Homeರಾಜ್ಯಜಿಲೆಟಿನ್‌ ಕಡ್ಡಿ ಪ್ರಕರಣ : ಆರೋಪಿಗಳ ಬಗ್ಗೆ ಸಣ್ಣ ಸುಳಿವೂ ಇಲ್ಲ

ಜಿಲೆಟಿನ್‌ ಕಡ್ಡಿ ಪ್ರಕರಣ : ಆರೋಪಿಗಳ ಬಗ್ಗೆ ಸಣ್ಣ ಸುಳಿವೂ ಇಲ್ಲ

Gelatin stick case: Not a single clue about the accused

ಬೆಂಗಳೂರು,ಮೇ 16-ಒಂದು ವಾರ ಸಮೀಪಿಸುತ್ತಿದ್ದರೂ ಕಗ್ಗಲಿಪುರದ ತಾತಗುಣಿ ಬಳಿಯ ಒಡೆಯರಹಳ್ಳಿ ಗೇಟ್‌ ಸಮೀಪ ಜಿಲೆಟಿನ್‌ ಕಡ್ಡಿ ಇಟ್ಟು ಪರಾರಿಯಾಗಿರುವ ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವೇ ಸಿಕ್ಕಿಲ್ಲ.

ರಾಮನಗರ ಉಪವಿಭಾಗದ ಡಿವೈಎಸ್‌‍ಪಿ ನೇತೃತ್ವದಲ್ಲಿ ರಚಿಸಲಾಗಿರುವ ನಾಲ್ಕು ತಂಡಗಳು ಕಳೆದ ಒಂದು ವಾರದಿಂದಲೂ ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸುತ್ತಿವೆಯಾದರೂ ಯಾವುದೇ ಪ್ರಯೋಜನವಾಗಿಲ್ಲ.ಒಂದು ತಂಡ ತಮಿಳುನಾಡಿಗೆ, ಮತ್ತೊಂದು ತಂಡ ಆಂಧ್ರಪ್ರದೇಶಕ್ಕೂ ಹೋಗಿತ್ತಾದರೂ ಬರಿಗೈಯಲ್ಲಿ ವಾಪಸ್‌‍ ಆಗಿವೆ.

ಕನಕಪುರ ರಸ್ತೆ ಬದಿಯ ಸುಮಾರು 200ಕ್ಕೂ ಸಿಸಿ ಕ್ಯಾಮೆರಾಗಳ ಪರಿಶೀಲನೆ ಹಾಗೂ 150 ಕ್ಕೂ ಹೆಚ್ಚು ಸ್ಥಳೀಯರನ್ನು ವಿಚಾರಣೆ ನಡೆಸಿದ್ದರಾದರೂ ಆರೋಪಿಗಳ ಬಗ್ಗೆ ಒಂದು ಸಣ್ಣ ಸುಳಿವೂ ಕೂಡ ಪೊಲೀಸರಿಗೆ ಸಿಕ್ಕಿಲ್ಲ.

ಮತ್ತೊಂದು ಮಾಹಿತಿ ಪ್ರಕಾರ, ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಮೇಲಿನ ದ್ವೇಷದಿಂದ ಪ್ರಧಾನಿಯವರು ಈ ಆಶ್ರಮಕ್ಕೆ ಬರಬಾರದೆಂಬ ಉದ್ದೇಶದಿಂದ ಜಿಲೆಟಿನ್‌ ಕಡ್ಡಿ ಇಟ್ಟಿರಬಹುದೆಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಆ ನಿಟ್ಟಿನಲ್ಲಿಯೂ ತನಿಖೆ ಮುಂದುವರೆಸಿದ್ದಾರೆ.
ಆರ್ಟ್‌ ಆಫ್‌ ಲಿವಿಂಗ್‌ ಸುತ್ತಮುತ್ತಲಿನ ಜಮೀನನ್ನು ರೈತರಿಂದ ಬಲವಂತವಾಗಿ ಪಡೆದುಕೊಳ್ಳಲಾಗಿದೆ ಎಂಬ ಆರೋಪವಿದ್ದು, ಆ ದ್ವೇಷಕ್ಕೆ ಜಿಲೆಟಿನ್‌ ಕಡ್ಡಿ ಇಡಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳದಲ್ಲಿ ಪತ್ತೆಯಾಗಿರುವ ಜಿಲೆಟಿನ್‌ ಕಡ್ಡಿ ಸುಮಾರು ಎರಡು-ಮೂರು ವರ್ಷದ ಹಳೆಯದು ಎಂಬುವುದು ಎಫ್‌ಎಸ್‌‍ಎಲ್‌ ವರದಿಯಿಂದ ಗೊತ್ತಾಗಿದ್ದು, ಒಂದು ವೇಳೆ ಈ ಕಡ್ಡಿ ಸ್ಫೋಟವಾಗಿದ್ದರೂ ಸಹ ಹೆಚ್ಚಿನ ಅಪಾಯವಾಗುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.

ಅಂದು ಕರ್ತವ್ಯದಲ್ಲಿದ್ದ ಪೊಲೀಸರು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಗೆ ಪ್ರಧಾನಿ ಮೋದಿ ಅವರು ಬರುವ 2 ಗಂಟೆ ಮೊದಲೇ ಜಿಲೆಟಿನ್‌ ಕಡ್ಡಿ ಪತ್ತೆಹಚ್ಚಿರುವುದು ಸಮಾಧಾನದ ಸಂಗತಿ. ಆದರೂ ಸಹ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.ಒಟ್ಟಾರೆ ಈ ಪ್ರಕರಣ ಪೊಲೀಸರ ಮುಂದೆ ದೊಡ್ಡ ಸವಾಲಾಗಿ ನಿಂತಿದೆ.

RELATED ARTICLES

Latest News