ಬೆಂಗಳೂರು, ಮೇ. 16- ನಗರದಲ್ಲಿ ನಕಲಿ ಓಸಿ ಮತ್ತು ಸಿಸಿ ಹಂಚಿಕೆ ಹಗರಣದಲ್ಲಿ ಸುಮಾರು 40 ಸಾವಿರ ಕೋಟಿ ರೂ.ಗಳ ವಂಚನೆ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಹಗರಣದಲ್ಲಿ ಭಾಗಿಯಾಗಿರುವವರನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಇಡಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಮಹಾನಗರದಲ್ಲಿ ಕಳೆದ 16 ವರ್ಷಗಳಲ್ಲಿ ನಿರ್ಮಾಣಗೊಂಡಿರುವ ಬೃಹತ್ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಶೇ.95 ಕ್ಕೂ ಹೆಚ್ಚು ಕಟ್ಟಡಗಳಿಗೆ ನಕಲಿ ಓಸಿ ಮತ್ತು ಸಿಸಿ ನೀಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.ಈ ಪ್ರಕರಣದಲ್ಲಿ ಸುಮಾರು 40 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಮತ್ತು ಸುಮಾರು 22 ಲಕ್ಷ ಗ್ರಾಹಕರ ವಂಚನೆ ನಡೆದಿದೆ ಎಂದು ಅವರು ಲೋಕಯುಕ್ತ ಹಾಗೂ ಇಡಿಗೆ ದೂರು ನೀಡಿದ್ದಾರೆ.
ಪಾಲಿಕೆಯ ನಗರ ಯೋಜನೆ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಕಳೆದ 16 ವರ್ಷಗಳಲ್ಲಿ ಕೇವಲ 4,381 ಸಿಸಿ ಹಾಗೂ 4,587ಕಟ್ಟಡಗಳಿಗೆ ಓಸಿ ಮಾತ್ರ ನೀಡಲಾಗಿದೆ. ಆದರೆ ಇದೇ ಅವಧಿಯಲ್ಲಿ 71,169 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗಿದೆ ಎಂದು ಹೇಳಲಾಗಿದೆ.ಇದಕ್ಕೆ ವಿರುದ್ಧವಾಗಿ, ಕ್ರೆಡೈ ಮತ್ತು ಬ್ರಾಯ್ ಸಂಸ್ಥೆಯ ಸದಸ್ಯರಾಗಿರುವ 437 ಬಿಲ್ಡರ್ ಸಂಸ್ಥೆಗಳು ಮಾತ್ರವೇ 50 ಕ್ಕೂ ಹೆಚ್ಚು ಯೂನಿಟ್‌ಗಳನ್ನು ಹೊಂದಿರುವ ಸುಮಾರು 25 ಸಾವಿರಕ್ಕೂ ಅಧಿಕ ವಸತಿ ಸಂಕೀರ್ಣಗಳನ್ನು ನಿರ್ಮಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವಸತಿ ಸಂಕೀರ್ಣಗಳಲ್ಲಿ ಅಂದಾಜು 22 ಲಕ್ಷ ಫ್ಲಾಟ್‌ಗಳಿದ್ದು, ಬಹುತೇಕ ಗ್ರಾಹಕರು ನಕಲಿ ದಾಖಲೆಗಳ ಆಧಾರದಲ್ಲಿ ಫ್ಲಾಟ್ ಖರೀದಿಸಿ ಮೋಸಕ್ಕೊಳಗಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು ವ್ಯಾಪ್ತಿಯಲ್ಲಿ 98 ಟೆಕ್ ಪಾರ್ಕ್‌ಗಳು, 3,876 ಐಟಿ ಕಂಪನಿಗಳು, 103 ಬಿಟಿ ಕಂಪನಿಗಳು, 4,500 ಕ್ಕೂ ಹೆಚ್ಚು ವಾಣಿಜ್ಯ ಸಂಕೀರ್ಣಗಳು, 217 ಮಾಲ್ ಮತ್ತು ಮಲ್ಟಿಪ್ಲೆಕ್‌್ಸಗಳು, 1.10 ಲಕ್ಷ ಕೈಗಾರಿಕಾ ಕಟ್ಟಡಗಳು, 540 ಸ್ಟಾರ್ ಹೋಟೆಲ್‌ಗಳು, 2,850 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ 1,350 ಕಲ್ಯಾಣ ಮಂಟಪಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿಯೂ ಬಹುಪಾಲು ಕಟ್ಟಡಗಳಿಗೆ ನಕಲಿ ಓಸಿ ನೀಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ನಗರ ಯೋಜನೆ ಇಲಾಖೆಯ ಅಧಿಕಾರಿಗಳು ಹಾಗೂ ಬಿಲ್ಡರ್ ಮಾಫಿಯಾ ನಡುವೆ ಶಾಮೀಲಾತಿ ನಡೆದು, ಕಾನೂನುಬದ್ಧ ಶುಲ್ಕದ ಬದಲು ಅದರ ಶೇ.25 ರಷ್ಟು ಹಣವನ್ನು ಲಂಚ ರೂಪದಲ್ಲಿ ಪಡೆದು ನಕಲಿ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕಾರಣದಿಂದ ಬಿಬಿಎಂಪಿ/ಜಿಬಿಎಗೆ ಕಳೆದ 16 ವರ್ಷಗಳಲ್ಲಿ 40 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಆದಾಯ ನಷ್ಟವಾಗಿದೆ ಎಂದು ಅವರು ದೂರಿದ್ದಾರೆ.
2017-18 ರಲ್ಲಿ ರಾಜರಾಜೇಶ್ವರಿ ನಗರ ವಲಯದಲ್ಲಿ ನಕಲಿ ಓಸಿ, ಸಿಸಿ ಮುದ್ರಣ ಪ್ರಕರಣದಲ್ಲಿ ಆರು ಮಂದಿ ಪಾಲಿಕೆ ನೌಕರರನ್ನು ಪೊಲೀಸರು ಬಂಧಿಸಿದ್ದರು ಎಂಬುದನ್ನೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಗರ ಯೋಜನೆ ಇಲಾಖೆಯಲ್ಲಿ ಹುದ್ದೆಗಳಿಗೆ ಲಕ್ಷಾಂತರ ರೂ. ಲಂಚ ನೀಡಿ ನೇಮಕವಾಗುವ ಅಧಿಕಾರಿಗಳು ಬಳಿಕ ಅಕ್ರಮ ಮಾರ್ಗದಲ್ಲಿ ಅಪಾರ ಆಸ್ತಿ ಸಂಪಾದಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ.
ಈ ಸಂಬಂಧ 255 ಮಂದಿ ಅಧಿಕಾರಿಗಳು ಹಾಗೂ ಕ್ರೆಡೈ ಮತ್ತು ಬ್ರಾಯ್‌ಗೆ ಸೇರಿದ 437 ಬಿಲ್ಡರ್‌ಗಳ ವಿರುದ್ಧ 9,700 ಪುಟಗಳ ದಾಖಲೆಗಳೊಂದಿಗೆ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.ಜೊತೆಗೆ, ಈ ಹಗರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ ಅವರು ತಿಳಿಸಿದ್ದಾರೆ.
