇಕು. ಹಾಗಿದ್ದರೆ ಕೇಂದ್ರ ಸರ್ಕಾರದ ಜವಾಬ್ದಾರಿ ಏನು? ಎಂದರು.
ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಲು ಒತ್ತಾಯಿಸಲಾಯಿತು. ನಾವು ನೋಟು ಮುದ್ರಿಸುವ ಯಂತ್ರ ಇಟ್ಟಿಲ್ಲ ಎಂದು ಯಡಿಯೂರಪ್ಪ ಪ್ರತ್ಯುತ್ತರಿಸಿದ್ದರು. ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಬೇಕಿದೆ ಎಂದು ಅವರು ಆಗ್ರಹಿಸಿದ್ದಲ್ಲದೇ, ರೈತರ ಸಾಲ ಮನ್ನಾಗೆ ದೆಹಲಿಗೆ ಹೋಗಿ ಪ್ರಧಾನಿಯವರ ಮೇಲೆ ಬಿಜೆಪಿಯವರು ಒತ್ತಡ ಹಾಕಲಿ. ಕೇವಲ ಮನ್‌ಕೀಬಾತ್ ಕೇಳಿಕೊಂಡು ಕುಳಿತುಕೊಳ್ಳಬೇಡಿ ಎಂದರು.
ರಾಜ್ಯದಲ್ಲಿ ನಡೆದಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಜಾರಿಗೊಳಿಸಬೇಕೆಂದು ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ. ಉಪದೇಶ ಮಾಡುವುದನ್ನು ಬಿಟ್ಟು, ಬಿಜೆಪಿಯ ಆಡಳಿತದಲ್ಲಿರುವ ರಾಜ್ಯಗಳಲ್ಲೂ ಸಮೀಕ್ಷೆ ಮಾಡಲಿ ಎಂದು ಸವಾಲು ಹಾಕಿದರು.
ಎಂಇಎಸ್‌ಗೆ ಮಹಾರಾಷ್ಟ್ರ ಸರ್ಕಾರ ಬೆಂಬಲ ನೀಡುವುದಕ್ಕೆ ತೀವ್ರ ಅಸಮಾಧಾನ ಪಡಿಸಿದ ಅವರು, ರಾಜ್ಯದ ನೆಲ, ಜಲ, ಭಾಷೆಯ ವಿಚಾರದಲ್ಲಿ ಸೂಕ್ಷ್ಮತೆಯಿಂದಿರಬೇಕು ಎಂದರು.
